ಮೈಸೂರು (ಫೆ.17):  ದೆಹಲಿ ರೈತರ ಹೋರಾಟ ಬೆಂಬಲಿಸಿ ಫೆ.18ರ ಮಧ್ಯಾಹ್ನ 12 ರಿಂದ 3 ರವರೆಗೆ ರೈತ ದಲಿತ ಕಾರ್ಮಿಕ ಐಕ್ಯ ಹೋರಾಟದಿಂದ ರಾಜ್ಯಾದ್ಯಂತ ರೈಲು ತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದರು.

ಕೃಷಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ದೆಹಲಿ ರೈತ ಚಳವಳಿ ಬಗ್ಗೆ ಕೇಂದ್ರ ಸರ್ಕಾರವು ರೈತ ಚಳವಳಿಯ ಹತ್ತಿಕ್ಕುವ ಪ್ರಯತ್ನಕೆ ಹೆಚ್ಚು ಒತ್ತು ನೀಡುತ್ತಿದೆ. ನಾಟಕೀಯವಾಗಿ ವರ್ತಿಸುತ್ತಿದೆ. ಇದನ್ನು ಖಂಡಿಸಿ ದೇಶಾದ್ಯಂತ ಫೆ.18 ರಂದು ಮೂರು ಗಂಟೆ ರೈಲು ತಡೆ ಚಳವಳಿ ನಡೆಸಲು ಕರೆ ನೀಡಿರುವುದನ್ನು ಬೆಂಬಲಿಸಿ, ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯಾದ್ಯಂತ ರೈಲು ತಡೆ ಚಳವಳಿ ನಡೆಸಲಾಗುವುದು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೃಷಿ ಯೋಜನೆಯಡಿ ಈ ರೈತರಿಗೆ ಸಿಗಲಿದೆ ಸಹಾಯಧನ : ಅರ್ಜಿ ಸಲ್ಲಿಸಿ .

ರೈತರು ಮಳೆ, ಚಳಿ, ಗಾಳಿ, ಬಿಸಿಲು ನಡುವೆ ಹೋರಾಟ ನಡೆಸುತ್ತಿದ್ದರೂ ಎಮ್ಮೆ ಚರ್ಮದ ಕೇಂದ್ರ ಸರ್ಕಾರವು ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ. ಪ್ರಧಾನಿ ಮೋದಿಯವರು ದೇಶದಲ್ಲಿ ಅನಧಿಕೃತ ತುರ್ತು ಪರಿಸ್ಥಿತಿ ಜಾರಿ ಮಾಡಿದಂತೆ ಕಾಣುತ್ತಿದೆ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ ರಂಜನ್‌ ಗೊಗಯ್‌ ಅವರು, ಬಡಜನರಿಗೆ ದುಡಿಯುವ ವರ್ಗಕ್ಕೆ ನ್ಯಾಯಾಲಯಗಳಲ್ಲಿ ನ್ಯಾಯ ಸಿಗುವುದು ಕಷ್ಟಕರವಾಗಿದೆ. ಪ್ರಜಾಪ್ರಭುತ್ವ ಅಪಾಯಕಾರಿ ಪರಿಸ್ಥಿತಿಯಲ್ಲಿ ಸಾಗುತ್ತಿದೆ, ಬಂಡವಾಳಶಾಹಿಗಳ ಶ್ರೀಮಂತರ ವಶಕ್ಕೆ ಸಿಲುಕುತ್ತಿದೆಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಯೊಬ್ಬರು ಚಿಂತಿಸಬೇಕಾಗಿದೆ ಎಂದರು.

ರಾಜ್ಯದಲ್ಲಿ 6 ತಿಂಗಳಿಗೊಮ್ಮೆ ಸಕ್ಕರೆ ಸಚಿವರು, ಸಕ್ಕರೆ ಅಭಿವೃದ್ಧಿ ಆಯುಕ್ತರು ಬದಲಾಗುತ್ತಿರುವುದು ಕಬ್ಬು ಬೆಳೆಗಾರರ ಸಮಸ್ಯೆಗಳು ಏರಿಕೆಯಾಗಲು ಹಾಗೂ ಪರಿಹಾರ ಸಿಗಲು ಕಷ್ಟವಾಗುತ್ತಿದೆ. ಕಬ್ಬು ಬೆಳೆಗಾರರಿಗೆ 4000 ಕೋಟಿ ಕಬ್ಬಿನ ಹಣ ಬಾಕಿ ಬರಬೇಕಾಗಿದೆ. ಇದನ್ನು ಕೊಡಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್‌, ಬರಡನಪುರ ನಾಗರಾಜ್‌, ಸೋಮಣ್ಣ, ವೆಂಕಟೇಶ್‌ ಇದ್ದರು.