ದಾವಣಗೆರೆಯಲ್ಲಿ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣದಲ್ಲಿ, ನಾಯಿಗಳನ್ನು ಬಿಟ್ಟುಹೋಗಿದ್ದ ಮಾಲೀಕ ಶೈಲೇಶಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿ ನಡೆಸಿದ್ದ ಎರಡೂ ನಾಯಿಗಳು ಸೆರೆ ಕಾರ್ಯಾಚರಣೆ ವೇಳೆ ಆಂತರಿಕ ರಕ್ತಸ್ರಾವದಿಂದ ಸಾವನ್ನಪ್ಪಿವೆ.

ದಾವಣಗೆರೆ (ಡಿ.07): ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಯಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ನಿರ್ದಯವಾಗಿ ಬಿಟ್ಟು ಹೋಗಿದ್ದ ಆರೋಪಿಯನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಈ ದಾಳಿಯಲ್ಲಿ ಪಾಲ್ಗೊಂಡಿದ್ದ ಎರಡೂ ರಾಟ್‌ವೀಲರ್ ನಾಯಿಗಳು ಸೆರೆ ಕಾರ್ಯಾಚರಣೆಯ ವೇಳೆ ಮೃತಪಟ್ಟಿರುವ ದುರಂತ ಘಟನೆಯೂ ನಡೆದಿದೆ.

ನಾಯಿಗಳನ್ನು ಬಿಟ್ಟುಹೋಗಿದ್ದ ಆರೋಪಿ ಬಂಧನ

ಪೊಲೀಸರಿಂದ ಬಂಧಿತನಾದ ಆರೋಪಿಯು ದಾವಣಗೆರೆಯ ದೇವರಾಜ ಅರಸು ಬಡಾವಣೆ ನಿವಾಸಿ ಶೈಲೇಶಕುಮಾರ್ ಎಂದು ಗುರುತಿಸಲಾಗಿದೆ. ಈತ ದಾವಣಗೆರೆ ತಾಲ್ಲೂಕಿನ ಹೊನ್ನೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48ರ (NH 48) ಸರ್ವೀಸ್ ರಸ್ತೆಯಲ್ಲಿ ಎರಡು ರಾಟ್‌ವೀಲರ್ ನಾಯಿಗಳನ್ನು ಬಾಡಿಗೆ ಆಟೋದಲ್ಲಿ ತಂದು ಬಿಟ್ಟು ಹೋಗಿದ್ದ. ಇದೇ ನಾಯಿಗಳು ನಂತರ ಮಲ್ಲಶೆಟ್ಟಿಹಳ್ಳಿ ನಿವಾಸಿ ಅನಿತಾ ಅವರ ಮೇಲೆ ದಾಳಿ ನಡೆಸಿ ಕೊಂದು ಹಾಕಿದ್ದವು.

ದಾವಣಗೆರೆ ಗ್ರಾಮಾಂತರ ಠಾಣೆ ಸಿಪಿಐ ಅಣ್ಣಯ್ಯ ಕೆ.ಟಿ. ನೇತೃತ್ವದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಸ್ಥಳೀಯ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿಯು ಯಾರಿಂದ ನಾಯಿಗಳನ್ನು ಪಡೆದಿದ್ದ ಎಂಬ ಬಗ್ಗೆ ದಾಖಲೆಗಳನ್ನು ಕಲೆ ಹಾಕಿದರು. ಶೈಲೇಶ್‌ಕುಮಾರ್ ಅವರೇ ನಾಯಿಗಳನ್ನು ಬಿಟ್ಟವರು ಎಂದು ದೃಢಪಡುತ್ತಿದ್ದಂತೆ ಅವರನ್ನು ಬಂಧಿಸಲಾಗಿದೆ. ಬಂಧನದ ಬಳಿಕ ಪೊಲೀಸರು ಹೊನ್ನೂರು ಕ್ರಾಸ್ ಬಳಿ ನಾಯಿಗಳನ್ನು ಬಿಟ್ಟು ಹೋದ ಜಾಗದಲ್ಲಿ ಆರೋಪಿಯನ್ನು ಕರೆತಂದು ಸ್ಥಳ ಮಹಜರು ನಡೆಸಿದರು.

