Ramanagara: ಕಸ ಸಂಗ್ರಹಕ್ಕಾಗಿ ಪ್ರತಿ ಮನೆಗೂ ಕ್ಯೂಆರ್ ಕೋಡ್ ಅಳವಡಿಕೆ
ಡಿಜಿಟಲೀಕರಣ ಪ್ರಭಾವದಿಂದ ಎಲ್ಲಾ ವಸ್ತು ಮತ್ತು ಸೇವೆಗಳು ಆನ್ ಲೈನ್ ಮೂಲಕ ಮನೆ ಬಾಗಿಲಿಗೆ ಬಂದಿವೆ. ಇದೀಗ ಜಿಲ್ಲಾ ಕೇಂದ್ರದಲ್ಲಿನ ಪ್ರತಿ ಮನೆ ಮನೆಯಿಂದ ಕಸ ಸಂಗ್ರಹಕ್ಕೂ ಕ್ಯೂಆರ್ ಕೋಡ್ ಮೂಲಕ ಪಾವತಿಸುವ ವಿನೂತನ ಸೌಲಭ್ಯವನ್ನು ಪರಿಚಯಿಸಲು ರಾಮನಗರ ನಗರಸಭೆ ಮುಂದಾಗಿದೆ.
ಎಂ.ಅಫ್ರೋಜ್ ಖಾನ್
ರಾಮನಗರ (ಜ.10): ಡಿಜಿಟಲೀಕರಣ ಪ್ರಭಾವದಿಂದ ಎಲ್ಲಾ ವಸ್ತು ಮತ್ತು ಸೇವೆಗಳು ಆನ್ ಲೈನ್ ಮೂಲಕ ಮನೆ ಬಾಗಿಲಿಗೆ ಬಂದಿವೆ. ಇದೀಗ ಜಿಲ್ಲಾ ಕೇಂದ್ರದಲ್ಲಿನ ಪ್ರತಿ ಮನೆ ಮನೆಯಿಂದ ಕಸ ಸಂಗ್ರಹಕ್ಕೂ ಕ್ಯೂಆರ್ ಕೋಡ್ ಮೂಲಕ ಪಾವತಿಸುವ ವಿನೂತನ ಸೌಲಭ್ಯವನ್ನು ಪರಿಚಯಿಸಲು ರಾಮನಗರ ನಗರಸಭೆ ಮುಂದಾಗಿದೆ. ಜಿಲ್ಲಾ ಕೇಂದ್ರದಲ್ಲಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯಲ್ಲಿ ಮನೆ ಮನೆಗಳಿಂದ ಪ್ರತಿದಿನ ಕಸ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಈಗ ಘನ ತ್ಯಾಜ್ಯ ಬಳಕೆದಾರರ ಶುಲ್ಕವನ್ನು ಕಂದಾಯ ಶುಲ್ಕದಲ್ಲಿಯೇ ಸೇರಿಸಿ ಪಡೆಯಲಾಗುತ್ತಿದೆ. ತಿಂಗಳಿಗೆ ಪ್ರತಿ ಮನೆಯಿಂದ 30 ರುಪಾಯಿ ಘನ ತ್ಯಾಜ್ಯ ಬಳಕೆದಾರರ ಶುಲ್ಕ ಪಾವತಿಯಾಗುತ್ತಿದೆ.
ಈಗ ಮನೆ ಮನೆ ತ್ಯಾಜ್ಯ ಸಂಗ್ರಹಣೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನಗರಸಭೆ ಪ್ರತಿ ಮನೆ ಮನೆಗೆ ಡಿಜಿಟಲ್ ಮಾನಿಟರಿಂಗ್ ವ್ಯವಸ್ಥೆಯಡಿಯಲ್ಲಿ ಕ್ಯೂಆರ್ ಕೋಡ್ ಅಳವಡಿಸಲು ಚಿಂತನೆ ನಡೆಸುತ್ತಿದೆ. ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿದ್ದು, ಅಂದಾಜು 24 ಸಾವಿರ ಮನೆಗಳಿವೆ. ಡಿಜಿಟಲ್ ಮಾನಿಟರಿಂಗ್ ವ್ಯವಸ್ಥೆ ಜಾರಿಗೆ ಬಂದಲ್ಲಿ 24 ಸಾವಿರ ಕ್ಯೂಆರ್ ಕೋಡ್‌ಗಳನ್ನು ಅಳವಡಿಸಬೇಕಾದ ಜವಾಬ್ದಾರಿ ನಗರಸಭೆಯ ಮೇಲೆ ಬೀಳಲಿದೆ.
