ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಅ.21): ಕೊರೋನಾ ಆರ್ಥಿಕ ಸಂಕಷ್ಟದ ಈ ಸಂದರ್ಭದಲ್ಲಿ ಆಸ್ತಿ ತೆರಿಗೆ ಏರಿಕೆ ಮಾಡದೆಯೇ 1,250 ಕೋಟಿ ರು. ಹೆಚ್ಚಿನ ತೆರಿಗೆ ಸಂಗ್ರಹಕ್ಕೆ ಬಿಬಿಎಂಪಿ ಮಾಸ್ಟರ್‌ ಪ್ಲಾನ್‌ ರೂಪಿಸಲು ಮುಂದಾಗಿದೆ.

ಕೊರೋನಾ ಸೋಂಕಿನಿಂದ ಜನಸಾಮಾನ್ಯನ ಆರ್ಥಿಕ ಸ್ಥಿತಿ ದುಸ್ತರವಾಗಿದ್ದು, ಈ ಸಂದರ್ಭದಲ್ಲಿ ಆಸ್ತಿ ತೆರಿಗೆ ಏರಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸಂಪನ್ಮೂಲ ಕ್ರೋಢಿಕರಣ ಇಲ್ಲದೇ ಬಿಬಿಎಂಪಿ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಹೀಗಾಗಿ, ಆಸ್ತಿ ತೆರಿಗೆ ವಸೂಲಿಗೆ ಬಿಬಿಎಂಪಿ ವಲಯ ವರ್ಗೀಕರಣ ಪರಿಷ್ಕರಣೆಯ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸುತ್ತಿದೆ. ಇದರಿಂದ ಬಿಬಿಎಂಪಿಗೆ ವಾರ್ಷಿಕ ಸುಮಾರು 1,250 ಕೋಟಿ ರು.ಗೂ ಅಧಿಕ ಮೊತ್ತ ಹರಿದು ಬರಲಿದೆ ಎಂದು ಅಂದಾಜಿಸಲಾಗಿದೆ.

ಆಸ್ತಿಯ ಮಾರ್ಗಸೂಚಿ ದರ ಆಧರಿಸಿ ವಲಯ ವರ್ಗೀಕರಣ ಪರಿಷ್ಕರಿಸಿ ಆಸ್ತಿ ತೆರಿಗೆ ವಿಧಿಸುವುದು ಬಿಬಿಎಂಪಿ ಚಿಂತನೆ. ಇದರಿಂದ ಸುಮಾರು 750 ಕೋಟಿ ರು.ನಷ್ಟುಹೆಚ್ಚುವರಿ ಆಸ್ತಿ ತೆರಿಗೆ ಸಂಗ್ರಹವಾಗಬಹುದು ಎಂಬುದು ಬಿಬಿಎಂಪಿ ಅಂದಾಜು. ಇನ್ನು ನಗರದಲ್ಲಿರುವ ಚಿತ್ರಮಂದಿರ, ಸಮುದಾಯ ಭವನ, ಕಲ್ಯಾಣ ಮಂಟಪ, ವಾಣಿಜ್ಯ ಮಳಿಗೆ, ಮಾಲ್‌, ಪಿಜಿಗಳಿಂದ ಪ್ರತ್ಯೇಕ ತೆರಿಗೆ ನಿಗದಿ ಪಡಿಸಲಾಗಿದೆ. ಈ ದರವನ್ನು ಪರಿಷ್ಕರಿಸಿದರೆ ಸುಮಾರು 450 ಕೋಟಿ ರು. ವಾರ್ಷಿಕ ಆದಾಯ ಹೆಚ್ಚಾಗುವ ನಿರೀಕ್ಷೆಯಿದೆ. ಈ ಬಗ್ಗೆ ಪ್ರಸ್ತಾವನೆಗೆ ನಗರದ ಎಲ್ಲ ಆಸ್ತಿಗಳನ್ನು ಪುನರ್‌ ವಿಂಗಡಣೆ ಮಾಡಿ ವರದಿ ಸಿದ್ಧಪಡಿಸಬೇಕು. ಅದಕ್ಕೆ ಕನಿಷ್ಠ ಒಂದು ತಿಂಗಳು ಬೇಕಾಗಲಿದೆ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಸುಮ್‌ ಸುಮ್ನೆ ರಸ್ತೆ ಅಗೆದರೆ ಬೀಳುತ್ತೆ 25 ಲಕ್ಷ ದಂಡ..!

