ಬಾಗಲಕೋಟೆ(ಏ.30): ಬೇರೆ ಜಿಲ್ಲೆಗಳಿಂದ ಕಳುಹಿಸಲಾಗುತ್ತಿರುವ ಜಿಲ್ಲೆಯ ಕಾರ್ಮಿಕರನ್ನು ಕಡ್ಡಾಯವಾಗಿ ಕ್ವಾರಂಟೈನ್‌ ಮಾಡಿ ಅವರ ಮನೆಗಳಿಗೆ ಸ್ಟಿಕರ್‌ ಅಂಟಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ತಿಳಿ​ಸಿ​ದ್ದಾರೆ. 

ಜಿಲ್ಲಾಧಿ​ಕಾರಿಗಳ ಸಭಾಂಗಣದಲ್ಲಿ ಬುಧ​ವಾರ ಕೋವಿಡ್‌ ನಿಯಂತ್ರಣ ಕುರಿತು ಕೈಗೊಂಡ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಿಂದ 32 ಬಸ್‌ಗಳ ಮೂಲಕ ಒಟ್ಟು 730 ಕಾರ್ಮಿಕರು ಬಾಗಲಕೋಟೆಗೆ ಬಂದಿದ್ದು, ಅವರನ್ನು ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್‌ನಲ್ಲಿ ಇರಿಸಿ ಹೊರಗೆ ಬರದಂತೆ ನಿಗಾವಹಿಸಬೇಕು. ಕೂಲಿ ಕಾರ್ಮಿಕರು ಹೆಚ್ಚಾಗಿ ಗ್ರಾಮೀಣ ಪ್ರದೇಶದವರಾಗಿರು​ವುದರಿಂದ ಅವರ ಮಾಹಿತಿ ಪಡೆದು ನಿಗಾವಹಿಸಲು ತಿಳಿಸಿದರು. ರಾಜಸ್ಥಾನದಿಂದ 4 ಜನ ಜಿಲ್ಲೆಗೆ ಆಗಮಿಸುತ್ತಿರುವ ಮಾಹಿತಿ ಬಂದಿದ್ದು, ಅವರನ್ನು ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡಿಸಲು ತಿಳಿಸಿದರು.

ಕೊರೋನಾ ನಿಗ್ರಹಕ್ಕಾಗಿ ದೇವತೆಗೆ ಮೊರೆ ಹೋದ ಗ್ರಾಮಸ್ಥರು: ತಾಯಿಗೆ ದೀರ್ಘದಂಡ ನಮಸ್ಕಾರ ಸೇವೆ

ರಾಜ್ಯದಲ್ಲಿ ಗೂಡ್ಸ್‌ಗಾಡಿಗಳು ಪ್ರಾರಂಭವಾಗಿದ್ದು, ಜಿಲ್ಲೆಯ ರಾಜ್ಯ ಹೆದ್ದಾರಿಗಳಲ್ಲಿರುವ ದಾಬಾಗಳನ್ನು ಪ್ರಾರಂಭಿಸಲು ಅನುಮತಿ ನೀಡಬೇಕು. ಅನುಮತಿ ನೀಡುವಾಗ ಪಾಲಿಸಬೇಕಾದ ನಿಯಮಗಳನ್ನು ತಿಳಿಹೇಳಬೇಕು. ಕಡ್ಡಾಯವಾಗಿ ಪ್ಯಾಕಿಂಗ್‌ ಮಾಡಿ ನೀಡಬೇಕು. ಜಿಲ್ಲೆಯಲ್ಲಿ ಈಗಾಗಲೇ 6 ಕಡೆಗಳಲ್ಲಿ ದಾಬಾ ಪ್ರಾರಂಭಿಸಲು ಅನುಮತಿ ನೀಡಿದ್ದು, ಅವರು ಸರಿಯಾಗಿ ನಿಯಮಗಳನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲಿಸ​ಬೇಕು ಎಂದರು.

ಜಿಲ್ಲಾಧಿ​ಕಾರಿ ಕ್ಯಾಪ್ಟನ್‌ ಡಾ. ಕೆ. ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 5 ಕಡೆ ಚೆಕ್‌ಪೋಸ್ಟ್‌ ಹಾಕಲಾಗಿದ್ದು, ಈಗ 4 ಮಾತ್ರ ಚಾಲನೆಯಲ್ಲಿವೆ. ಇಲ್ಲಿಯವರೆಗೆ 34889 ವಾಹನಗಳ ತಪಾಸಣೆ ಮಾಡಲಾಗಿದ್ದು, 13,2959 ಜನರ ಥರ್ಮಲ್‌ ಸ್ಕಿ್ರನಿಂಗ್‌ ಮಾಡಲಾಗಿದೆ. ಜಿಲ್ಲಾಧಿ​ಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾದ ಕೋವಿಡ್‌ ಸಹಾಯವಾಣಿ ಕೇಂದ್ರಗಳಲ್ಲಿ ಇಲ್ಲಿಯವರೆಗೆ 195 ಕರೆಗಳು ಬಂದಿವೆ. ಬಂದ ಕರೆಗಳನ್ನು ತಕ್ಷಣ ಬಗೆಹರಿಸುವ ಕೆಲಸ ಮಾಡಲಾಗುತ್ತಿದೆ. ಕರೆಗಳಲ್ಲಿ ಈ ಮೊದಲು ಆರೋಗ್ಯದ ಬಗ್ಗೆ ಬಂದರೆ ಈಗ ರೇಷನ್‌, ಪಾಸ್‌ ಹಾಗೂ ಇತರೆ ಕುರಿತು ಕರೆಗಳು ಬರುತ್ತಿವೆ ಎಂದರು.

