ಮಂಗಳೂರು(ಜೂ.20): ಪುತ್ತೂರು ಮೂಲದ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಅವರು ಬೆಂಗಳೂರಿನಲ್ಲಿ ಅನಾಥ ವೃದ್ಧ ದಂಪತಿಗೆ ಆಸರೆಯಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬೆಂಗಳೂರಿನ ವಿಶ್ವನಾಥಪುರ ಪೊಲೀಸ್‌ ಠಾಣೆಯಲ್ಲಿ ಸಬ್‌ಇನ್ಸ್‌ಪೆಕ್ಟರ್‌ ಆಗಿರುವ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ನಿವೃತ್ತ ಸರ್ವೇ ಸೂಪರ್‌ವೈಸರ್‌ ಬಾಲಕೃಷ್ಣ ಪೂಜಾರಿ-ಗುಣವತಿ ದಂಪತಿಯ ಪುತ್ರ ಪ್ರದೀಪ್‌ ಪೂಜಾರಿ ತಮ್ಮ ಸೇವಾ ಮನೋಭಾವದಿಂದ ಗಮನ ಸೆಳೆದಿದ್ದಾರೆ.

ತೀವ್ರಗೊಂಡ ಕಡಲ್ಕೊರೆತ, 23 ಮತ್ತು 24ರಂದು ಭಾರೀ ಮಳೆ ಸಾಧ್ಯತೆ

ಕಳೆದ ಸುಮಾರು 10 ವರ್ಷಗಳಿಂದ ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರದೀಪ್‌ ಪೂಜಾರಿ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದು, ಇದೀಗ ವಿಶ್ವನಾಥಪುರ ಪೊಲೀಸ್‌ ಠಾಣೆಯಲ್ಲಿ ಎಸ್‌ಐ ಆಗಿದ್ದಾರೆ. ಬೆಂಗಳೂರಿನ ದೇವನ ಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ಜಾಲಿಗೆ ಪಂಚಾಯಿತಿ ವ್ಯಾಪ್ತಿಯ ಬಸವನಪುರ ಗಾಮದ ಮಕ್ಕಳಿಲ್ಲದೆ ಅನಾಥರಾಗಿರುವ ವೃದ್ಧ ದಂಪತಿ ನರಸಿಂಹಪ್ಪ(77) ಮತ್ತು ಗಂಗಮ್ಮ(70) ಅವರನ್ನು ದತ್ತು ಸ್ವೀಕಾರ ಮಾಡಿ ಸಲಹುತ್ತಿದ್ದಾರೆ.

ತುಂಗಾ ಜಲಾಶಯ ಭರ್ತಿ: 4 ಗೇಟ್‌ ಮೂಲಕ ನೀರು ಬಿಡುಗಡೆ

ಮಕ್ಕಳಿಲ್ಲದ ನರಸಿಂಹಮ್ಮ ಮತ್ತು ಗಂಗಮ್ಮ ದಂಪತಿಗಳು ದುಡಿಯಲು ಅಶಕ್ತರು. ವಾರ್ಧಕ್ಯದಿಂದಾಗಿ ಸರಿಯಾಗಿ ನಡೆಯಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ದಿನದ ತುತ್ತಿಗೂ ತತ್ವಾರ ಇದೆ. ಅಚಾನಕ್‌ ಆಗಿ ಪ್ರದೀಪ್‌ ಪೂಜಾರಿಗೆ ಈ ವೃದ್ಧ ದಂಪತಿಯ ಪರಿಚಯವಾಗಿತ್ತು. ಅವರ ಬದುಕಿನ ಸಂಕಷ್ಟವನ್ನು ಅರಿತ ಈ ಪೊಲೀಸ್‌ ಅಧಿಕಾರಿ ಅವರ ಮನೆ ಬಾಡಿಗೆ, ದೈನಂದಿನ ಖರ್ಚು ಹಾಗೂ ಔಷಧೋಪಚಾರ ಸೇರಿದಂತೆ ಎಲ್ಲವನ್ನೂ ತಾನೇ ಭರಿಸುತ್ತಿದ್ದಾರೆ.

ಪ್ರತಿ ತಿಂಗಳೊಂದರ 600 ರು. ಮನೆ ಬಾಡಿಗೆ, 1200 ರು. ಆಹಾರದ ವೆಚ್ಚ ಹಾಗೂ ಅಗತ್ಯ ಬಿದ್ದಾಗ ಔಷಧಿಯನ್ನು, ಬಟ್ಟೆಬರೆಯನ್ನು ನೀಡಿ ನೊಂದ ದಂಪತಿಗಳ ಕಣ್ಣೀರು ಒರೆಸುವ, ಅವರಿಗೆ ಚೈತನ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ.

2019ರ ಮಹಾ ಪ್ರವಾಹಕ್ಕೆ ಆಲಮಟ್ಟಿ ಕಾರಣ ಅಲ್ಲ, ಮಹಾರಾಷ್ಟ್ರದ ಕ್ಲೀನ್‌ಚಿಟ್!

ಬದುಕಿನಲ್ಲಿ ನೊಂದಿರುವ ವೃದ್ಧ ದಂಪತಿ ಕಷ್ಟವನ್ನು ಕಂಡು ನಾನು ಅವರನ್ನು ದತ್ತು ಪಡೆದುಕೊಳ್ಳುವ ತೀರ್ಮಾನಕ್ಕೆ ಬಂದೆ. ಅವರ ಮೊಗದಲ್ಲಿ ನಗು ಕಾಣುವಾಗ ನೆಮ್ಮದಿ, ಸಾರ್ಥಕ್ಯದ ಭಾವನೆ ಮೂಡುತ್ತದೆ ಎಂದು ಪಿಎಎಸ್‌ಐ ಪ್ರದೀಪ್‌ ಪೂಜಾರಿ ತಿಳಿಸಿದ್ದಾರೆ.

ಹೆತ್ತ ತಂದೆ, ತಾಯಿಗಳನ್ನೇ ನೋಡದ ಇಂದಿನ ಸಮಾಜದಲ್ಲಿ, ಯಾವುದೊ ಹಿರಿ ಜೀವಗಳನ್ನು ಸಾಕಿ ಸಲಹುವ ಅವರ ಸಂಪೂರ್ಣ ರಕ್ಷಣೆ ಮಾಡುತ್ತಿರುವ ಪುತ್ತೂರಿನ ಪ್ರದೀಪ್‌ ಪೂಜಾರಿ ಅವರ ಕೆಲಸ ಎಲ್ಲರಿಗೂ ಮಾದರಿ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರ ಮಾಜಿ ಶಾಸಕ ಶಕುಂತಳಾ ಟಿ. ಶೆಟ್ಟಿ ತಿಳಿಸಿದ್ದಾರೆ.

-ಸಂಶುದ್ದೀನ್‌ ಸಂಪ್ಯ