2008ರ ನಂತರ ಪರಿಷ್ಕರಣೆ ಮಾಡಿಲ್ಲ:

ನಿಯಮ ಪ್ರಕಾರ ಪ್ರತಿ ಮೂರು ವರ್ಷಗಳಿಗೊಮ್ಮೆ ವಲಯ ವರ್ಗೀಕರಣ ಪರಿಷ್ಕರಣೆ ಮಾಡಬೇಕು. ಆದರೆ, ಬಿಬಿಎಂಪಿ ರಚನೆಯಾಗಿ 14 ವರ್ಷದಲ್ಲಿ 2008ರಲ್ಲಿ ಮೊದಲ ಬಾರಿಗೆ ವಲಯ ವರ್ಗೀಕರಣ ಆಧರಿಸಿ ಆಸ್ತಿ ತೆರಿಗೆ ನಿಗದಿಪಡಸಲಾಗಿತ್ತು. ತದ ನಂತರ ವಲಯ ವರ್ಗೀಕರಣ ಪರಿಷ್ಕರಣೆ ಮಾಡಿಲ್ಲ.

ಆಗಿನ ಮಾರ್ಗಸೂಚಿ ದರದಂತೆ ‘ಎ’ ವಲಯದಲ್ಲಿನ ವಸತಿ ಕಟ್ಟಡಗಳಿಗೆ ಚ.ಅಡಿಗೆ 2.50 ರು., ವಾಣಿಜ್ಯ ಸ್ವತ್ತುಗಳಿಗೆ 5 ರು., ’ಬಿ’ ವಲಯದ ವಸತಿ ಕಟ್ಟಡಗಳಿಗೆ 2 ರು.. ಮತ್ತು ವಾಣಿಜ್ಯ ಕಟ್ಟಡಗಳಿಗೆ 4 ರು. ತೆರಿಗೆ ನಿಗದಿಪಡಿಸಲಾಗಿತ್ತು. 2016-17ರಲ್ಲಿ ಪರಿಷ್ಕರಣೆ ಮಾಡಿ ’ಎ’ ವಲಯದ ವಸತಿ ಕಟ್ಟಡಗಳಿಗೆ 3 ರು., ವಾಣಿಜ್ಯ ಸ್ವತ್ತುಗಳಿಗೆ 6 ರು. ನಿಗದಿಪಡಿಸಲಾಯಿತು. ಆದರೆ, ಆಗ ಪಾಲಿಕೆ ಸದಸ್ಯರು, ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಾರಿಯಾಗಿರಲಿಲ್ಲ.

ಕಟ್ಟಡ ಮಾಲೀಕರಿಗೆ ಹೊರೆ ಇಲ್ಲ

ವಲಯ ವರ್ಗೀಕರಣ ಪರಿಷ್ಕರಣೆಯಿಂದ ಸ್ವತ್ತುಗಳ ಮಾಲೀಕರ ಮೇಲೆ ಅಧಿಕ ಹೊರೆ ಉಂಟಾಗುವುದಿಲ್ಲ. ಕಟ್ಟಡ ನಿರ್ಮಾಣದ ಅವಧಿ ಆಧರಿಸಿ ಆಸ್ತಿ ಮಾಲೀಕರಿಗೆ ಸವಕಳಿ ವೆಚ್ಚ ಕಡಿಮೆ ಆಗಲಿದೆ. 3-6 ವರ್ಷದ ಹಳೆಯ ಕಟ್ಟಡಗಳಿಗೆ ಶೇ.6, 6-9 ವರ್ಷದ ಕಟ್ಟಡಗಳಿಗೆ ಶೇ.9ರಷ್ಟುಮತ್ತು 9-12 ವರ್ಷದ ಹಳೆಯ ಕಟ್ಟಡಗಳಿಗೆ ಶೇ.12ರಷ್ಟುಸವಕಳಿ ವೆಚ್ಚದ ವಿನಾಯಿತಿ ಸಿಗಲಿದೆ.

ಏನಿದು ವಲಯ ವರ್ಗೀಕರಣ?

