ಪುತ್ತೂರಿನ ಬಿಜೆಪಿ ಮುಖಂಡನ ಪುತ್ರ ಕೃಷ್ಣ ಜೆ. ರಾವ್, ಯುವತಿಯನ್ನು ಪ್ರೀತಿಸಿ, ಗರ್ಭವತಿಯನ್ನಾಗಿಸಿ ವಂಚಿಸಿದ ಪ್ರಕರಣಕ್ಕೆ ರಾಜಕೀಯ ತಿರುವು ಸಿಕ್ಕಿದೆ. ಡಿಎನ್‌ಎ ಪರೀಕ್ಷೆಯಲ್ಲಿ ಮಗುವಿನ ತಂದೆ ಎಂದು ಸಾಬೀತಾದರೂ, ಮದುವೆಗೆ ನಿರಾಕರಿಸಿ 50 ಲಕ್ಷ ರೂ. ಆಮಿಷವೊಡ್ಡಿದ್ದಾರೆ ಎನ್ನಲಾಗಿದೆ.
ಮಂಗಳೂರು: ಪುತ್ತೂರು ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ. ರಾವ್ ಯುವತಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಗರ್ಭವತಿಯನ್ನಾಗಿ ಮಾಡಿ ಮಗು ಕರುಣಿಸಿ ವಂಚಿಸಿದ ಪ್ರಕರಣಕ್ಕೆ ಈಗ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಎಂಟ್ರಿ ಕೊಟ್ಟಿದೆ. ಜೊತೆಗೆ ಕೃಷ್ಣ ಜೆ. ರಾವ್ ಕುಟುಂಬದಿಂದ ಸಂತ್ರಸ್ತೆಗೆ 50 ಲಕ್ಷ ರೂ ಆಮಿಷ ಆರೋಪ ಕೇಳಿಬಂದಿದೆ.
ಡಿಎನ್‌ಎ ಪರೀಕ್ಷೆಯಲ್ಲಿ ಸಂತ್ರಸ್ತೆ ಪೂಜಾಳ ಮಗುವಿನ ತಂದೆ ಕೃಷ್ಣ ಜೆ.ರಾವ್ ಎಂಬುದು ಸಾಬೀತಾದರೂ ಅವರು ಈಕೆಯನ್ನು ಮದುವೆಯಾಗಲು ಸುತಾರಾಂ ಒಪ್ಪುತ್ತಿಲ್ಲ. ಮಾತ್ರವಲ್ಲ ಲಕ್ಷಗಟ್ಟಲೆ ಪರಿಹಾರ ನೀಡುವುದಾಗಿ ಸಂಧಾನ ಮಾತುಕತೆ ವೇಳೆ ಹೇಳುತ್ತಿದ್ದಾರೆ. ಆದ್ದರಿಂದ ಇನ್ನು ಮುಂದೆ ಸಂಧಾನದ ಬಾಗಿಲು ಮುಚ್ಚಿದ್ದು, ಮಂಗಳೂರು ಕೋರ್ಟ್ ಆತನಿಗೆ ನೀಡಿರುವ ಜಾಮೀನನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಲಾಗುವುದು. ಅಲ್ಲದೆ ಸದ್ಯ ಅತಂತ್ರ ಸ್ಥಿತಿಯಲ್ಲಿ ಇರುವ ಮಗುವಿಗೆ ಕಲ್ಲಡ್ಕದಲ್ಲಿ ಜನವರಿ 24ರಂದು ನಾಮಕರಣ ಶಾಸ್ತ್ರ ಹಮ್ಮಿಕೊಂಡಿರುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸದಸ್ಯೆ ಪ್ರತಿಭಾ ಕುಳಾಯಿ ಹೇಳಿದ್ದಾರೆ.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸಂತ್ರಸ್ತೆಯ ತಾಯಿ ಹಾಗೂ ಮಗು ಸಹಿತ ಸಂತ್ರಸ್ತೆ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಗುವಿನ ತಂದೆ ಕೃಷ್ಣ ಜೆ.