ಆಂತರಿಕ ರಕ್ತಸ್ರಾವದಿಂದ ನಾಯಿಗಳ ಸಾವು

ಇನ್ನೊಂದೆಡೆ, ಮಲ್ಲಶೆಟ್ಟಿಹಳ್ಳಿ ನಿವಾಸಿ ಅನಿತಾ ಎಂಬ ಮಹಿಳೆ ರಾತ್ರಿ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಈ ನಾಯಿಗಳು ದಾಳಿ ಮಾಡಿದ್ದವು. ಈ ವೇಳೆ ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನ ಮಾಡಿದರೂ ಸಾಧ್ಯವಾಗದೇ ಮಹಿಳೆ ಸುಮ್ಮನಾಗಿದ್ದಾರೆ. ಆಗ ನಾಯಿಗಳು ಮಹಿಳೆಗೆ ಸುಮಾರು 50ಕ್ಕೂ ಹೆಚ್ಚು ಬಾರಿ ಕಚ್ಚಿ ಗಾಯಗೊಳಿಸಿ, ಪ್ರಾಣ ತೆಗೆದಿದ್ದವು. ನಂತರ ಜನರು ನಾಯಿಗಳನ್ನು ಹುಡುಕಿ ಮನಸೋ ಇಚ್ಛೆ ಥಳಿಸಿದ್ದರು. ಇದೀಗ ಈ ಎರಡು ರಾಟ್‌ವೀಲರ್ ನಾಯಿಗಳು ಕೂಡ ದುರಂತ ಅಂತ್ಯ ಕಂಡಿವೆ. ಮಹಿಳೆಯ ಮೇಲೆ ದಾಳಿ ನಡೆಸಿದ ಬಳಿಕ ಸ್ಥಳೀಯರ ನೆರವಿನಿಂದ ನಾಯಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುವಾಗಲೇ, ಎರಡೂ ರಾಟ್‌ವೀಲರ್ ನಾಯಿಗಳು ತೀವ್ರ ನಿತ್ರಾಣಗೊಂಡಿದ್ದವು. ಬಳಿಕ ಅವು ಆಂತರಿಕ ರಕ್ತಸ್ರಾವದಿಂದ ಮೃತಪಟ್ಟಿವೆ ಎಂದು ವರದಿಯಾಗಿದೆ.

ಶ್ವಾನಪ್ರಿಯರಿಂದ ಮಾಲೀಕರ ವಿರುದ್ಧ ತೀವ್ರ ಆಕ್ರೋಶ

ಈ ಇಬ್ಬರ ಸಾವಿನ ಘಟನೆಯಿಂದ ದಾವಣಗೆರೆಯ ಶ್ವಾನಪ್ರಿಯರು ಮತ್ತು ಡಾಗ್ ಹ್ಯಾಂಡ್ಲರ್‌ಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯ ಡಾಗ್ ಹ್ಯಾಂಡ್ಲರ್ ನಂದೀಶ್ ಮತ್ತು ಶ್ವಾನಪ್ರೇಮಿ ಸಚಿನ್ ಸೇರಿದಂತೆ ಹಲವರು ಮಾತನಾಡಿ, "ನಾಯಿಗಳನ್ನು ಸಾಕಲಾಗದಿದ್ದರೆ, ಸಂಬಂಧಪಟ್ಟ ಇಲಾಖೆ ಅಥವಾ ಪ್ರಾಣಿ ದಯಾ ಸಂಘಕ್ಕೆ ನೀಡಬಹುದಿತ್ತು. ನಾಯಿಗಳಿಗೆ ಹುಚ್ಚು ಹಿಡಿದಿದ್ದರೆ ಅಥವಾ ಕಾಯಿಲೆ ಆಗಿದ್ದರೆ ದಯಾಮರಣಕ್ಕೆ ಅವಕಾಶವಿದೆ. ಆದರೆ ಹೀಗೆ ಬೀದಿಯಲ್ಲಿ ಬಿಟ್ಟು ಹೋಗಿ ಓರ್ವ ಮಹಿಳೆಯ ಸಾವಿಗೆ ಮತ್ತು ಅಮಾಯಕ ಪ್ರಾಣಿಗಳ ಸಾವಿಗೆ ಕಾರಣರಾದ ನಾಯಿಗಳ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ, ಮಾಲೀಕನ ನಿರ್ಲಕ್ಷ್ಯದ ಒಂದು ಕೃತ್ಯವು ಒಬ್ಬ ಮನುಷ್ಯನ ಅಮೂಲ್ಯ ಜೀವವನ್ನು ಬಲಿ ತೆಗೆದುಕೊಂಡಿದ್ದಲ್ಲದೆ, ಸಾಕಿದ ಪ್ರಾಣಿಗಳಿಗೂ ಬೀದಿಪಾಲಾಗಿ ಸಾವನ್ನಪ್ಪುವಂತೆ ಮಾಡಿದೆ. ಈ ಕುರಿತು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.