ಮಾಜಿ ಸಚಿವ ಮುರುಗೇಶ್ ನಿರಾಣಿ ಮೈಸೂರು ರಾಜಮನೆತನದ ಬಗ್ಗೆ ಲಘುವಾಗಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾನು ಯಾವುದೇ ಲಾಭಿಯನ್ನು ಮಾಡುತ್ತಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಮೈಸೂರು: ನಾನು ಬಿಜೆಪಿ ರಾಜ್ಯಾಧ್ಯಕ್ಷ ರೇಸ್ ನಲ್ಲಿ ಇಲ್ಲ. ಲಾಭಿಯನ್ನು ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಮಾಜಿ ಸಚಿವ ಮುರುಗೇಶ್ ಆರ್. ನಿರಾಣಿ ಸ್ಪಷ್ಟಪಡಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಗುರುತಿಸಿ ಎಂಎಲ್ಎ, ಮಂತ್ರಿ ಎಲ್ಲ ಸ್ಥಾನವನ್ನು ಕೊಟ್ಟಿದ್ದೆ. ಸದ್ಯಕ್ಕೆ ನಾನು ಆ ಸ್ಥಾನ ಕೇಳುತ್ತಿಲ್ಲ. ಕೊಟ್ಟರೆ ಜವಾಬ್ದಾರಿ ನಿಭಾಯಿಸುತ್ತೇನೆ ಎಂದರು.

ವಿಜಯೇಂದ್ರ ಒಳ್ಳೆ ಕೆಲಸ ಮಾಡಿದ್ದಾರೆ. ಒಳ್ಳೊಳ್ಳೆ ಹೋರಾಟ ಮಾಡಿದ್ದಾರೆ. ಅವರನ್ನೇ ಮುಂದುವರೆಸಿದರೂ ಸ್ವಾಗತ. ಬದಲಾವಣೆ ಆದರೇ ಯಾರೇ ಅಧ್ಯಕ್ಷರಾದರು ಪಕ್ಷವನ್ನು ಬಲಪಡಿಸಲು ತನು ಮನ ಧನ ಹಾಕಿ ಎನ್ ಡಿಎ ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತೇವೆ. ಪಕ್ಷದಲ್ಲಿ ಅಡ್ಜಸ್ಟ್ಮೆಂಟ್ ರಾಜಕಾರಣ ಇಲ್ಲ. ಹಳದಿ ಕಣ್ಣಿಗೆ ಕಾಣೋದು ಎಲ್ಲ ಹಳದಿ ಅಂತ ಕೆಲವರು ಹೇಳುತ್ತಾರೆ. ಇದರಲ್ಲಿ ಹುರುಳಿಲ್ಲ ಎಂದು ಅವರು ಹೇಳಿದರು.

ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಕಿಡಿ

ಸಚಿವ ಯತೀಂದ್ರ ಸಿದ್ದರಾಮಯ್ಯ ಮೈಸೂರು ಮಹಾರಾಜರ ಬಗ್ಗೆ ಮಾತನಾಡುತ್ತಾರೆ. 100 ವರ್ಷಗಳ ಹಿಂದೆಯೇ ದೇಶದ ರಾಜಮನೆತನಗಳ ಟಾಪ್ 10 ಪಟ್ಟಿಯಲ್ಲಿ ಮೈಸೂರು ಇತ್ತು. ಅಂತಹ ಅಭಿವೃದ್ಧಿ ಕೆಲಸ ಮಾಡಿದ್ದು ಮೈಸೂರು ರಾಜಮನೆತನ. ಇದನ್ನು ಯತೀಂದ್ರ ತಿಳಿದುಕೊಳ್ಳಬೇಕು ಎಂದು ಅವರು ಕಿಡಿಕಾರಿದರು.

ಮೈಸೂರು ರಾಜರ ಮನೆತನಕ್ಕೆ ಅಗೌರವ ತೋರಿಸಿದು ಸರಿಯಲ್ಲ

151 ಕೈಗಾರಿಕೆಗಳನ್ನು ಸ್ಥಾಪಿಸಿದ್ದು ಮೈಸೂರು ರಾಜಮನೆತನ. ಸಿಮೆಂಟ್ ಸ್ಟಿಲ್ ಪೇಪರ್ ಗೋಲ್ಡ್ ಎಲ್ಲವನ್ನೂ ಸ್ಥಾಪನೆ ಮಾಡಿದ್ದು ಯಾರು ಎಂಬುದನ್ನು ನೆನಪಿಸಿಕೊಳ್ಳಬೇಕು. ಕೆ.ಆರ್.ಎಸ್, ಬ್ಯಾಂಕ್ ಗಳು, ಶಿಕ್ಷಣ ಸಂಸ್ಥೆಗಳು ಎಲ್ಲವನ್ನೂ ಮಾಡಿದ್ದು ಮೈಸೂರು ರಾಜರು. ಅಂತ ಮನೆತನಕ್ಕೆ ಅಗೌರವ ತೋರಿಸಿದು ಸರಿಯಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ನಾಲ್ವಡಿ ಕೃಷ್ಣರಾಜರ ಇತಿಹಾಸವನ್ನು ಯತೀಂದ್ರ ಓದಬೇಕು. ನನಗೆ ಪ್ರೇರಣೆಯೇ ನಾಲ್ವಡಿ ಕೃಷ್ಣರಾಜ ಒಡೆಯರ್. ನಮ್ಮ ಎಲ್ಲ ಸಂಸ್ಥೆಗಳಲ್ಲಿ ಅವರ ಫೋಟೋ ಇಟ್ಟಿದ್ದೇನೆ. ಇದೇ ಜಿಲ್ಲೆಯ ನೀವು ಅವರ ವಿರುದ್ಧ ಮಾತನಾಡೋದು ಸರಿಯಲ್ಲ. ಮೈಸೂರು ಜನರೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಮಾಜಿ ಶಾಸಕ ಸಿ.ಎಸ್. ನಿರಂಜನ್ ಕುಮಾರ್, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಬಿಜೆಪಿ ಪದಾಧಿಕಾರಿಗಳಾದ ಅನಿಲ್ ಥಾಮಸ್, ಎಸ್.ಸಿ. ಅಶೋಕ್, ಪರೀಕ್ಷಿತ್ ರಾಜೇ ಅರಸ್, ವಿನಯ್, ಎಸ್.ಕೆ. ದಿನೇಶ್, ಮಹೇಶ್, ಡಾ. ವಸಂತಕುಮಾರ್, ದಯಾನಂದ ಪಟೇಲ್, ಮಹೇಶ್ ರಾಜೇ ಅರಸ್, ಬಿ.ಎಂ. ಸಂತೋಷ್ ಕುಮಾರ್ ಇದ್ದರು.