ರಾವ್ ಎಂಬುದು ಡಿಎನ್‌ಎ ಪರೀಕ್ಷೆಯಲ್ಲಿ ಸಾಬೀತಾದರೂ ಆತನ ಕುಟುಂಬದವರು ಪೂಜಾ ಜೊತೆ ಮದುವೆಗೆ ಸುತಾರಾಂ ಒಪ್ಪುತ್ತಿಲ್ಲ. ಕೇವಲ ವಿಶ್ವಕರ್ಮ ಸಮುದಾಯದ ಮುಖಂಡ ಕೆ.ಪಿ.ನಂಜುಂಡಿ ಜೊತೆ ಮಾತ್ರ ಸಂಪರ್ಕದಲ್ಲಿ ಇದ್ದಾರೆ. ಮದುವೆ ವಿಚಾರದಲ್ಲಿ ಸಂಧಾನ ಮಾತುಕತೆ ವೇಳೆ ಆತನ ಪೋಷಕರು ಈಡೇರಿಸಲಾಗದ ಷರತ್ತು ಇಟ್ಟಿದ್ದಾರೆ. ಮಗುವನ್ನು ಸಾಂತ್ವನ ಕೇಂದ್ರಕ್ಕೆ ಸೇರಿಸಬೇಕು. ಹಾಗಾದರೆ ಮಾತ್ರ ಪೂಜಾಳವನ್ನು ಆತ ವಿವಾಹವಾಗಿ ಬಳಿಕ ವಿಚ್ಛೇದನ ನೀಡುತ್ತಾನಂತೆ. ಅಲ್ಲದೆ ಈ ವೇಳೆ 50 ಲಕ್ಷ ರು. ಪರಿಹಾರ ನೀಡುತ್ತಾನಂತೆ, ಮೊದಲಿನ ಕೇಸ್‌ನ್ನೆಲ್ಲ ವಾಪಸ್ ಪಡೆಯಬೇಕು ಇತ್ಯಾದಿ ಷರತ್ತುಗಳನ್ನು ವಿಧಿಸಿದ್ದಾರೆ. ನಮಗೆ ಹಣ ಬೇಡ, ಸಾಮಾಜಿಕ ನ್ಯಾಯ ಬೇಕು. ಒಂದು ವೇಳೆ ಪೂಜಾಳನ್ನು ವಿವಾಹವಾದರೆ ನಾನೇ ಆತನಿಗೆ 50 ಲಕ್ಷ ರು. ಕೊಡುತ್ತೇನೆ, ಆತ ಮನೆ ಆಳಿಯನಾಗಿ ಬರಲಿ ಎಂದು ಸವಾಲು ಹಾಕಿದರು.
24ರಂದು ಕಲ್ಲಡ್ಕದಲ್ಲಿ ನಾಮಕರಣ
ಕರಾವಳಿಯಲ್ಲಿ ಹಿಂದು ಸಮಾಜದ ಒಗ್ಗಟ್ಟಿನ ಬಗ್ಗೆ ಮಾತನಾಡುವ ಮುಖಂಡರು, ರಾಜಕೀಯ ನೇತಾರರು ಇಂತಹ ಇಕ್ಕಟ್ಟಿನ ಸನ್ನಿವೇಶದಲ್ಲಿ ಸಿಲುಕಿದವರನ್ನು ಪಾರು ಮಾಡಲು ನೆರವಿಗೆ ಧಾವಿಸದೇ ಇರುವುದು ಖೇದಕರ. ಹಾಗಾಗಿ ನಾವು ಬೇರೆ ಸಮುದಾಯದವರನ್ನೂ ಅನ್ಯದ ವಿರುದ್ಧ ಧ್ವನಿ ಎತ್ತಲು ಆಹ್ವಾನಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ರಾಜಕೀಯ ಹಾಗೂ ಸಂಘಟನಾತ್ಮಕವಾಗಿ ಶಕ್ತಿ ಕೇಂದ್ರ ಆಗಿರುವ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರ ಊರಿನಿಂದಲೇ ಹೋರಾಟ ಆರಂಭಿಸುತ್ತಿದ್ದೇವೆ. ಇದೇ ಕಾರಣಕ್ಕೆ ಜನವರಿ 24 ರಂದು ಕಲ್ಲಡ್ಕದಲ್ಲೇ ಮಗುವಿಗೆ ನಾಮಕರಣ ಶಾಸ್ತ್ರ ನೆರವೇರಿಸುವುದಾಗಿ ಪ್ರತಿಭಾ ಕುಳಾಯಿ ಹೇಳಿದರು.
ಯಾವ ಕಾರಣಕ್ಕೆ ಪೂಜಾ ಬೇಡ?
