ಶಿವಮೊಗ್ಗ(ಜೂ.20): ಇತ್ತೀಚಿನ ಕೆಲ ದಿನಗಳಿಂದ ಮಲೆನಾಡಿನಲ್ಲಿ ಮುಂಗಾರು ಚುರುಕುಗೊಂಡಿದ್ದು, ತುಂಗಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿರುವ ಹಿನ್ನೆಲೆ ಗಾಜನೂರಿನ ತುಂಗಾ ಜಲಾಶಯದ ನಾಲ್ಕು ಗೇಟುಗಳನ್ನು ಗುರುವಾರ ತೆಗೆದು ನೀರನ್ನು ನದಿಗೆ ಹರಿಯ ಬಿಡಲಾಯಿತು. 

ಜಲಾಶಯ ಗರಿಷ್ಟ ಮಟ್ಟ ತಲುಪುತ್ತಿರುವುದರಿಂದ ನೀರಿನ ಸಮತೋಲನ ಕಾಯ್ದುಕೊಳ್ಳುವ ಹಿನ್ನೆಲೆ ಜಲಾಶಯದ ನಾಲ್ಕು ಗೇಟ್‌ಗಳಿಂದ ನೀರನ್ನು ತೆರೆದು ನಾಲ್ಕು ಗೇಟುಗಳ ಮೂಲಕ 2086 ಕ್ಯುಸೆಕ್‌ ನೀರನ್ನು ಹೊರ ಬಿಡಲಾಯಿತು. ನೀರಿನ ಒಳಹರಿವು ಹಾಗೂ ಮಳೆಯ ಪ್ರಮಾಣ ಗಮನದಲ್ಲಿಟ್ಟುಕೊಂಡು ಗರಿಷ್ಟಮಟ್ಟದಲ್ಲಿ ಜಲಾಶಯದಲ್ಲಿ ನೀರನ್ನು ಉಳಿಸಿಕೊಳ್ಳುವ ಹಾಗೂ ನದಿ ಪಾತ್ರದ ನಿವಾಸಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲು ಈ ಕ್ರಮ ಅನುಸರಿಸಲಾಗುತ್ತಿದೆ ಎಂದು ತುಂಗಾ ಜಲಾಶಯದ ಸೂಪರಿಂಟೆಂಡೆಂಟ್‌ ಇಂಜಿನಿಯರ್‌ ರಮೇಶ್‌ ತಿಳಿಸಿದರು.

2019ರ ಮಹಾ ಪ್ರವಾಹಕ್ಕೆ ಆಲಮಟ್ಟಿ ಕಾರಣ ಅಲ್ಲ, ಮಹಾರಾಷ್ಟ್ರದ ಕ್ಲೀನ್‌ಚಿಟ್!

ಗೇಟ್‌ ಮೂಲಕ ನೀರು ಬಿಡುತ್ತಿರುವುದಲ್ಲದೆ, ಈ ಮೊದಲಿನಿಂದಲೂ ಪ್ರತಿದಿನ ಇಲ್ಲಿನ ವಿದ್ಯುತ್‌ ಉತ್ಪಾದನಾ ಘಟಕದ ಮೂಲಕ ಸುಮಾರು 4750 ಕ್ಯುಸೆಕ್ಸ್‌ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದಾಗಿ ಒಟ್ಟಾರೆಯಾಗಿ ಸುಮಾರು 6800 ಕ್ಯುಸೆಕ್ಸ್‌ ನೀರನ್ನು ಹೊರಬಿಡಲಾಗುತ್ತಿದೆ ಎಂದು ವಿವರಿಸಿದರು.