ವರದಿ : ಮಂಡ್ಯ ಮಂಜುನಾಥ್‌

 ಮಂಡ್ಯ (ಫೆ.15):  ಪುಲ್ವಾಮಾ ಉಗ್ರರ ದಾಳಿಗೆ ಬಲಿಯಾದ ವೀರಯೋಧ ಗುರು ಸ್ಮರಣಾರ್ಥ ಸಮಾಧಿ ನಿರ್ಮಾಣ ಕಾರ್ಯ ಎರಡು ವರ್ಷವಾದರೂ ಪೂರ್ಣಗೊಂಡಿಲ್ಲ. ಮೊದಲು ಸಮಾಧಿ ನಿರ್ಮಾಣಕ್ಕೆ ನಿಗದಿಯಾಗಿದ್ದ ಜಾಗದಲ್ಲಿ ಕಾಮಗಾರಿ ನಡೆಸಲು ಮುಂದಾದ ವೇಳೆ ವಿವಾದ ಉಂಟಾಗಿದ್ದರಿಂದ ಸರ್ವೇ ಕಾರ್ಯ ನಡೆಸಿ ಇದೀಗ ಪಕ್ಕದ ಜಾಗದಲ್ಲಿ ಸಮಾಧಿ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಸಮೀಪವಿರುವ ಗುಡಿಗೆರೆ ಕಾಲೋನಿಯ ವೀರಯೋಧ ಗುರು ಫೆ.14, 2019ರಂದು ನಡೆದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಪುಲ್ವಾಮಾ ಬಳಿ ಉಗ್ರರು ನಡೆಸಿದ ದಾಳಿಯಲ್ಲಿ ವೀರಮರಣವನ್ನಪ್ಪಿದ್ದರು. ವೀರಯೋಧನ ಸ್ಮರಣಾರ್ಥ ಸಮಾಧಿ ನಿರ್ಮಾಣಕ್ಕೆ ಒತ್ತಡಗಳು ಕೇಳಿಬಂದಾಗ ಮದ್ದೂರು-ಮಳವಳ್ಳಿ ಹೆದ್ದಾರಿ ಪಕ್ಕದ ಮೆಳ್ಳಹಳ್ಳಿ ಬಳಿ ಗುರುಅಂತ್ಯಕ್ರಿಯೆ ನಡೆಸಿ ಸಮಾಧಿ ಜಾಗದಲ್ಲೇ ಸ್ಮಾರಕ ನಿರ್ಮಿಸಲು ನಿರ್ಧರಿಸಲಾಯಿತು. ರಾಜ್ಯಸರ್ಕಾರ ಸಮಾಧಿ ನಿರ್ಮಾಣಕ್ಕೆ 25 ಲಕ್ಷ ರು. ಹಣವನ್ನೂ ಬಿಡುಗಡೆ ಮಾಡಿತ್ತು.

ಪುಲ್ವಾಮಾ ಹುತಾತ್ಮ, ಮದ್ದೂರಿನ ಗುರು ಸಮಾಧಿಗೆ ಗ್ರಹಣ, ಚಿತ್ತ ಹರಿಸದ ಸರ್ಕಾರ

ಆ ನಂತರದಲ್ಲಿ ಗುರು ಸಮಾಧಿ ಸ್ಥಳ ಪ್ರೇಕ್ಷಣೀಯ ಸ್ಥಳವಾಗಿ ಬದಲಾಗಿತ್ತು. ಹೆದ್ದಾರಿಯಲ್ಲಿ ತೆರಳುವವರೆಲ್ಲರೂ ಸಮಾಧಿ ಸ್ಥಳಕ್ಕೆ ಬಂದು ಸೆಲ್ಫೀ ತೆಗೆದುಕೊಂಡು ಖುಷಿಪಡುತ್ತಿದ್ದರು. ಪ್ರವಾಸಿ ತಾಣವಾಗಿ ಬದಲಾಗಿದ್ದ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿ ಅದರ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಯಿತು.

ಗುರು ಸಮಾಧಿ ನಿರ್ಮಾಣಕ್ಕೆ ಜಾಗ ನಿಗದಿಪಡಿಸಿದ ಸಂದರ್ಭದಲ್ಲಿ ಗ್ರಾಮದ ಜನರಿಂದ ಯಾವುದೇ ಆಕ್ಷೇಪ ಅಥವಾ ಸಮಸ್ಯೆಗಳು ಉದ್ಭವವಾಗಿರಲಿಲ್ಲ. ಆ ಜಾಗಕ್ಕೆ ಮಣ್ಣು ಹಾಕಿ ಅದು ಕುಸಿಯದಂತೆ ಕಲ್ಲು ಹಾಕಿ ರಿವಿಟ್‌ ಮಾಡಿದ ಸಮಯದಲ್ಲಿ ಹೆದ್ದಾರಿ ಪಕ್ಕದ ಜಮೀನು ನಮ್ಮದು ಎಂದು ಗ್ರಾಮಸ್ಥರೊಬ್ಬರು ಆಕ್ಷೇಪವೆತ್ತಿ ತಡೆಯೊಡ್ಡಿದರು. ಇದರಿಂದ ಸಮಾಧಿ ನಿರ್ಮಾಣ ಕಾರ್ಯಕ್ಕೆ ಹಿನ್ನಡೆಯಾಯಿತು.

