ವಿದ್ಯುತ್ ದರ ಏರಿಕೆಯ ಮಧ್ಯೆ ಕಾದಿದೆ ಮತ್ತೊಂದು ಶಾಕ್...!
ಹೊಸ ವರ್ಷಕ್ಕೆ ಕಾದಿದೆ ನಿರ್ವಹಣೆ ಶುಲ್ಕದ ಶಾಕ್| ಆದಾಯಕ್ಕಿಂತ ಹೆಚ್ಚು ವೆಚ್ಚ| ಹೊಸ ಸಂಪನ್ಮೂಲ ಮೂಲಕ್ಕೆ ಬಿಬಿಎಂಪಿ ಹುಡುಕಾಟ| ಪ್ರತಿ ಮನೆಯಿಂದ ತಿಂಗಳಿಗೆ 200 ವಸೂಲಿ| ಬಿಲ್ ಕಟ್ಟದಿದ್ದರೆ ಕಸ ಸಂಗ್ರಹ ಸ್ಥಗಿತ|
ಬೆಂಗಳೂರು(ನ.21): ಈಗಾಗಲೇ ವಿದ್ಯುತ್ ದರ ಏರಿಕೆಯಿಂದ ಬಳಲುತ್ತಿರುವ ನಗರದ ನಾಗರಿಕರು ಸೇರಿದಂತೆ ತ್ಯಾಜ್ಯ ಉತ್ಪಾದಕರರಾದ ಹೊಟೇಲ್, ಕಲ್ಯಾಣ ಮಂಟಪ, ಆಸ್ಪತ್ರೆ, ಶಾಪಿಂಗ್ ಮಾಲ್‌ಗಳಿಂದ ಹೊಸ ವರ್ಷದಿಂದ ಕಸ ಸಂಗ್ರಹಕ್ಕಾಗಿ ಪ್ರತಿ ತಿಂಗಳು ಕನಿಷ್ಠ 200 ರು.ನಿಂದ 14000 ಶುಲ್ಕ ವಸೂಲಿ ಮಾಡಲು ಬಿಬಿಎಂಪಿ ಚಿಂತನೆ ಮಾಡಿದೆ. ಈಗಾಗಲೇ ತೆರಿಗೆ ಸಂಗ್ರಹದಲ್ಲಿ ಇಳಿಕೆ, ಆದಾಯಕ್ಕಿಂತ ಹೆಚ್ಚು ವೆಚ್ಚ, ಗುತ್ತಿಗೆದಾರರಿಗೆ ಕೋಟ್ಯಂತರ ರು. ಬಾಕಿ ಮೊತ್ತ ಉಳಿಸಿಕೊಂಡಿರುವ ಪಾಲಿಕೆ ಈಗ ಹೊಸ ಸಂಪನ್ಮೂಲ ಕಂಡುಕೊಳ್ಳಲು ತ್ಯಾಜ್ಯ ಸಂಗ್ರಹ ಶುಲ್ಕ ವಿಧಿಸಲು ಮುಂದಾಗಿದೆ.
ಸರ್ಕಾರ ಅಸ್ತು:
ಬಿಬಿಎಂಪಿಯ ಕಸ ನಿರ್ವಹಣೆ ಉಪ ನಿಯಮ-2020ರ ಅನ್ವಯ ಶುಲ್ಕ ವಸೂಲು ಮಾಡಲು ಮುಂದಾಗಿದ್ದು, ಇದಕ್ಕೆ ಇತ್ತೀಚೆಗೆ ಸರ್ಕಾರ ಅನುಮೋದನೆ ನೀಡಿದೆ. ಈ ನೀತಿಯಂತೆ ಪ್ರತಿ ಮನೆಗೆ ಬಿಬಿಎಂಪಿ ಮಾಸಿಕವಾಗಿ 200 ರು. ಶುಲ್ಕ ವಿಧಿಸಬಹುದು. ಜತೆಗೆ ವಾಣಿಜ್ಯ ತ್ಯಾಜ್ಯ ಉತ್ಪಾದಕರಾದ ಹೋಟೆಲ್, ಕಲ್ಯಾಣ ಮಂಟಪ, ಆಸ್ಪತ್ರೆ, ಶಾಪಿಂಗ್ ಮಾಲ್ ಸೇರಿದಂತೆ ಮೊದಲಾದ ಕಡೆ ಪ್ರತಿ ದಿನ ಉತ್ಪಾದನೆ ಆಗುವ ತ್ಯಾಜ್ಯದ ಆಧಾರದ ಮೇಲೆ ದರ ನಿಗದಿ ಪಡಿಸಲಾಗಿದೆ. ಐದರಿಂದ 100 ಕೆ.ಜಿ ವರೆಗೆ 500 ರು. ನಿಂದ 14 ಸಾವಿರ ರು. ಮಾಸಿಕ ಶುಲ್ಕ ನಿಗದಿ ಮಾಡಲು ಅವಕಾಶವಿದೆ. ಡಿಸೆಂಬರ್ ಅಥವಾ ಹೊಸ ವರ್ಷದ ಆರಂಭದ ವೇಳೆಗೆ ಜಾರಿಗೆ ತರಲು ಬಿಬಿಎಂಪಿ ಚಿಂತನೆ ನಡೆಸಿದೆ.
