Asianet Suvarna News Asianet Suvarna News

ಬೆಂಗಳೂರು: ಚಿರತೆ ಹುಡುಕಾಟದಲ್ಲಿ ಸಿಬ್ಬಂದಿ ಜೊತೆ ಜನಜಾತ್ರೆ..!

ಗೊಂದಲದ ಗೂಡಾದ ಚಿರತೆ ಸೆರೆ ಕಾರ್ಯಾಚರಣೆ, ದಿನ ವಿಡೀ ಚಿರತೆಗಾಗಿ ಅರಣ್ಯ ಸಿಬ್ಬಂದಿ ಹುಡುಕಾಟ, ನೌಕರರ ಹಿಂದೆಯೇ ಟೀವಿ ಕ್ಯಾಮೆರಾಗಳ ಓಡಾಟ, ಜನರ ಆಗಮನ, ಇದರಿಂದ ಗದ್ದಲ

Public With Leopard Operation in Bengaluru grg
Author
First Published Dec 4, 2022, 8:00 AM IST

ಬೆಂಗಳೂರು(ಡಿ.04):  ನಗರದಲ್ಲಿ ಕೆಂಗೇರಿ ಸುತ್ತಮುತ್ತ ಅರಣ್ಯ ಪ್ರದೇಶಗಳಲ್ಲಿ ಸತತ ಮೂರನೇ ದಿನ ಚಿರತೆ ಸೆರೆ ಕಾರ್ಯಾಚರಣೆ ನಡೆಸಲಾಯಿತು. ಆದರೆ, ಈವರೆಗೂ ಚಿರತೆ ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಗೆ ಪತ್ತೆಯಾಗಿಲ್ಲ. ಈ ನಡುವೆ ವರದಿ ನೆಪದಲ್ಲಿ ಖಾಸಗಿ ಸುದ್ದಿ ವಾಹಿನಿಗಳು ಅರಣ್ಯ ಪ್ರದೇಶಕ್ಕೆ ತೆರಳಿ ಕ್ಯಾಮರಾ ಹಿಡಿದು ಓಡಾಟ ನಡೆಸುತ್ತಿದ್ದು, ಇದರಿಂದ ಸಾರ್ವಜನಿಕರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ. ಪರಿಣಾಮ ಸೂಕ್ಷ್ಮವಾಗಿ ನಡೆಯಬೇಕಾದ ಕಾರ್ಯಾಚರಣೆಯು ಗದ್ದಲದಿಂದ ಸಾಗುತ್ತಿದ್ದು, ಚಿರತೆ ಪತ್ತೆ ಮತ್ತಷ್ಟು ಕ್ಲಿಷ್ಟಕರವಾಗಿದೆ.

ಬುಧವಾರ ತಡರಾತ್ರಿ ಕೆಂಗೇರಿ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿತ್ತು. ಬಳಿಕ ಎರಡು ದಿನ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಕುರುಹು ಪತ್ತೆಯಾಗಿಲ್ಲ. ಶನಿವಾರ ದಿನವೀಡಿ ಉತ್ತರಹಳ್ಳಿ ಮುಖ್ಯ ರಸ್ತೆ, ಬನಶಂಕರಿ ಆರನೇ ಹಂತ, ಶೀಗಂಧ ಗುಡ್ಡ, ಓಂಕಾರ್‌ ಹಿಲ್ಸ್‌ ಸುತ್ತಮುತ್ತಲ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಕಗ್ಗಲಿಪುರ ಅರಣ್ಯ ವಲಯದ ಸಿಬ್ಬಂದಿ ಮೂರು ತಂಡಗಳು ಚಿರತೆ ಪತ್ತೆ ಕಾರ್ಯಾಚರಣೆ ನಡೆಸಿದರು. ಎಂದಿನಂತೆ ಚಿರತೆ ಸೆರೆ ಹಿಡಿಯಲು ಇಟ್ಟಿರುವ ಪಂಜರ, ಟ್ರ್ಯಾಪ್‌ ಕ್ಯಾಮರಾಗಳ ಸ್ಥಳವನ್ನು ಬದಲಾವಣೆ ಮಾಡಿದರು. ಜತೆಗೆ ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಸೂಚಿಸಿದರು.

Mysuru: ಯುವತಿ ಬಲಿ ಬೆನ್ನಲ್ಲೇ ಚಿರತೆಯನ್ನು ಕಂಡಲ್ಲಿ ಗುಂಡಿಕ್ಕಲು ಹತ್ತು ತಂಡ ರಚಿಸಿದ ಅರಣ್ಯ ಇಲಾಖೆ