ರಾಜಕೀಯ ಕಾರಣಕ್ಕಾಗಿ ವಿಪಕ್ಷಗಳಿಂದ ಕಮಿಷನ್ ಆರೋಪ: ಸಚಿವ ಕೆ.ಜೆ.ಜಾರ್ಜ್
ಈಗಾಗಲೇ ನಗರದಲ್ಲಿ ಬ್ಲ್ಯಾಕ್ ಸ್ಪಾಟ್‌ಗಳನ್ನು ಗುರುತಿಸಿ ಹೊರಗಡೆ ತ್ಯಾಜ್ಯ ಹಾಕುವುದನ್ನು ನಿಷೇಧಿಸಲಾಗಿದೆ. ಮನೆಗಳಲ್ಲಿ ಸಂಗ್ರಹವಾದ ಕಸವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವ ಸಂಬಂಧ ಕ್ಯೂಆರ್ ಕೋಡ್ ಜಾರಿಗೆ ತರಲಾಗುತ್ತಿದೆ. ಇದು ಸಂಪೂರ್ಣ ಡಿಜಿಟಲ್ ಮಾನಿಟರಿಂಗ್ ಆಗಿದ್ದು, ಮನೆ ಮನೆ ತ್ಯಾಜ್ಯ ಸಂಗ್ರಹ ಮಾಡಿರುವ ಕುರಿತು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ತಿಳಿದುಕೊಳ್ಳಬಹುದಾಗಿದೆ. ಆರ್‌ಎಫ್‌ಐಡಿ ತಂತ್ರಾಂಶವನ್ನು ಬಳಕೆ ಮಾಡಿಕೊಂಡು ಈ ವ್ಯವಸ್ಥೆ ಜಾರಿಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ತ್ಯಾಜ್ಯ ಸಂಗ್ರಹದ ಕುರಿತು ಸಾಕಷ್ಟು ಸಮಸ್ಯೆಗಳಿವೆ. ಕೆಲವು ಬಡಾವಣೆಗಳಲ್ಲಿ ತ್ಯಾಜ್ಯವನ್ನು ಸಮರ್ಪಕವಾಗಿ ಸಂಗ್ರಹಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಸಾಮಾನ್ಯವಾಗಿದೆ. ಅಧಿಕಾರಿಗಳು ದಿನ ಬಿಟ್ಟು ದಿನ ಬಡಾವಣೆಗಳ ಪ್ರತಿ ಮನೆಯಲ್ಲಿ ತ್ಯಾಜ್ಯ ಸಂಗ್ರಹಿಸುತ್ತಿದ್ದೇವೆ ಎನ್ನುತ್ತಿದ್ದಾರೆ.
