'ರಾಹುಲ್ ಪ್ರವಾಸದಿಂದ ಬಿಜೆಪಿಗೆ ಅನುಕೂಲ'
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಭಾರತ್ ಜೋಡೋ ಯಾತ್ರೆ ಮಾಡಲು ಬಂದಿದ್ದಾರೋ ಅಥವಾ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೋಡಿಸಲು ಬಂದಿದ್ದಾರೋ ಗೊತ್ತಿಲ್ಲ ಎಂದು ಸಚಿವ ಬೈರತಿ ಬಸವರಾಜು ವ್ಯಂಗ್ಯ
ತುಮಕೂರು (ಅ.04): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಭಾರತ್ ಜೋಡೋ ಯಾತ್ರೆ ಮಾಡಲು ಬಂದಿದ್ದಾರೋ ಅಥವಾ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೋಡಿಸಲು ಬಂದಿದ್ದಾರೋ ಗೊತ್ತಿಲ್ಲ ಎಂದು ಸಚಿವ ಬೈರತಿ ಬಸವರಾಜು ವ್ಯಂಗ್ಯವಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ (Rahul Gandhi) ಅವರು ಎಲ್ಲೆಲ್ಲಿ ಓಡಾಟ ಮಾಡುತ್ತಾರೋ ಅಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಅನೇಕ ಭಾಗ್ಯಗಳನ್ನು ಘೋಷಿಸಿದ್ದರು, ಪಕ್ಷ ಅಧಿಕಾರಕ್ಕೆ ಬರಲಿಲ್ಲ ಈಗಲೂ ಅದೇ ಆಗಲಿದೆ. ರಾಹುಲ್‌ಗಾಂಧಿ ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್ (COngress) ಪಕ್ಷಕ್ಕೆ ಅನುಕೂಲವಾಗುವುದಿಲ್ಲ. ಬದಲಾಗಿ ಬಿಜೆಪಿಗೆ ಲಾಭವಾಗಲಿದೆ. ರಾಹುಲ್‌ಗಾಂಧಿ ಮತ್ತು ಅವರ ತಾಯಿ ಇಬ್ಬರೂ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದರು.
ಬಿಜೆಪಿ (BJP) ಪಕ್ಷದ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರಿಗೆ ಆ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಅವರ ಭ್ರಷ್ಟಾಚಾರ ನೆನಪಿಲ್ಲವೇ ಎಂದು ಅವರು ಪ್ರಶ್ನಿಸಿದರು.
ರಾಜ್ಯ ಗುತ್ತಿಗೆದಾರರ ಸಂಘದ ಕೆಂಪಣ್ಣ ಅವರಿಗೆ ಯಾವುದೇ ರೀತಿಯ ಗುತ್ತಿಗೆದಾರರ ಲೈಸೆನ್ಸ್ ಇಲ್ಲ, ಅವರು ಗುತ್ತಿಗೆದಾರರೇ ಅಲ್ಲ, ಅವರು ಯಾವುದೇ ಕಾಮಗಾರಿಯ ಗುತ್ತಿಗೆಯನ್ನೇ ಪಡೆದಿಲ್ಲ, ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಅವರ ಮೂಲಕ ಹೇಳಿಕೆ ನೀಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪಗೆ ಕ್ಲೀನ್ ಚೀಟ್ ಕೊಡಲಾಗಿದೆ. ಅನೇಕ ಕಾಂಗ್ರೆಸ್ ಮುಖಂಡರಿಗೂ ತನಿಖಾ ಸಂಸ್ಥೆಗಳು ಕ್ಲೀನ್ ಚೀಟ್ ನೀಡಿವೆ. ಹೆರಾಲ್ಡ್ ಹಗರಣದಲ್ಲಿ ಕೋರ್ಚ್‌ಗೆ ಹೋಗಿ ಬಂದವರು ಯಾರು ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ಬಿಜೆಪಿ ಹಿಂದುಳಿದ ವರ್ಗಗ ವಿಭಾಗದ ಮುಖಂಡರಾದ ಎಂ.ಡಿ. ಲಕ್ಷ್ಮೀನಾರಾಯಣ್, ಅಂಬಿಕಾ ಹುಲಿನಾಯ್ಕರ್, ಶಂಕರಪ್ಪ, ಟಿ.ಆರ್. ಸದಾಶಿವಯ್ಯ, ಕೆ.ಪಿ. ಮಹೇಶ್, ಬೆಟ್ಟಸ್ವಾಮಿ, ವೇದಮೂರ್ತಿ, ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.
ಮೀಸಲಾತಿ ಬಗ್ಗೆ ಅನೇಕ ಸಮುದಾಯಗಳು ಧ್ವನಿ ಎತ್ತಿವೆ. ಕಾನೂನಾತ್ಮಕವಾಗಿ ಮೀಸಲಾತಿ ನೀಡುವ ಬಗ್ಗೆ ಸರ್ವ ಪಕ್ಷಗಳ ಸಭೆ ಕರೆದಿದ್ದು, ಎಲ್ಲವನ್ನು ಕೂಲಂಕಷವಾಗಿ ಚರ್ಚಿಸಿ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಅನೇಕ ಮುಖಂಡರು ಹಾಗೂ ರಾಜಕಾರಣಿಗಳು ಬಿಜೆಪಿಗೆ ಬರಲಿದ್ದಾರೆ. ದೇಶದಲ್ಲಿ ಬಲಿಷ್ಠವಾಗಿರುವ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಕಾಂಗ್ರೆಸ್ ಪಕ್ಷ ಮುಖಂಡರನ್ನು ಸರಿಯಾಗಿ ನಡೆಸಿಕೊಂಡಿದ್ದರೆ ಯಾರೂ ಪಕ್ಷ ಬಿಡುತ್ತಿರಲಿಲ್ಲ ಎಂದರು.