ಜಿಲ್ಲಾಡಳಿತ ಭೂ ಸ್ವಾಧೀನ ಇಲಾಖೆ ಅಧಿಕಾರಿಗಳು, ಸರ್ವೇ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳಿಂದ ಸರ್ವೇ ನಡೆಸಿದ ಸಂದರ್ಭದಲ್ಲಿ ಅದು ಖಾಸಗಿಯವರಿಗೆ ಸೇರಿದ ಜಾಗ ಎನ್ನುವುದು ಖಚಿತಪಟ್ಟಿತು. ಆನಂತರದಲ್ಲಿ ನಿರ್ದಿಷ್ಟಗಡಿ ಗುರುತಿಸಿ 6 ಗುಂಟೆ ಜಾಗದಲ್ಲಿ ಸಮಾಧಿ ನಿರ್ಮಾಣ ಕಾರ್ಯಕ್ಕೆ ಮೊದಲು ನಿಗದಿ ಪಡಿಸಿದ್ದ ಜಾಗದ ಪಕ್ಕದಲ್ಲೇ ಸಮಾಧಿಗೆ ಜಮೀನು ನಿಗದಿ ಪಡಿಸಲಾಯಿತು.

ಇದೀಗ ಅಲ್ಲಿ ಬೋರ್ವೆಲ್ ನಿರ್ಮಾಣ ಮಾಡಲಾಗಿದೆ. ಮಣ್ಣುತುಂಬಿ ಅದು ಕುಸಿಯದಂತೆ ಸುತ್ತ ಕಲ್ಲುಗಳನ್ನು ಕಟ್ಟುವ ಕೆಲಸ ನಡೆಸಲಾಗುತ್ತಿದೆ. ನಿರ್ಮಿತಿ ಕೇಂದ್ರದವರೇ ಮುತುವರ್ಜಿಯಿಂದ ಕಾಮಗಾರಿಯನ್ನು ನಿರ್ವಹಿಸುತ್ತಿದ್ದಾರೆ. ಜಾಗದ ಸಮಸ್ಯೆಎದುರಾಗದಿದ್ದರೆ ಸಮಾಧಿ ನಿರ್ಮಾಣಕಾರ್ಯ ಪೂರ್ಣಗೊಳ್ಳುತ್ತಿತ್ತು ಎಂದು ನಿರ್ಮಿತಿ ಕೇಂದ್ರದ ನರೇಶ್‌ ತಿಳಿಸಿದರು.

ಆರುಗುಂಟೆ ಪ್ರದೇಶದಲ್ಲಿ ನಿರ್ಮಾಣವಾಗುವ ಸ್ಮಾರಕವನ್ನು ಆಕರ್ಷಣೀಯವಾಗಿ ನಿರ್ಮಿಸಲು ಉದ್ದೇಶಿಸಲಾಗಿದೆ. ನಿಗದಿತ ಪ್ರದೇಶದ ಸುತ್ತಲೂ ಫೆನ್ಸಿಂಗ್‌ ಅಳವಡಿಸಿ, ಮಧ್ಯಭಾಗದಲ್ಲಿ ಸ್ಮಾರಕವಿದ್ದು ಸುತ್ತಲೂ ಫುಟ್ಪಾತ್‌ ನಿರ್ಮಿಸುವುದು. ಒಳಭಾಗದಲ್ಲಿ ಉದ್ಯಾನವನ ನಿರ್ಮಾಣ ಮಾಡಿ ಪ್ರವಾಸಿಗರನ್ನು ಆಕರ್ಷಿಸುವ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ.

ಸ್ಮಾರಕ ನಿರ್ಮಾಣಕ್ಕೆ ಅಗತ್ಯವಿರುವಷ್ಟುಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು ಇನ್ನೊಂದು ವರ್ಷದೊಳಗೆ ಸಮಾಧಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ನಿರ್ಮಿತಿ ಕೇಂದ್ರದ ನರೇಶ್‌ ತಿಳಿಸಿದರು.