ರಾಯರ 351ನೇ ಆರಾಧನೆಗೆ ವಿದ್ಯುಕ್ತ ಚಾಲನೆ: ವಿದ್ಯುದ್ದೀಪ, ಹೂಗಳ ಅಲಂಕಾರದಿಂದ ಕಂಗೊಳಿಸುತ್ತಿದೆ ಮಂತ್ರಾಲಯ
ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವದ ಅಂಗವಾಗಿ ಸಪ್ತರಾತ್ರೋತ್ಸವ ಕಾರ್ಯಕ್ರಮಕ್ಕೆ ಶ್ರೀ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ವಿದ್ಯುಕ್ತ ಚಾಲನೆ ನೀಡಿದರು.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ರಾಯಚೂರು (ಆ.11): ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವದ ಅಂಗವಾಗಿ ಸಪ್ತರಾತ್ರೋತ್ಸವ ಕಾರ್ಯಕ್ರಮಕ್ಕೆ ಶ್ರೀ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ವಿದ್ಯುಕ್ತ ಚಾಲನೆ ನೀಡಿದರು. ಶ್ರೀಮಠದ ಮುಂಭಾಗದಲ್ಲಿ ವಿವಿಧ ವಾದ್ಯ ಮೇಳಗಳೊಂದಿಗೆ ಆಗಮಿಸಿದ ಶ್ರೀಗಳು ಗೋಪೂಜೆ, ಆಶ್ವ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಧ್ವಜಾರೋಹಣವನ್ನು ನೆರವೇರಿಸಿದರು. ಆರಾಧನೆ ಪ್ರಯುಕ್ತ ಶ್ರೀಮಠವನ್ನು ವಿದ್ಯುದ್ದೀಪಗಳಿಂದ, ಹೂಗಳಿಂದ ಅಲಂಕರಿಸಲಾಗಿದೆ.
ಇದೇ ಮಠದ ಮುಂಭಾಗದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿದ ಮಧ್ವಮಾರ್ಗವನ್ನು ಶ್ರೀಮಠದ ಪೀಠಾಧಿಪತಿಗಳು ಸಾಂಕೇತಿಕವಾಗಿ ಲೋಕಾರ್ಪಣೆ ಮಾಡಿದರು. ಮಧ್ವಮಾರ್ಗದ ಉಭಯ ಕಡೆ ಬೃಹತ್ ಗೋಡೆಗಳ ನಿರ್ಮಾಣ ಮಾಡಿದ್ದು, ಗೋಡೆಗಳ ಮೇಲೆ ಪೌರಾಣಿಕ ಸನ್ನಿವೇಶಗಳು, ರಾಯರ ಜೀವನ ಚರಿತ್ರೆ, ಶ್ರೀ ವಿಷ್ಣುವಿನ ಲೀಲೆಗಳ ಚಿತ್ರಗಳನ್ನು ಬಿಡಿಸಲಾಗಿದೆ. ಮಧ್ವಮಾರ್ಗದಿಂದ ರಥಬೀದಿ ಎಂದಿಗಿಂತ ಅತ್ಯಾಕರ್ಷಕವಾಗಿ ಕಂಗೊಳಿಸುತ್ತಿದೆ. ಬಳಿಕ ಯೋಗೀಂದ್ರ ಸಭಾಮಂಟಪದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶ್ರೀಗಳು ಚಾಲನೆ ನೀಡಿದರು.
ಮಂತ್ರಾಲಯ: ಇಂದಿನಿಂದ ರಾಯರ 351ನೇ ಆರಾಧಾನಾ ಮಹೋತ್ಸವ
ಈ ವೇಳೆ ಆಶೀರ್ವಚನ ನೀಡಿದ ಶ್ರೀಗಳು, ಈ ಬಾರಿ ಆರಾಧನೆಗೆ ಭಕ್ತರು ಹೆಚ್ಚಾಗಿ ಬರುವ ನಿರೀಕ್ಷೆ ಇರುವ ಕಾರಣ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವ ಕಾರಣ ಭಕ್ತರು ಪುಣ್ಯಸ್ನಾನಕ್ಕೆ ನದಿಗೆ ಇಳಿಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಬ್ಯಾರಿಕೇಡ್ ಅಳವಡಿಸಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ನದಿ ತೀರದಲ್ಲಿ ನೂರಾರು ಶವರ್‌ಗಳ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ವಸತಿ, ಪ್ರಸಾದ, ಸ್ನಾನ, ಆರೋಗ್ಯ ಸೇರಿದಂತೆ ಅಗತ್ಯ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ. ಭಕ್ತರು ನಿರ್ಭೀತಿಯಿಂದ ಆರಾಧನೆಗೆ ಬಂದು ರಾಯರ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.
ಮಂತ್ರಾಲಯದಲ್ಲಿ ಕರ್ನಾಟಕ ಛತ್ರ ಲೋಕಾರ್ಪಣೆ
ಮಠದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಆ.12ರಂದು ಪೂರ್ವಾರಾಧನೆ, 13ರಂದು ಮಧ್ಯಾರಾಧನೆ ಹಾಗೂ 14ರಂದು ಉತ್ತಾರಾರಾಧನೆ ಜರುಗಲಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು. ಇನ್ನೂ ಈ ವೇಳೆ ಶ್ರೀಮಠದ ಪಂಡೀತರಾದ ರಾಜಾ ಗಿರಿಯಾಚಾರ್, ಸಂಸ್ಕೃತ ವಿದ್ಯಾಪೀಠ ಪಾಠಶಾಲೆಯ ವಾದಿರಾಜಾಚಾರ್, ವ್ಯವಸ್ಥಾಪಕರಾದ ಶ್ರೀನಿವಾಸಾಚಾರ್, ವೆಂಕಟೇಶ ಜೋಶಿ, ಛಲಪತಿ ಸೇರಿದಂತೆ ಶ್ರೀಮಠದ ಸಿಬ್ಬಂದಿ ಹಾಗೂ ಸಾವಿರಾರು ಭಕ್ತರು ಭಕ್ತರು ಭಾಗವಹಿಸಿದರು.