ಅವರು ಕಾಲಿಟ್ಟಲೆಲ್ಲ ಕಮಲ ಅರಳಲಿದೆ
ಬೆಳಗಾವಿ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ರಾಜ್ಯ ಭೇಟಿಯನ್ನು ಅಣಕಿಸಿದ್ದಾರೆ. ಸೋನಿಯಾ ಗಾಂಧಿ ಹಾಗೂ ಪ್ರಿಯಂಕಾ ವಾದ್ರಾ ಅವರಿಗೆ ರಾಜ್ಯಕ್ಕೆ ಸ್ವಾಗತ. ಅವರು ಎಲ್ಲೆಲ್ಲಿ ಕಾಲು ಇಟ್ಟಿದ್ದಾರೆ, ಅಲ್ಲಲ್ಲಿ ಕಮಲ ಅರಳಿದೆ, ಅವರನ್ನು ನಾನು ಸ್ವಾಗತಿಸುತ್ತೇನೆ ಎಂದು ಕೇಂದ್ರ ಕಾಂಗ್ರೆಸ್ ನಾಯಕರ ವಿರುದ್ಧ ಸವದಿ ಲೇವಡಿಯಾಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ನೇತೃತ್ವ ಕಳೆದುಕೊಂಡಿದೆ. ಭಾರತ ಜೋಡೋ ಅಲ್ಲ ಕಾಂಗ್ರೆಸ್ ಸಿದ್ದರಾಮಯ್ಯ ಡಿಕೆ ಜೋಡೋ ಕಾರ್ಯಕ್ರಮ ಇದಾಗಿದೆ ಎನ್ನುವ ಮೂಲಕ ರಾಹುಲ್ ಗಾಂಧಿ ಭಾರತ ಜೋಡೋ ಕಾಂಗ್ರೆಸ್ ಅಭಿಯಾನ ಪಾದಯಾತ್ರೆಯ ಕಾಲೆಳೆದಿದ್ದಾರೆ. ಭಾರತ ಜೋಡೋ ಎನ್ನುವುದಕ್ಕೆ, ಭಾರತ ಒಡದಿಲ್ಲ. ಅವತ್ತಿನ ವಲ್ಲಭಬಾಯಿ ಪಟೇಲ್ ಅವರಿಗೆ ಧನ್ಯವಾದ ಸಲ್ಲಿಸಬೇಕು. ಅವತ್ತಿನ ಹಲವು ರಾಜರ ಪ್ರಾಂತ್ಯಗಳನ್ನು ಒಗ್ಗೂಡಿಸಿದ ವಲ್ಲಭಬಾಯಿ ಪಟೇಲ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಕಾಂಗ್ರೆಸ್ ನವರು ಯಾಕೆ ಭಾರತ ಜೋಡೊ ಮಾಡುತ್ತಿದ್ದಾರೆ, ಎಲ್ಲಿ ಭಾರತ ಒಡೆದಿದೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಹವಾಮಾನ ವೈಪರಿತ್ಯ, ಆರೋಗ್ಯ ಸಮಸ್ಯೆ: Sonia Gandhi ಕೊಡಗು ಪ್ರವಾಸ ರದ್ದು, ಮೈಸೂರಿನಲ್ಲೇ ವಾಸ್ತವ್ಯ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಮಾತನಾಡಿದ ಲಕ್ಷ್ಮಣ್ ಸವದಿ ಕಾಂಗ್ರೆಸ್ ಪಾದಯಾತ್ರೆಯ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಇಂದು ಸೋನಿಯಾ ಗಾಂಧಿ ವಿಮಾನದ ಮೂಲಕ ಮೈಸೂರಿಗೆ ಬಂದು ತಲುಪಿದ್ದಾರೆ. ಭಾರತ ಐಕ್ಯತಾ ಯಾತ್ರೆಯಲ್ಲಿ ಸೋನಿಯಾ ಮತ್ತು ಪ್ರಿಯಾಂಕ ಭಾಗಿಯಾಗುತ್ತಿರುವ ಕುರಿತು ಪ್ರಶ್ನಿಸಿದಾಗ ಪ್ರತಿಕ್ರಿಯೆ ನೀಡಿದ ಸವದಿ, ಅವರನ್ನು ಸ್ವಾಗತಿಸುತ್ತೇನೆ. ಅವರು ಕಾಲಿಟ್ಟರೆ ಕಮಲ ಅರಳುತ್ತದೆ ಎಂದಿದ್ದಾರೆ. ಜತೆಗೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರನ್ನೂ ಜೋಡೊ ಮಾಡುವ ಯತ್ನಕ್ಕೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಯತ್ನಿಸುತ್ತಿದ್ದಾರೆ ಎಂದಿದ್ದಾರೆ.