ಈ ವ್ಯವಸ್ಥೆ ಜಾರಿಯಾದ ಮೇಲೆ ಸಿಬ್ಬಂದಿ ಕಸ ಸಂಗ್ರಹಿಸಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಮನೆಯ ಮಾಲೀಕನಿಗೆ ಎಸ್‌ಎಂಎಸ್ ಹೋಗುತ್ತದೆ. ಈ ವ್ಯವಸ್ಥೆಗೆ ಪ್ರತಿ ಬಾರಿ 20 ಪೈಸೆ ಚಾರ್ಜ್ ಆಗಲಿದೆ. ಇದೇ ರೀತಿ ತಿಂಗಳಿಗೆ 6 ರುಪಾಯಿಗಳನ್ನು ಸಾರ್ವನಿಕರು ಪಾವತಿ ಮಾಡಬೇಕಾಗುತ್ತದೆ. ಈ ಡಿಜಿಟಲ್ ಮಾನಿಟರಿಂಗ್ ವ್ಯವಸ್ಥೆಯಿಂದಾಗಿ ಪ್ರತಿ ಮನೆಯ ತ್ಯಾಜ್ಯ ಸಂಗ್ರಹಣೆಯ ಕುರಿತು ಅಧಿಕಾರಿಗಳ ಬಳಿ ಮಾಹಿತಿ ಇರಲಿದೆ. ಇದಕ್ಕಾಗಿ ನಗರಸಭೆಯಲ್ಲಿ ಕಂಟ್ರೋಲ್ ರೂಂ ಪ್ರಾರಂಭಿಸಲು ಅಧಿಕಾರಿಗಳೂ ಮುಂದಾಗಿದ್ದಾರೆ. ಒಂದೊಮ್ಮೆ ತ್ಯಾಜ್ಯ ಸಂಗ್ರಹಣೆಯಲ್ಲಿ ವ್ಯತ್ಯಾಸ ಕಂಡುಬಂದರೆ ಎಸ್‌ಎಂಎಸ್ ಮೂಲಕ ಮಾಹಿತಿ ಲಭಿಸಲಿದೆ. ನಗರಸಭೆಯ ತ್ಯಾಜ್ಯ ಸಂಗ್ರಹ ಆಟೋಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಈ ಆಟೋಗಳ ಚಲನವಲನದ ಮೇಲೆ ಕಣ್ಣಿರಿಸಲಾಗಿದೆ.
ಕಟ್ಟಡದಲ್ಲಿ ಎಷ್ಟು ಮನೆಗಳಿರುತ್ತವೆಯೋ ಅಷ್ಟೇ ಕ್ಯೂಆರ್ ಕೋಡ್: ತ್ಯಾಜ್ಯ ಸಂಗ್ರಹಕ್ಕೆ ಆಗಮಿಸುವ ಆಟೋ ಡ್ರೈವರ್ ಅಥವಾ ಲೋಡರ್‌ಗೆ ಈ ಡಿಜಿಟಲ್ ಮಾನಿಟರ್‌ನ ಡಿವೈಸ್ ನೀಡಲಾಗುತ್ತದೆ. ಕಸ ಪಡೆದ ತಕ್ಷಣ ಸಿಬ್ಬಂದಿ ಈ ಕ್ಯೂರ್ ಕೋಡ್ ಸ್ಕ್ಯಾನ್ ಮಾಡಲಿದ್ದಾರೆ. ಇದರಿಂದ ಆ ಮನೆಯ ಮಾಲೀಕರಿಗೆ ಹಾಗೂ ನಗರಸಭೆಯ ಅಧಿಕಾರಿಗಳಿಗೆ ಕಸ ಸಂಗ್ರಹದ ಕುರಿತು ಎಸ್‌ಎಂಎಸ್ ಹೋಗಲಿದೆ. ಪ್ರತಿ ಮನೆಯನ್ನೂ ಕ್ಯೂಆರ್ ಕೋಡ್ ವ್ಯವಸ್ಥೆಯೊಳಗೆ ತರಲು ತೀರ್ಮಾನಿಸಲಾಗಿದೆ. ಆದರೆ, ಒಂದೇ ಕಟ್ಟಡದಲ್ಲಿ ಮೂರ್‍ನಾಲ್ಕು ಮನೆಗಳಿದ್ದರೆ ಆಯಾಯ ಕಟ್ಟಡದ ಕೆಳಗಿನ ಗೇಟ್‌ಗಳಲ್ಲಿ ಅಷ್ಟೂ ಮನೆಯ ಕ್ಯೂರ್ ಕೋಡ್ ಗಳನ್ನು ಅಳವಡಿಸಲಾಗುತ್ತದೆ. ತ್ಯಾಜ್ಯ ಪಡೆದ ತಕ್ಷಣ ಸಿಬ್ಬಂದಿ ಸ್ಕ್ಯಾನ್ ಮಾಡಲಿದ್ದಾರೆ.
