Asianet Suvarna News Asianet Suvarna News

ರಾಯಚೂರು: ಮಂತ್ರಾಲಯದಲ್ಲಿ ಸಂಭ್ರಮದ ರಾಯರ ಪೂರ್ವಾರಾಧನೆ ಮಹೋತ್ಸವ

ತುಂಗಭದ್ರಾ ‌ನದಿ ತೀರದಲ್ಲಿ ಸ್ನಾನ ಮಾಡಿ ರಾಯರ ದರ್ಶನ ಪಡೆದ ಭಕ್ತರ ದಂಡು

Purvaradhana Mahotsava Held at Raghavendra Swamy Matha in Mantralayam grg
Author
Bengaluru, First Published Aug 12, 2022, 1:30 PM IST

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು

ರಾಯಚೂರು(ಆ.12):  ಕಲಿಯುಗ ಕಾಮಧೇನು ಶ್ರೀಗುರು ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ಸಂಭ್ರಮದಿಂದ ಆಚರಿಸಲಾಗುತ್ತಿದೆ‌‌. ಇಂದು(ಶುಕ್ರವಾರ) ಮಂತ್ರಾಲಯ ಮಠದಲ್ಲಿ ರಾಯರ ಪೂರ್ವಾರಾಧನೆ ಸಂಭ್ರಮ ಮನೆ ಮಾಡಿತ್ತು. ರಾಯರು 700 ವರ್ಷ ಕಾಲ ವೃಂದಾವನದಲ್ಲಿರುತ್ತಾರೆ ಅನ್ನೋ ಪ್ರತೀತಿಯಿದೆ. ಹೀಗಾಗಿ ಪ್ರತಿ ವರ್ಷ ಮಂತ್ರಾಲಯ ‌ಮಠದಲ್ಲಿ ಸಪ್ತರಾತೋತ್ಸವ ಆಚರಣೆ ಮಾಡಲಾಗುತ್ತಿದೆ. ಪೂರ್ವಾರಾಧನೆ ಇಂದು ವಿಶೇಷ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀಮಠದಲ್ಲಿ ನಡೆಯುತ್ತಿವೆ. 

ಮಂತ್ರಾಲಯಕ್ಕೆ ಬಂತು ತಮಿಳುನಾಡಿನ ಶ್ರೀರಂಗಂನಿಂದ ವಸ್ತ್ರ

ಕೇಳಿದ ವರವನ್ನು ನೀಡುವ ದೇವರು ಅಂದ್ರೆ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮೀಜಿಗಳು. ತುಂಗಭದ್ರಾ ನದಿ ತಟ್ಟದಲ್ಲಿ ನೆಲೆಸಿರುವ ರಾಯರ ಮಠದಲ್ಲಿ ಈಗ ಆರಾಧನಾ ಮಹೋತ್ಸವ ‌ನಡೆಯುತ್ತಿದೆ. ರಾಯರು ಸಶರೀರರಾಗಿ ವೃಂದಾವನಸ್ಥರಾದ ದಿನದ ಮುಂಚೆಯ ದಿನವನ್ನು ಪೂರ್ವಾರಾಧನೆಯಾಗಿ ಮಂತ್ರಾಲಯ ಸೇರಿದಂತೆ ದೇಶದ ಎಲ್ಲಾ ರಾಯರ ಮಠಗಳಲ್ಲಿ ಆಚರಿಸಲಾಗುತ್ತಿದೆ. ಬೆಳಿಗ್ಗೆಯಿಂದಲೇ ಶ್ರೀಮಠದಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.

ರಾಯರ 351ನೇ ಆರಾಧನೆಗೆ ವಿದ್ಯುಕ್ತ ಚಾಲನೆ: ವಿದ್ಯುದ್ದೀಪ, ಹೂಗಳ ಅಲಂಕಾರದಿಂದ ಕಂಗೊಳಿಸುತ್ತಿದೆ

ನಿರ್ಮಾಲ್ಯ ವಿಸರ್ಜನೆ, ಉತ್ಸವ ರಾಯರ ಪಾದಪೂಜೆ, ಪಂಚಾಮೃತ ಅಭಿಷೇಕ, ರಜತ ಸಿಂಹವಾಹನೋತ್ಸವ ನಡೆಯುತ್ತಿವೆ. ಅದರಲ್ಲೂ ಈ ವರ್ಷ ತಮಿಳುನಾಡು ಸರ್ಕಾರದ ನಿರ್ದೇಶನ ಮೇರೆಗೆ ಮುಜರಾಯಿ ಇಲಾಖೆಯ ಅಧಿಕಾರಿಗಳು ಶ್ರೀರಂಗಂನ ಶ್ರೀರಂಗನಾಥ ದೇವಸ್ಥಾನ ಹಾಗೂ ಕುಂಬಕೋಣಂನ ಉಪ್ಪಲಿ ಅಪ್ಪನ್ ದೇವಾಲಯದಿಂದ ರಾಯರಿಗೆ ವಸ್ತ್ರ ರೂಪದ ಪ್ರಸಾದ ತೆಗೆದುಕೊಂಡು ಬಂದ ಅರ್ಪಣೆ ಮಾಡಲಾಯ್ತು. ತಮಿಳುನಾಡಿನ ಶ್ರೀರಂಗಂನಿಂದ ತಂದಿರುವ ವಸ್ತ್ರ ವನ್ನು ಮಂತ್ರಾಲಯ ‌ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ವಿವಿಧ ಕಲಾ-ತಂಡಗಳ ವಾದ್ಯಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಯ್ತು. ಈ ವೇಳೆ ದೇಶದ ಮೂಲೆ ಮೂಲೆಗಳಿಂದ ಬಂದ ಭಕ್ತರು ಶ್ರೀಮಠದ ಪ್ರಾಂಗಣದಲ್ಲಿ ಉರುಳು ಸೇವೆ, ಹೆಜ್ಜೆ ಸೇವೆ ಸೇರಿದಂತೆ ನಾನಾ ಸೇವೆಗಳು ಸಲ್ಲಿಸಿ ರಾಯರ ಮೂಲ ಬೃಂದಾವನದ ದರ್ಶನ ಪಡೆದರು. ಇತ್ತ ಶ್ರೀಮಠದಿಂದ ಪ್ರಾಂಗಣದಲ್ಲಿ ರಾಯರು ರಚಿಸಿರುವ ಪರಿಮಳ ಗ್ರಂಥವನ್ನು ಪಲ್ಲಕ್ಕಿಯಲ್ಲಿ ಇಟ್ಟು ಪ್ರಾಂಗಣದಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು.

