ಬಿಬಿಎಂಪಿ ಖರ್ಚು ಮಾಡುವ ಪ್ರತಿ ಪೈಸೆ ಲೆಕ್ಕ ಸಾರ್ವಜನಿಕರಿಗೆ..!
ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಪ್ರತಿ ಕಾಮಗಾರಿಯ ಮಾಹಿತಿ ದಾಖಲೆ ಸಹಿತ ಲಭ್ಯ| ಆಡಳಿತದಲ್ಲಿ ಮತ್ತಷ್ಟು ಪಾರದರ್ಶಕತೆ ತರುವ ನಿಟ್ಟಿನಲ್ಲಿ ಇನ್ನು ಮುಂದೆ ಬಿಬಿಎಂಪಿಯಿಂದ ವೆಚ್ಚ ಮಾಡುವ ಪ್ರತಿ ಪೈಸೆಯ ಲೆಕ್ಕವನ್ನೂ ಸಾರ್ವಜನಿಕರಿಗೆ ಲಭ್ಯ|
ಬೆಂಗಳೂರು(ನ.08): ಇನ್ನು ಮುಂದೆ ಸಾರ್ವಜನಿಕರು ಬಿಬಿಎಂಪಿ ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳ ಮಾಹಿತಿಯನ್ನು ದಾಖಲೆ ಸಹಿತ ವೀಕ್ಷಿಸಬಹುದು. ಈ ಕಾಮಗಾರಿಗಳ ಕುರಿತು ತಮ್ಮ ಪ್ರತಿಕ್ರಿಯೆಯನ್ನೂ ಸಹ ನೀಡಬಹುದು.
ಬಿಬಿಎಂಪಿಯಲ್ಲಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಪಾಲಿಕೆಯ ಅಧಿಕೃತ ವೆಬ್‌ಸೈಟ್ ಮರುವಿನ್ಯಾಸಗೊಳಿಸಿದ್ದು, ಪಾಲಿಕೆಯ ಕಾಮಗಾರಿಗಳು ಸೇರಿದಂತೆ ಹಲವು ಮಾಹಿತಿಗಳು ಸಾರ್ವಜನಿಕರಿಗೆ ಸಿಗಲಿದೆ. ಶನಿವಾರ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತಾ ಹಾಗೂ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಪಾಲಿಕೆಯ ವೆಬ್‌ಸೈಟ್‌ನ (http://bbmp.gov.in/Citizenviewkannada.html) ಲಿಂಕ್ ಬಿಡುಗಡೆಗೊಳಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಡಳಿತದಲ್ಲಿ ಮತ್ತಷ್ಟು ಪಾರದರ್ಶಕತೆ ತರುವ ನಿಟ್ಟಿನಲ್ಲಿ ಇನ್ನು ಮುಂದೆ ಬಿಬಿಎಂಪಿಯಿಂದ ವೆಚ್ಚ ಮಾಡುವ ಪ್ರತಿ ಪೈಸೆಯ ಲೆಕ್ಕವನ್ನೂ ಸಾರ್ವಜನಿಕರಿಗೆ ನೀಡುತ್ತೇವೆ. ಈ ನಿಟ್ಟಿನಲ್ಲಿ ಮೊದಲಿಗೆ ಪಾಲಿಕೆಯ ವೆಬ್‌ಸೈಟ್ ಅಪ್ಡೇಟ್ ಮಾಡಿದ್ದು, ಮೊದಲ ಹಂತದಲ್ಲಿ 2015ರ ಜೂನ್ನಿಂದ ಈವರೆಗೆ ಪೂರ್ಣಗೊಂಡಿರುವ ಪಾಲಿಕೆ ವ್ಯಾಪ್ತಿಯ ಎಲ್ಲ ಕಾಮಗಾರಿಗಳ ಸಂಪೂರ್ಣ ವಿವರಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಗರೋತ್ಥಾನ ಯೋಜನೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದ ವಿವರಗಳು, ಹಾಲಿ ಚಾಲ್ತಿಯಲ್ಲಿರುವ ವಿವರಗಳು ಮತ್ತು ಪಾಲಿಕೆಯ ಬಜೆಟ್ ವಿವರಗಳು ಈ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿವೆ ಎಂದು ಹೇಳಿದರು.
ಹೆಚ್ಚಿನ ತೆರಿಗೆ ಸಂಗ್ರಹಕ್ಕೆ ಬಿಬಿಎಂಪಿ ಮಾಸ್ಟರ್ ಪ್ಲಾನ್!
