ವಿಜಯಪುರ ಜಿಲ್ಲಾ ಪೊಲೀಸರು ಸಿಇಐಆರ್ ಪೋರ್ಟಲ್ ಬಳಸಿ ಕಳೆದುಹೋದ ಮತ್ತು ಕಳ್ಳತನವಾದ ₹1.07 ಕೋಟಿ ಮೌಲ್ಯದ 537 ಮೊಬೈಲ್ಗಳನ್ನು ಪತ್ತೆಹಚ್ಚಿದ್ದಾರೆ. ಈ ಮೊಬೈಲ್ಗಳನ್ನು ವಾರಸುದಾರರಿಗೆ ಮರಳಿಸಲಾಗುತ್ತಿದ್ದು, ಸಾರ್ವಜನಿಕರು ಈ ಪೋರ್ಟಲ್ ಸೌಲಭ್ಯ ಬಳಸಿಕೊಳ್ಳುವಂತೆ ಎಸ್ಪಿ ಲಕ್ಷ್ಮಣ ನಿಂಬರಗಿ ಮನವಿ ಮಾಡಿದ್ದಾರೆ.
ವಿಜಯಪುರ: ಸಾರ್ವಜನಿಕರು ಕಳೆದುಕೊಂಡ ಅಥವಾ ಕಳ್ಳತನವಾದ ಮೊಬೈಲ್ಗಳನ್ನು ಪತ್ತೆಹಚ್ಚಲು ವಿಜಯಪುರ ಜಿಲ್ಲಾ ಪೊಲೀಸ್ ಕಾರ್ಯಾಚರಣೆ ನಡೆಸಿ ಒಟ್ಟು ₹1.07 ಕೋಟಿ ಮೌಲ್ಯದ 537 ಮೊಬೈಲ್ಗಳನ್ನು ಪತ್ತೆಹಚ್ಚಿದ್ದಾರೆ. ಅಲ್ಲದೆ, ಆ ಮೊಬೈಲ್ಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಮರಳಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ತಿಳಿಸಿದರು.
ಜಿಲ್ಲಾ ಪೊಲೀಸ್ ಸಮುದಾಯ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮೊಬೈಲ್ ಸಾರ್ವಜನಿಕರ ದೈನಂದಿನ ಜೀವನದಲ್ಲಿ ಅತ್ಯಂತ ಅಗತ್ಯ ಸಾಧನ. ಮೊಬೈಲ್ ಕಳೆದುಹೋದ ಅಥವಾ ಕಳ್ಳತನವಾದ ಕುರಿತು ಸಾರ್ವಜನಿಕರಿಂದ ಪ್ರತಿದಿನ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗುತ್ತಿವೆ.
ಸೆಂಟ್ರಲ್ ಇಕ್ವಿಪಮೆಂಟ್ ಐಡೆಂಟಿಟಿ ರಿಜಿಸ್ಟರ್ ವ್ಯವಸ್ಥೆ
ಈ ದೂರುಗಳ ಆಧಾರದ ಮೇಲೆ ಪೊಲೀಸ್ ಇಲಾಖೆ ಸಿಇಐಆರ್ ಪೋರ್ಟಲ್ ಬಳಸಿ ಮೊಬೈಲ್ಗಳ ಪತ್ತೆಗೆ ಕ್ರಮ ಕೈಗೊಳ್ಳುತ್ತಿದೆ ಎಂದರು. ಸಿಇಐಆರ್ (ಸೆಂಟ್ರಲ್ ಇಕ್ವಿಪಮೆಂಟ್ ಐಡೆಂಟಿಟಿ ರಿಜಿಸ್ಟರ್) ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ ರೂಪಿಸಿರುವ ಡಿಜಿಟಲ್ ವ್ಯವಸ್ಥೆಯಾಗಿದ್ದು, ಮೊಬೈಲ್ ಫೋನ್ ಕಳೆದುಹೋದಾಗ ಅಥವಾ ಕಳ್ಳತನವಾದಾಗ ಅದರ ಐಎಂಇಐ ಸಂಖ್ಯೆಯ ಸಹಾಯದಿಂದ ಸಾಧನವನ್ನು ಪತ್ತೆಹಚ್ಚಲು, ಬ್ಲಾಕ್ ಮಾಡಲು ಹಾಗೂ ಮರಳಿ ಪಡೆಯಲು ಈ ವ್ಯವಸ್ಥೆ ನೆರವಾಗುತ್ತದೆ.
ಈ ಪೋರ್ಟಲ್ ಮೂಲಕ ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್ಗಳ ದುರುಪಯೋಗವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಮೊಬೈಲ್ ಕಳೆದುಕೊಂಡವರು ನೀಡುವ ದೂರುಗಳ ಆಧಾರದ ಮೇಲೆ ಪೊಲೀಸರು ಪತ್ತೆ ಕಾರ್ಯ ಕೈಗೊಳ್ಳುತ್ತಾರೆ ಎಂದರು.
ಮೊಬೈಲ್ ಕಳೆದುಹೋದ ಹಾಗೂ ಕಳ್ಳತನವಾದ ಪ್ರಕರಣ
ವಿಜಯಪುರ ಜಿಲ್ಲೆಯ ಎಲ್ಲ 28 ಪೊಲೀಸ್ ಠಾಣೆಗಳಲ್ಲಿ ಈ ಪೋರ್ಟಲ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಸಾರ್ವಜನಿಕರಿಂದ ದಾಖಲಾಗುವ ಮೊಬೈಲ್ ಕಳೆದುಹೋದ ಹಾಗೂ ಕಳ್ಳತನವಾದ ಪ್ರಕರಣಗಳನ್ನು ಪರಿಶೀಲಿಸಿ, ನಿಯಮಿತವಾಗಿ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಈವರೆಗೆ ಒಟ್ಟು 537 ಮೊಬೈಲ್ಗಳನ್ನು ಪತ್ತೆಹಚ್ಚಲಾಗಿದ್ದು, ಅವುಗಳ ಅಂದಾಜು ಮೌಲ್ಯ ₹1,07,40,000 ಆಗಿದೆ ಎಂದು ಎಸ್ಪಿ ನಿಂಬರಗಿ ವಿವರಿಸಿದರು.
ಮೊಬೈಲ್ ಪತ್ತೆ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಸಾರ್ವಜನಿಕರು ತಮ್ಮ ಮೊಬೈಲ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಸಿಇಐಆರ್ ಪೋರ್ಟಲ್ನ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿಗಳಾದ ನಾಗರಾಜ, ಸುನೀಲ ಕಾಂಬಳೆ, ಚಂದ್ರಕಾಂತ ನಂದರೆಡ್ಡಿ, ತುಳಜಪ್ಪ ಸುಲ್ಫಿ, ಸಿಪಿಐಗಳು, ಪಿಎಸ್ಐಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.