ಕರೆಂಟ್ ಅಥವಾ ನೀರಿನ ಬಿಲ್ ಜತೆ ಸಂಗ್ರಹ?:
ಮಾಸಿಕ ಶುಲ್ಕವನ್ನು ಹೇಗೆ ಸಂಗ್ರಹಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತಿದ್ದು, ಆಸ್ತಿ ತೆರಿಗೆಯೊಂದಿಗೆ ಸಂಗ್ರಹಿಸಬೇಕಾ ಅಥವಾ ವಿದ್ಯುತ್ ಮತ್ತು ನೀರಿನ ಬಿಲ್‌ನೊಂದಿಗೆ ಮಾಸಿಕ ಶುಲ್ಕ ಸಂಗ್ರಹಿಸಬೇಕಾ ಎಂಬುದರೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಆದರೆ, ಇನ್ನೂ ಯಾವುದೇ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಸಾಧಕ ಮತ್ತು ಬಾಧಕಗಳ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಸಕಾಲಕ್ಕೆ ಕಸ ಸಂಗ್ರಹಿಸದ ಗುತ್ತಿಗೆದಾರರಿಗೆ ನೋಟಿಸ್: ಬಿಬಿಎಂಪಿ
ಕಸ ಸಂಗ್ರಹ ಸ್ಥಗಿತ:
ನೀರಿನ ಬಿಲ್ ಹಾಗೂ ವಿದ್ಯುತ್ ಬಿಲ್ ಪಾವತಿ ಮಾಡದಿದ್ದರೆ ಹೇಗೆ ಸಂಪರ್ಕ ಕಡಿತ ಮಾಡಲಾಗುತ್ತದೆ. ಅದೇ ರೀತಿ ಕಸದ ಮಾಸಿಕ ಶುಲ್ಕ ಪಾವತಿ ಮಾಡದವರ ಮನೆಯಿಂದ ಕಸ ಸಂಗ್ರಹ ಸ್ಥಗಿತಗೊಳ್ಳಲಿದೆ. ಖಾಲಿ ನಿವೇಶನಕ್ಕೂ ಪ್ರತಿ ಚದರ ಅಡಿಗೆ 20 ಪೈಸೆಯಂತೆ ಶುಲ್ಕ ವಿಧಿಸುವ ಅವಕಾಶವಿದೆ.
ಮಾಸಿಕ ಶುಲ್ಕಕ್ಕೆ ಭಾರೀ ವಿರೋಧ
ತ್ಯಾಜ್ಯ ಶುಲ್ಕ ಏರಿಕೆಗೆ ಮಾಜಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ತ್ಯಾಜ್ಯ ಶುಲ್ಕ ಜಾರಿಗೆ ಮುಂದಾದಾಗ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೇ ಪ್ರತಿಭಟನೆ ನಡೆಸಿದ್ದರು.
ಬೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಈ ತಿಂಗಳ ಒಳಗೆ ಅಂತಿಮ ತಿರ್ಮಾನ ತಿಳಿಸುವಂತೆ ಹೇಳಲಾಗಿದೆ. ಶೀಘ್ರದಲ್ಲಿ ಶುಲ್ಕ ಸಂಗ್ರಹಣೆ ಆರಂಭಿಸಲಾಗುವುದು ಎಂದು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್ ತಿಳಿಸಿದ್ದಾರೆ.
ವಾಣಿಜ್ಯ ತ್ಯಾಜ್ಯ ಉತ್ಪಾದಕರಿಗೆ? ತ್ಯಾಜ್ಯಉತ್ಪಾದಕ ವರ್ಗ ಶುಲ್ಕ (ಮಾಸಿಕ ರು.)
ದಿನಕ್ಕೆ 5 ಕೆ.ಜಿ ಗಿಂತ ಕಡಿಮೆ ಕಸ ಉತ್ಪಾದಕರಿಗೆ 500
ದಿನಕ್ಕೆ 5 ರಿಂದ 10 ಕೆ.ಜಿ ಕಸ ಉತ್ಪಾದಕರಿಗೆ 1,400
ದಿನಕ್ಕೆ 11 ರಿಂದ 25 ಕೆ.ಜಿ ಕಸ ಉತ್ಪಾದಕರಿಗೆ 3,500
ದಿನಕ್ಕೆ 26 ರಿಂದ 50 ಕೆ.ಜಿ ಕಸ ಉತ್ಪಾದಕರಿಗೆ 7,000
ದಿನಕ್ಕೆ 100 ಮತ್ತು ಅದಕ್ಕಿಂತ ಹೆಚ್ಚಿನ ಕೆಜಿ ಕಸ ಉತ್ಪಾದಕರಿಗೆ 14,000
ತ್ಯಾಜ್ಯ ನಿರ್ವಹಣೆಗೆ ಬಿಬಿಎಂಪಿ ವಾರ್ಷಿಕವಾಗಿ ಸುಮಾರು 800 ಕೋಟಿ ರು.ಗೂ ಹೆಚ್ಚು ಹಣ ವೆಚ್ಚ ಮಾಡುತ್ತಿದೆ. ಹಾಗಾಗಿ, ಕಸ ಸಂಗ್ರಹಿಸುವುದಕ್ಕೆ ಶುಲ್ಕ ವಿಧಿಸುವುದು ಅನಿವಾರ್ಯ. ವಿದ್ಯುತ್ ಮತ್ತು ಜಲಮಂಡಳಿಯ ನೀರಿನ ಶುಲ್ಕ ಸಂಗ್ರಹಿಸುವ ಮಾದರಿಯಲ್ಲಿ ಕಸದ ಮಾಸಿಕ ಶುಲ್ಕ ಸಂಗ್ರಹಿಸಲಾಗುವುದು. ಹೇಗೆ ಮತ್ತು ಯಾರು ಈ ಶುಲ್ಕ ಸಂಗ್ರಹಿಸಬೇಕು. ಶುಲ್ಕ ಪಾವತಿಸದವರಿಗೆ ದಂಡ ಅಥವಾ ಕ್ರಮ ಏನು ಎಂಬುದರ ಬಗ್ಗೆ ಮೇಯರ್, ಆಯುಕ್ತರು ಶೀಘ್ರದಲ್ಲಿ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.