ಜನ ಕೇಳುವ ಮುನ್ನವೇ ಮಾಹಿತಿ:
ಪ್ರತಿ ನಿತ್ಯ ಮಾಹಿತಿ ಹಕ್ಕು ಕಾಯ್ದೆಯಡಿ ಕಾಮಗಾರಿ ಸೇರಿದಂತೆ ವಿವಿಧ ಮಾಹಿತಿ ಕೇಳಿ ಪಾಲಿಕೆಗೆ ನೂರಾರು ಅರ್ಜಿಗಳು ಬರುತ್ತಿವೆ. ಇನ್ನು ಮುಂದೆ ಸಾರ್ವಜನಿಕರು ಕೇಳುವ ಮುನ್ನವೇ ನಾವು ಮಾಹಿತಿ ನೀಡಲಿದ್ದೇವೆ. ಸಾರ್ವಜನಿಕರಿಗೆ ಮಾಹಿತಿ ಸಿಗುವುದರಿಂದ ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಯಾವುದೇ ಒಂದು ನಿರ್ದಿಷ್ಟಕಾಮಗಾರಿ ದೃಢೀಕರಣ ಪತ್ರ ನೀಡುವಾಗಲೂ ಎಚ್ಚರ ವಹಿಸಬೇಕು. ಒಂದು ವೇಳೆ ಏನಾದರೂ ಲೋಪಗಳಿದ್ದರೂ ಬಹಿರಂಗವಾಗಲಿದೆ ಎಂದು ಹೇಳಿದರು.
ಕಾಮಗಾರಿ ಮಾಹಿತಿ ವೀಕ್ಷಣೆ ಹೇಗೆ?
ಸಾರ್ವಜನಿಕರು ಪಾಲಿಕೆಯ ವೆಬ್‌ಸೈಟ್‌ನಲ್ಲಿ ನಾಗರಿಕ ವೀಕ್ಷಣೆ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ರಸ್ತೆ ಇತಿಹಾಸ, ಬಿಬಿಎಂಪಿ ವರ್ಕ್ ಬಿಲ್ ಹಾಗೂ ಆಡಳಿತಾಧಿಕಾರಿ ನಡಾವಳಿ ಎಂಬ ಆಯ್ಕೆಗಳು ಕಾಣುತ್ತವೆ. ಇದರಲ್ಲಿ ಬಿಬಿಎಂಪಿ ವರ್ಕ್ನ ಮೇಲೆ ಕ್ಲಿಕ್ ಮಾಡಿದರೆ ವಾರ್ಡ್ ಸಂಖ್ಯೆ ಮತ್ತು ಕಾಲಂ ತೆರೆಯಲಿದೆ. ಇದರಲ್ಲಿ ಸಾರ್ವಜನಿಕರು ಆಯಾ ವಾರ್ಡ್ ವ್ಯಾಪ್ತಿಯ ಕಾಮಗಾರಿಯ ಮಾಹಿತಿ ಪಡೆಯಬಹುದು.
ದಾಖಲೆಗಳ ಡೌನ್‌ಲೋಡ್‌ಗೂ ಅವಕಾಶ
ಈ ವೆಬ್‌ಸೈಟ್‌ನಲ್ಲಿ ಈಗಾಗಲೇ ಪೂರ್ಣಗೊಂಡಿರುವಕಾಮಗಾರಿಗಳ ಜಾಬ್ ಕೋಡ್ ಸಂಖ್ಯೆ, ಛಾಯಾಚಿತ್ರ, ಅಂದಾಜುಪಟ್ಟಿ, ಮೆಷರ್ಮೆಂಟ್ ಬುಕ್, ಕಾಮಗಾರಿ ಹೆಸರು, ಗುತ್ತಿಗೆದಾರರ ಹೆಸರು, ಅನುದಾನ ಹಾಗೂ ಸಮಯದ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಸಾರ್ವಜನಿಕರು ಕಾಮಗಾರಿ ದಾಖಲೆಗಳ ಸ್ಕ್ಯಾನ್ ಪಡೆಯಲು, ಎಕ್ಸೆಲ್ ಅಥವಾ ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಮಾಡಲು ಅವಕಾಶವಿದೆ. ಯಾವುದೇ ಕಾಮಗಾರಿ ಕುರಿತು ವೆಬ್‌ಸೈಟ್‌ನಲ್ಲಿಯೇ ಪ್ರತಿಕ್ರಿಯಿಸಲೂಬಹುದು. ಇದನ್ನು ಅಧಿಕಾರಿಗಳು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ.
ಬಿಬಿಎಂಪಿಯಿಂದ ಕೈಗೆತ್ತಿಕೊಳ್ಳುವ ಎಲ್ಲ ಕಾಮಗಾರಿಗಳ ವಿವರಗಳನ್ನು ನಾಗರಿಕರಿಗೆ ತಿಳಿಸುವ ಉದ್ದೇಶ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವೆಬ್‌ಸೈಟ್‌ನಲ್ಲಿ ಕಾಮಗಾರಿಗಳ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ತಿಳಿಸಿದ್ದಾರೆ.