ವಾರ್ಡಿಗೊಂದು ಆಟೋ ವ್ಯವಸ್ಥೆ: ಜಿಲ್ಲಾ ಕೇಂದ್ರದಲ್ಲಿ ತ್ಯಾಜ್ಯ ಸಂಗ್ರಹಣೆಯನ್ನು ನಗರಸಭೆ ಸಿಬ್ಬಂದಿ ತಡವಾಗಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇದರ ನಡುವೆ ಕ್ಯೂಆರ್ ಕೋಡ್ ಅಳವಡಿಸಿದರೆ ಸ್ಕ್ಯಾನ್ ಮಾಡಿ ಮತ್ತೊಂದು ಮನೆಗೆ ತೆರಳುವಷ್ಟರಲ್ಲಿ ಸಾಕಷ್ಟು ಸಮಯವಾಗಲಿದೆ. ಈ ಸಮಸ್ಯೆ ಬಗೆಹರಿಸುವ ಸಂಬಂಧ ನಗರಸಭೆ ವ್ಯಾಪ್ತಿಯ ಪ್ರತಿ ವಾರ್ಡ್‌ಗಳಿಗೆ ಪ್ರತ್ಯೇಕ ಕಸ ಸಂಗ್ರಹ ಆಟೋ ವ್ಯವಸ್ಥೆ ಜಾರಿ ಮಾಡಲು ಚಿಂತಿಸಲಾಗಿದೆ. ಈಗಾಗಲೇ 28 ಕಸ ಸಂಗ್ರಹ ಆಟೋಗಳಿದ್ದು ಈ ಪೈಕಿ 6 ಆಟೋಗಳು ರಿಪೇರಿಯಲ್ಲಿವೆ. ಇನ್ನೆರಡು ಎಲೆಕ್ಟ್ರಿಕ್ ಆಟೋ ಖರೀದಿಸಲಾಗುತ್ತಿದೆ. ಆಯಾಯ ವಾರ್ಡ್‌ಗೆ ನಿಗದಿ ಪಡಿಸಿರುವ ಕಸದ ಆಟೋಗಳು ನಿತ್ಯ ತೆರಳಿ ಮನೆ ಮನೆ ಕಸ ಸಂಗ್ರಹ ಮಾಡಲಿದೆ.
‘ರಾಮನಗರವನ್ನು ಮಾದರಿ ನಗರವನ್ನಾಗಿಸುವ ಸಲುವಾಗಿ ನಗರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸ್ವಚ್ಛ ಹಾಗೂ ಪರಿಸರ ಸ್ನೇಹಿ ನಗರವನ್ನಾಗಿ ಮಾಡಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮನೆ ಮನೆಯಿಂದ ಕಸ ಸಂಗ್ರಹ ಶುಲ್ಕವನ್ನೂ ಸಹ ಕ್ಯೂಆರ್ ಕೋಡ್ ಮೂಲಕ ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.’
- ಕೆ.ಶೇಷಾದ್ರಿ , ಅಧ್ಯಕ್ಷರು, ನಗರಸಭೆ ರಾಮನಗರ.
ಜೆಡಿಎಸ್ ಕಾರ್ಯಕರ್ತರು, ಮುಖಂಡರಿಗೆ ಧೈರ್ಯ ಹೇಳಿದ ನಿಖಿಲ್ ಕುಮಾರಸ್ವಾಮಿ
‘ರಾಮನಗರ ನಗರಸಭೆ ವ್ಯಾಪ್ತಿಯ ಎಲ್ಲಾ ಮನೆಗಳಿಗೆ ಡಿಜಿಟಲ್ ಮಾನಿಟರಿಂಗ್ ವ್ಯವಸ್ಥೆಯಲ್ಲಿ ಕ್ಯೂಆರ್ ಕೋಡ್ ಅಂಟಿಸಲಾಗುತ್ತದೆ. ಇದರಿಂದ ಕಸ ಸಂಗ್ರಹಣೆ ಕುರಿತು ಮಾಹಿತಿ ಲಭಿಸಲಿದೆ. ಇನ್ನೆರಡು ತಿಂಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ’
-ಸುಬ್ರಹ್ಮಣ್ಯ, ಪರಿಸರ ವಿಭಾಗದ ಕಾರ್ಯಪಾಲಕ ಅಭಿಯಂತರ, ನಗರಸಭೆ ,ರಾಮನಗರ.