ಗದ್ದಲದಲ್ಲಿ ಕಾರ್ಯಾಚರಣೆ

ಚಿರತೆ ಅತ್ಯಂತ ಸೂಕ್ಷ್ಮ ಪ್ರಾಣಿಯಾಗಿದ್ದು, ಮಾನವನನ್ನು ತಿನ್ನುವುದಿಲ್ಲ. ಕೇವಲ ರಕ್ಷಣೆಗಾಗಿ ದಾಳಿ ಮಾಡುತ್ತದೆ. ಅತ್ಯಂತ ನಾಚಿಕೆ ಸ್ವಭಾವದ ಚಿರತೆ ಮಾನವರಿಂದ ದೂರವಿರಲು ಬಯಸುತ್ತದೆ. ಸದ್ಯ ಕಾರ್ಯಾಚರಣೆ ನಡೆಸುತ್ತಿರುವ ತುರಹಳ್ಳಿ ಪ್ರದೇಶಕ್ಕೆ ಕಳೆದ ಎರಡು ದಿನಗಳಿಂದ ಸಾಕಷ್ಟುಟಿವಿ ಮಾಧ್ಯಮಗಳು ಹತ್ತಾರು ಕ್ಯಾಮರಾಗಳು, ಓಬಿ ವಾಹನಳೊಂದಿಗೆ (ಔಟ್‌ಡೋರ್‌ ಬ್ರಾಡ್‌ಕಾಸ್ಟ್‌) ಆಗಮಿಸುತ್ತಿವೆ. ಅರಣ್ಯ ಸಿಬ್ಬಂದಿ ಹಿಂದೆ ಹಿಂದೆಯೇ ಅರಣ್ಯ ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ವರದಿ, ವಿಡಿಯೋ ಚಿತ್ರೀಕರಣ ಎಂದು ತೆರಳುತ್ತಿದ್ದಾರೆ. ಮತ್ತೊಂದೆಡೆ ಟಿವಿ ಮಾಧ್ಯಮಗಳು ಬಂದಿವೆ ಎಂಬ ಕಾರಣಕ್ಕೆ ಸುತ್ತಮುತ್ತಲ ಜನರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದರಿಂದ ಸದ್ದಿಲ್ಲದೆ ನಡೆಯಬೇಕಾದ ಚಿರತೆ ಪತ್ತೆ ಕಾರ್ಯಾಚರಣೆಯು ಗದ್ದಲದಿಂದ ಸಾಗಿದೆ ಎಂದು ಅರಣ್ಯ ಅಧಿಕಾರಿಗಳೇ ಬೇಸರವ್ಯಕ್ತಪಡಿಸಿದರು.

Shivamogga: ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಬೋನಿಗೆ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಅನಗತ್ಯ ಭಯಭೀತಿ ಮೂಡಿಸುತ್ತಿದ್ದಾರೆ!

ಅರಣ್ಯ ಸುತ್ತಮುತ್ತ ವನ್ಯಜೀವಿಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಮೂರು ದಿನ ಕಾರ್ಯಾಚರಣೆ ನಡೆಸಿದರೂ ಚಿರತೆ ಓಡಾಡಿದ ಸ್ಥಳ ಪತ್ತೆಯಾಗಿಲ್ಲ, ಕಣ್ಣಿಗೂ ಬಿದ್ದಿಲ್ಲ. ಕಾಡಿಗೆ ಕ್ಯಾಮೆರಾದೊಂದಿಗೆ ತೆರಳಿ ಅನಗತ್ಯವಾಗಿ ಚಿರತೆ ಪತ್ತೆ ಕಾರ್ಯಾಚರಣೆಗೆ ಸಮಸ್ಯೆ ಮಾಡುತ್ತಿರುವುದಲ್ಲದೆ, ಗ್ರಾಫಿಕ್‌ ದೃಶ್ಯಾವಳಿಗಳನ್ನು ಟಿವಿಯಲ್ಲಿ ಪ್ರಸಾರ ಮಾಡಿ ಸಾರ್ವಜನಿಕರಲ್ಲಿ ಭಯಭೀತಿ ಮೂಡಿಸುತ್ತಿದ್ದಾರೆ. ಚಿರತೆ ನಗರಕ್ಕೆ ಬರಲು ಕಾರಣವೇನು? ಮುಂಜಾಗ್ರತಾ ಕ್ರಮಗಳೇನು? ಎಂಬ ಕುರಿತು ಮಾಹಿತಿ ನೀಡುತ್ತಿಲ್ಲ ಎಂದು ವನ್ಯಜೀವ ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ.

ನಿವಾಸಿಗಳಿಗೆ ಅರಣ್ಯ ಅಧಿಕಾರಿಗಳ ಸಲಹೆಗಳಿವು

*ರಾತ್ರಿ ವೇಳೆ ಒಂಟಿಯಾಗಿ ಓಡಾಟ ನಡೆಸಬಾರದು.
*ರಾತ್ರಿ 10ರ ಮೇಲೆ ಹಸು, ಕರು, ನಾಯಿ ಸೇರಿದಂತೆ ಯಾವುದೇ ಸಾಕು ಪ್ರಾಣಿಗಳನ್ನು ಬಯಲಲ್ಲಿ ಕಟ್ಟಿಹಾಕಬಾರದು.
*ಮಕ್ಕಳನ್ನು ರಾತ್ರಿ, ಮುಸ್ಸಂಜೆ, ಬೆಳಗಿನ ಜಾವ ಹೊರಾಂಗಣ ಆಟಕ್ಕೆ ಕಳಿಸಬಾರದು.
*ಬಯಲು ಶೌಚಾಲಯಕ್ಕೆ ತೆರಳಬಾರದು.
*ವಾಯುವಿಹಾರ, ಟ್ರಕ್ಕಿಂಗ್‌ ಎಂದು ಸಮೀಪದ ಅರಣ್ಯ ಭೂಪ್ರದೇಶಗಳಿಗೆ ತೆರಳಬಾರದು.
 

Follow Us:
Download App:
  • android
  • ios