ರಾಯರ ಪೂರ್ವಾರಾಧನೆ ಎಂದರೇನು? 

ಪೂರ್ವಾರಾಧನೆ ಅಂದ್ರೆ ರಾಯರು ಸಶರೀರರಾಗಿ ಬೃಂದಾವನಸ್ಥರಾದ ದಿನದ ಮುಂಚೆಯ ದಿನವನ್ನು ಶ್ರೀಮಠದಲ್ಲಿ ಪೂರ್ವಾರಾಧನೆ ಎಂದು ಆಚರಿಸುತ್ತಾರೆ. ಈ ದಿನದಿಂದ ಮೂರು ದಿನಗಳ ಕಾಲ ಮಂತ್ರಾಲಯ ಮಠದಲ್ಲಿ ಆರಾಧನಾ ಮಹೋತ್ಸವ ನಡೆಯುತ್ತೆ. ಪೂರ್ವಾರಾಧನೆ ಮುಗಿದ ಬಳಿಕ ಮಧ್ಯಾರಾಧನೆ ನಡೆಯುತ್ತೆ. ಆ ನಂತರ ಉತ್ತರಾಧನೆ ನಡೆಯುವುದು. ಈ ರಾಯರ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಲು ದೇಶದ ಮೂಲೆ ಮೂಲೆಗಳಿಂದ ಭಕ್ತರು ಮಂತ್ರಾಲಯ ಮಠಕ್ಕೆ ಬಂದು ರಾಯರ ಸೇವೆ ಸಲ್ಲಿಸುತ್ತಾರೆ. ಮೂರು ದಿನಗಳು‌ ಅತಿ ಮಹತ್ವದ ದಿನಗಳಾಗಿದ್ದು, ರಾಘವೇಂದ್ರ ಸ್ವಾಮಿಗಳು ಬೃಂದಾವನಸ್ಥರಾಗಿರುವ ಈ ದಿನಗಳಲ್ಲಿ ರಾಯರ ದರ್ಶನ ಪಡೆದರೆ ಸಕಲ ಸಂಕಷ್ಡಗಳು ದೂರಾಗುತ್ತವೆ ಎಂಬ ನಂಬಿಕೆ ಭಕ್ತರದ್ದಾಗಿದೆ. ಹೀಗಾಗಿ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ರಾಯರಿಗೆ ಭಕ್ತಿ ಸೇವೆಯನ್ನ ಸಮರ್ಪಿಸಿದರು.

ಮಂತ್ರಾಲಯದಲ್ಲಿ ಕರ್ನಾಟಕ ಛತ್ರ ಲೋಕಾರ್ಪಣೆ

ಮಂತ್ರಾಲಯ ‌ಮಠದಿಂದ ಅನುಗ್ರಹ ಪ್ರಶಸ್ತಿ ವಿತರಣೆ: 

ಮಂತ್ರಾಲಯದಲ್ಲಿ ರಾಯರ ಆರಾಧನಾ ‌ಮಹೋತ್ಸವ ವೇಳೆಯಲ್ಲಿ ಶ್ರೀಮಠದ ಯೋಗಿಂದ್ರ ಮಂಟಪದಲ್ಲಿ ಸಂಜೆ ವಿವಿಧ ಸಾಂಸ್ಕೃತಿಕ‌ ಕಾರ್ಯಕ್ರಮಗಳು ಜೊತೆಗೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆಗೈದ ಸಾಧಕರಿಗೆ  ರಾಘವೇಂದ್ರ ಸ್ವಾಮಿಗಳ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಒಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಸರಳವಾಗಿ ಆಚರಣೆ ಮಾಡಿದ ರಾಯರ ಆರಾಧನಾ ‌ಮಹೋತ್ಸವ ಈ ವರ್ಷ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇಡೀ ಶ್ರೀಮಠ ವಿವಿಧ ಹೂಗಳಿಂದ ಹಾಗೂ ದೀಪಾಂಲಕಾರ ಮಾಡಲಾಗಿದೆ. ತಮಗೂ ಸಮಯ ಸಿಕ್ಕರೆ ಮಂತ್ರಾಲಯಕ್ಕೆ ಆಗಮಿಸಿ ರಾಯರ ದರ್ಶನ ಪಡೆಯಬಹುದಾಗಿದೆ.
 

Follow Us:
Download App:
  • android
  • ios