ಮಗುವಿನ ತಂದೆ ಕೃಷ್ಣ ಜೆ.ರಾವ್ ಯಾವ ಕಾರಣಕ್ಕೆ ಪೂಜಾಳನ್ನು ತಿರಸ್ಕರಿಸುತ್ತಿದ್ದಾನೆ ಎಂದು ಅರ್ಥವಾಗುತ್ತಿಲ್ಲ. ಕಳೆದ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸಿ ಅರ್ಥಮಾಡಿಕೊಂಡಿದ್ದ ಇವರಿಬ್ಬರು ಸರಸದಲ್ಲಿ ಮಗು ಜನಿಸಿದ ಬಳಿಕ ಮತ್ತೆ ಆಕೆಯನ್ನು ದೂರ ಮಾಡುವುದರಲ್ಲಿ ಅರ್ಥ ಇಲ್ಲ. ಆಕೆ ಯಾವುದೇ ಕಾರಣಕ್ಕೂ ಅಬಲೆ ಅಲ್ಲ, ಆಕೆಯೂ ನಿತ್ಯ ನೊಂದುಕೊಳ್ಳುತ್ತಿದ್ದು, ಆತ್ಮಹತ್ಯೆಗೂ ಯತ್ನಿಸಿದ್ದಾಳೆ. ಅವಳ ಬದುಕಿಗೆ ನಾವೆಲ್ಲ ಬೆಂಬಲವಾಗಿ ನಿಲ್ಲುತ್ತಿದ್ದು, ಮುಂದೆ ಕೋರ್ಟ್ ತೀರ್ಮಾನಕ್ಕೆ ಬದ್ಧವಾಗಿ ಮುಂದುವರಿಯುತ್ತೇವೆ ಎಂದು ಪ್ರತಿಭಾ ಕುಳಾಯಿ ಹೇಳಿದರು.
ಪುತ್ತಿಲ ಪೂಜಾ ಕಲ್ಯಾಣ ಮಾಡಿಸಲಿ
ಪುತ್ತೂರಿನಲ್ಲಿ ಹಿಂದು ನಾಯಕ ಎನಿಸಿದ ಅರುಣ್ ಕುಮಾರ್ ಪುತ್ತಿಲ ಅವರು ಶ್ರೀನಿವಾಸ ದೇವರಿಗೆ ಕಲ್ಯಾಣ ಉತ್ಸವವನ್ನು ಅದ್ದೂರಿಯಾಗಿ ನೆರವೇರಿಸಿದ್ದಾರೆ. ಶ್ರೀನಿವಾಸ ದೇವರಿಗೆ ಯಾವಾಗಲೋ ಕಲ್ಯಾಣ ಆಗಿದೆ. ಈಗ ಆಗಬೇಕಾಗಿರುವುದು ಪೂಜಾಳಿಗೆ. ಅವಳಿಗೆ ಕೃಷ್ಣ ಜೆ.ರಾವ್ ಜೊತೆ ಕಲ್ಯಾಣ ಮಾಡಿಸುವ ಬಗ್ಗೆ ಪುತ್ತಿಲ ಮನಸ್ಸು ಮಾಡಲಿ ಎಂದು ಗೌರವಪೂರ್ವಕವಾಗಿ ಕೇಳಿಕೊಳ್ಳುತ್ತೇನೆ ಎಂದು ಪ್ರತಿಭಾ ಕುಳಾಯಿ ಹೇಳಿ
ನಾನು ತಪ್ಪು ಮಾಡಿದ್ದೇನೆ. ಹೇಗೂ ತಪ್ಪಾಗಿ ಹೋಗಿದೆ. ಈಗ ಮಗುವಿನ ತಂದೆ ಯಾರು ಎಂದು ಯಾರಾದರೂ ಕೇಳಿದರೆ ನಾನು ಏನೆಂದು ಹೇಳಲಿ, ಅದನ್ನು ನೆನೆಸುವಾಗ ಸಾಯುವ ಎಂದಾಗುತ್ತಿದೆ.
-ಪೂಜಾ, ಸಂತ್ರಸ್ತೆ
ನನ್ನ ಮಗಳಿಂದ ತಪ್ಪಾಗಿದೆ, ಆತನೂ ತಪ್ಪು ಮಾಡಿದ್ದಾನೆ. ಇದು ಅವರದೇ ಮಗು ಎಂಬುದು ಡಿಎನ್‌ಎ ಪರೀಕ್ಷೆಯಲ್ಲೂ ಸಾಬೀತಾಗಿದೆ. ನಮಗೆ ನ್ಯಾಯ ಕೊಡಿಸಿ, ನ್ಯಾಯ ಬೇಕು. ಆತ ಪೂಜಾಳನ್ನು ಮದುವೆ ಆಗಿ ಒಳ್ಳೆಯದರಲ್ಲಿ ಸಂಸಾರ ನಡೆಸಬೇಕು.
-ನಮಿತಾ, ಸಂತ್ರಸ್ತೆಯ ತಾಯಿ


