ಅಣ್ಣೂರು ಸತೀಶ್‌

ಭಾರತೀನಗರ[ಫೆ.14]: ಕಳೆದ ವರ್ಷ ಫೆ.14ರಂದು ಪುಲ್ವಾಮಾ ದಾಳಿಯಲ್ಲಿ ವೀರ ಮರಣ ಹೊಂದಿದ ಮಂಡ್ಯ ಜಿಲ್ಲೆಯ ಗುಡಿಗೆರೆ ವೀರ ಯೋಧ ಗುರುವಿನ ಸಮಾಧಿ, ಒಂದು ವರ್ಷವಾದರೂ ಯಾವುದೇ ಅಭಿವೃದ್ಧಿ ಕಂಡಿಲ್ಲ. ವರ್ಷದ ಹಿಂದೆ ಯಾವ ಸ್ಥಿತಿಯಲ್ಲಿತ್ತೋ ಇಂದಿಗೂ ಅದೇ ಸ್ಥಿತಿಯಲ್ಲಿದೆ. ಜಿಲ್ಲಾಡಳಿತ ಹಾಗೂ ಕುಟುಂಬಸ್ಥರ ನಿರ್ಲಕ್ಷ್ಯದಿಂದ ಸಮಾಧಿ ಅನಾಥವಾಗಿದ್ದು, ಸಮಾಧಿ ಸ್ಥಳದಲ್ಲಿ ಗುರುವಿನ ಭಾವಚಿತ್ರಕ್ಕೆ ಒಣಗಿದ ಹೂವಿನ ಹಾರ ಹಾಕಿರುವುದನ್ನು ಹೊರತು ಪಡಿಸಿ ಎಳ್ಳಷ್ಟೂಪ್ರಗತಿ ಕಂಡಿಲ್ಲ.

ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಮಾನವ ಬಾಂಬ್‌ ದಾಳಿಗೆ ಗುರು ಸೇರಿದಂತೆ 40 ಯೋಧರು ವೀರಮರಣವನ್ನಪ್ಪಿದ್ದರು. ಈ ವೇಳೆ ಇಡೀ ದೇಶವೇ ಮರುಗಿತ್ತು. ಅದರಲ್ಲೂ ರಾಜ್ಯದ ಜನತೆ ಗುರು ಸಾವಿಗೆ ಸಂತಾಪದ ಮಹಾಪೂರವನ್ನೇ ಹರಿಸಿದ್ದರು. ಅವರ ಕುಟುಂಬಸ್ಥರಿಗೆ ನೆರವಿನ ಮಹಾಪೂರವೇ ಹರಿದು ಬಂದಿತ್ತು.

ಹುತಾತ್ಮ ಯೋಧ ಗುರು ಕುಟುಂಬದಲ್ಲಿ ಬಿರುಕು; ಅತ್ತೆ ಸೊಸೆ ಜಗಳ ಬೀದಿಗೆ

ಈ ವೇಳೆ ತಾಲೂಕು ಆಡಳಿತ ಮತ್ತು ಸ್ಥಳೀಯ ಶಾಸಕ ಡಿ.ಸಿ.ತಮ್ಮಣ್ಣ ಒಗ್ಗೂಡಿ ಗುಡಿಗೆರೆ ಎಳನೀರು ಮಾರುಕಟ್ಟೆಸಮೀಪ ಸಮಾಧಿ ಸ್ಥಳವನ್ನು ಗುರುತಿಸಿದ್ದರು. ಆದರೆ, ಸ್ಥಳೀಯರ ಸಲಹೆ ಮೇರೆಗೆ ಮದ್ದೂರು-ಮಳವಳ್ಳಿ ಮುಖ್ಯರಸ್ತೆ ಪಕ್ಕದಲ್ಲಿ 10 ಗುಂಟೆ ವಿಸ್ತೀರ್ಣದ ಜಮೀನನಲ್ಲಿ ಸಮಾಧಿಗಾಗಿ ಸ್ಥಳವನ್ನು ಅಂತಿಮಗೊಳಿಸಲಾಗಿತ್ತು. ಸ್ಥಳ ನಿಗದಿಯಾಗುತ್ತಿದ್ದಂತೆ ರಾತ್ರೋರಾತ್ರಿ ಆ ಸ್ಥಳವನ್ನು ಸ್ವಚ್ಛಗೊಳಿಸಿ, ಸಮಾಧಿ ನಿರ್ಮಾಣಕ್ಕೆ ಸಿದ್ಧತೆ ಕೈಗೊಳ್ಳಲಾಗಿತ್ತು. ಅಧಿಕಾರಿಗಳು ಸಮಾಧಿ ಅಭಿವೃದ್ಧಿ ಪಡಿಸುವ ರಣೋತ್ಸಾಹ ತೋರಿದ್ದರು. ಆದರೆ, ದಿನ ಕಳೆದಂತೆ ಈ ಉತ್ಸಾಹ ಮಂಜಿನ ಹನಿಯಂತೆ ಕರಗಿ ಹೋಗಿತ್ತು.

ಆಸ್ತಿಗಾಗಿ ಸಂಘರ್ಷ?:

ಅಧಿಕಾರಿಗಳ ಜತೆ ಗುರುವಿನ ಕುಟುಂಬಸ್ಥರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಲೇ ಇಲ್ಲ. ಗುರು ಸಾವಿನ ನಂತರ ಅವರ ಕುಟುಂಬಕ್ಕೆ ಸಾಕಷ್ಟುನೆರವು ಹರಿದು ಬಂದಿತ್ತು. ಹೀಗೆ ಬಂದ ಹಣ, ಆಸ್ತಿ ಹಂಚಿಕೆ ವಿಚಾರವಾಗಿ ಗುರುವಿನ ಪತ್ನಿ, ತಾಯಿ ಹಾಗೂ ಸಹೋದರನ ನಡುವೆ ಸಂಘರ್ಷವೇ ನಡೆದಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಒಟ್ಟಾರೆ ಜಿಲ್ಲಾಡಳಿತ ಹಾಗೂ ಕುಟುಂಬಸ್ಥರ ನಿರ್ಲಕ್ಷ್ಯದಿಂದ ವೀರ ಯೋಧ ಗುರುವಿನ ಸಮಾಧಿ ಅಭಿವೃದ್ಧಿ ಕಾರ್ಯ ಹಳ್ಳ ಹಿಡಿದಿದ್ದು, ಇನ್ನಾದರೂ ಸರ್ಕಾರ ಇದರತ್ತ ಗಮನ ಹರಿಸುವುದೇ? ವೀರ ಯೋಧನಿಗೆ ಗೌರವ ಸಲ್ಲಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.