ಹಳೆಯ ಬಾಗಲಕೋಟೆ 13, ಮುಧೋಳದಲ್ಲಿ 6 ಹಾಗೂ ಜಮಖಂಡಿಯಲ್ಲಿ 9 ಸೇರಿ ಒಟ್ಟು ಜಿಲ್ಲೆಯಲ್ಲಿ 29 ಪಾಜಿಟಿವ್‌ ಪ್ರಕರಣಗಳು ಬಂದಿದ್ದು, ಈ ಪೈಕಿ 6 ಜನ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಕಂಟೈನ್ಮೆಂಟ್‌ ಝೋನ್‌ಗಳಲ್ಲಿ ಜನರಿಗೆ ಅಗತ್ಯವಾಗಿ ಬೇಕಾಗುವ ವಸ್ತುಗಳನ್ನು ಹೋಂ ಡಿಲೇವರಿ ಮೂಲಕ ಪೂರೈ​ಸ​ಲಾ​ಗು​ತ್ತಿದೆ. ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಈ ಪ್ರದೇಶದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವಯಸ್ಸಿನವರ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯ ಕಾಯಿಲೆ, ಶ್ವಾಸಕೋಶ ತೊಂದರೆ ಇರುವ ಹಾಗೂ ಗರ್ಭಿಣಿಯರ ಆರೋಗ್ಯದ ಬಗ್ಗೆ ನಿಗಾವಹಿಸಲು ತಂಡ ರಚಿಸಲಾಗಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ​ಧಿಕಾರಿ ಡಾ. ಎ.ಎನ್‌. ದೇಸಾಯಿ ಮಾತನಾಡಿ ಜಿಲ್ಲೆಯಲ್ಲಿ ಔಷ​ಧಗಳ ದಾಸ್ತಾನುಗಳ ಯಾವುದೇ ಕೊರತೆ ಇರುವುದಿಲ್ಲ. ಡಾಕ್ಟ​ರ್‍ಸ್ ಮತ್ತು ಸಿಬ್ಬಂದಿ ಕೊರತೆ ಇರುವುದಿಲ್ಲ. ಇನ್ನು ಒಂದು ತಿಂಗಳಿಗಾಗುವಷ್ಟುಪಿಪಿಟಿ ಕಿಟ್‌ಗಳು ಲಭ್ಯ ಇವೆ. ಎನ್‌-95 ಮಾಸ್ಕ್‌ಗಳು 10 ಸಾವಿರ ಹಾಗೂ ತ್ರಿಬಲ್‌ ಓರ್‌ ಮಾಸ್ಕ್‌ಗಳು 1 ಲಕ್ಷಗಳ ಬೇಡಿಕೆ ಇರುವುದಾಗಿ ತಿಳಿಸಿದರು. ಜಿಲ್ಲೆಯಿಂದ ಕಳುಹಿಸಲಾದ 292 ಸ್ಯಾಂಪಲ್‌ಗಳ ಪೈಕಿ 285 ಸ್ಯಾಂಪಲ್‌ಗಳು ನೆಗೆಟಿವ್‌ ಬಂದಿವೆ. ಬಾಕಿ 90 ಸ್ಯಾಂಪಲ್‌ಗಳ ವರದಿ ಮಾತ್ರ ಬರಬೇಕಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿ​ಕಾರಿ ಲೋಕೇಶ ಜಗಲಾಸರ, ಜಿಪಂ ಸಿಇಒ ಗಂಗೂಬಾಯಿ, ಅಪರ ಜಿಲ್ಲಾಧಿ​ಕಾರಿ ಮಹಾದೇವ ಮುರಗಿ, ಕೋವಿಡ್‌ ವಿಶೇಷ ಅಪರ ಜಿಲ್ಲಾ​ಧಿಕಾರಿ ಬಸವರಾ ಸೋಮಣ್ಣವರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪ್ರಕಾಶ ಬಿರಾದಾರ, ಜಿಲ್ಲಾ ಸಮೀಕ್ಷಣಾ​ಧಿ​ಕಾರಿ ಡಾ. ವಿಜಯ ಕಂಠಿ, ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ತೋಟಗಾರಿಕ ಉಪನಿರ್ದೇಶಕ ಪ್ರಭುರಾಜ ಹಿರೇಮಠ ಅನೇ​ಕ​ರಿ​ದ್ದರು.