ಸ್ಥಿರಾಸ್ತಿಗಳ ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ಆರು ವಲಯಗಳನ್ನು ವರ್ಗೀಕರಣ ಮಾಡಿ, ಆಸ್ತಿ ತೆರಿಗೆ ಸಂಗ್ರಹ ಮಾಡಲಾಗುತ್ತದೆ. ಇದಕ್ಕಾಗಿ ಎ, ಬಿ, ಸಿ, ಡಿ, ಇ, ಎಫ್‌ ಎಂಬ ವಲಯಗಳನ್ನು ವಿಂಗಡಿಸಲಾಗಿದೆ. ಪ್ರತಿ ವಲಯಕ್ಕೆ ಪ್ರತ್ಯೇಕ ಆಸ್ತಿ ತೆರಿಗೆ ನಿಗದಿ ಪಡಿಸಲಾಗಿದೆ. ಆಸ್ತಿಯ ಮಾರ್ಗಸೂಚಿ ದರದನ್ವಯ ವಲಯ ವರ್ಗೀಕರಣ ಮಾಡಲಾಗಿದೆ. ಈ ವರ್ಗೀಕರಣವು ಮೂರು ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ. ಮಾರ್ಗಸೂಚಿ ದರದ ಪ್ರಕಾರ ಯಾವುದೇ ಸ್ವತ್ತು ಒಂದು ವಲಯಕ್ಕಿಂತ ಹೆಚ್ಚಿನ ಸ್ಥಾನ ಮೇಲೆ ಹೋದರೆ, ತೆರಿಗೆ ಲೆಕ್ಕಾಚಾರಕ್ಕಾಗಿ ಒಂದು ವಲಯದ ಮುಂಬಡ್ತಿಯನ್ನು ಪರಿಗಣಿಸಲಾಗುತ್ತದೆ. ಉದಾಹರಣೆಗೆ ‘ಎಫ್‌’ ವಲಯದಲ್ಲಿದ್ದ ಸ್ವತ್ತಿನ ಮಾರ್ಗ ಸೂಚಿ ದರವು ಚದರ ಅಡಿಗೆ ಒಂದು ಸಾವಿರ ರು. ನಿಂದ 6 ಸಾವಿರ ರು. ಹೆಚ್ಚಳವಾಗಿರುತ್ತದೆ. ಆಗ ಆ ಸ್ವತ್ತು ಪರಿಷ್ಕೃತ ಮಾರ್ಗಸೂಚಿ ದರದ ಪ್ರಕಾರ ‘ಬಿ’ ವಲಯಕ್ಕೆ ಸೇರುತ್ತದೆ.

ಮತ್ತೊಂದು ಬಗೆಯ ಸರ್ಕಸ್‌

ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಬಿಬಿಎಂಪಿಯು ಸಂಪನ್ಮೂಲ ಕ್ರೋಢೀಕರಣಕ್ಕೆ ವಿವಿಧ ಮಾರ್ಗ ಹುಡುಕಾಟ ನಡೆಸುತ್ತಿದೆ. ಈ ಪೈಕಿ ಆಸ್ತಿ ತೆರಿಗೆಯಿಂದ ಹೊರಗುಳಿದ ಆಸ್ತಿಗಳ ಪತ್ತೆ ಮಾಡಿ ತೆರಿಗೆ ವ್ಯಾಪ್ತಿಗೆ ಸೇರಿಸಲು ಬೀದಿ-ಬೀದಿ ಸಮೀಕ್ಷೆ ಆರಂಭಿಸುತ್ತಿದೆ. ನಗರದಲ್ಲಿ ಪ್ರಸ್ತುತ ಆಸ್ತಿ ತೆರಿಗೆ ಒಳಪಟ್ಟ17.91 ಲಕ್ಷ ಆಸ್ತಿಗಳಿವೆ. 2 ಲಕ್ಷ ಆಸ್ತಿಗಳು ಬಿಬಿಎಂಪಿ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗಿವೆ ಎಂದು ಅಂದಾಜಿಸಲಾಗಿದೆ. ಈ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಿದರೆ ಬಿಬಿಎಂಪಿಗೆ ಸುಮಾರು 2 ಸಾವಿರ ಕೋಟಿ ರು. ಹೆಚ್ಚುವರಿ ಆದಾಯ ಸಂಗ್ರಹ ಮಾಡಬಹುದು ಎಂಬುದು ಅಧಿಕಾರಿಗಳ ನಿರೀಕ್ಷೆ.

ಹೆಚ್ಚಿನ ಸಂಪನ್ಮೂಲ ಕ್ರೋಢೀಕರಣಕ್ಕೆ ಬಿಬಿಎಂಪಿ ವಿವಿಧ ರೀತಿಯ ಪ್ರಯತ್ನ ನಡೆಸಲಾಗುತ್ತಿದ್ದು, ಅದರಲ್ಲಿ ವಲಯ ವರ್ಗೀಕರಣ ಸಹ ಒಂದಾಗಿದೆ. ವಲಯ ವರ್ಗೀಕರಣದಲ್ಲಿ ಇರುವ ನ್ಯೂನ್ಯತೆಗಳನ್ನು ಸರಿಪಡಿಸುವ ಕಾರ್ಯ ಸಹ ಆಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ತಿಳಿಸಿದ್ದಾರೆ.