ಮೈಸೂರು (ಫೆ.14):  ತೋಟಗಾರಿಕೆ ಇಲಾಖೆ ವತಿಯಿಂದ 2020-21ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ರೈತರಿಗೆ ಸಹಾಯಧನ ನೀಡಲಾಗುವುದು.

ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸುವ ರೈತರಿಗೆ ಆಯಾ ಬೆಳೆಗಳು ಮತ್ತು ಬೆಳೆಗಳ ಅಂತರಕ್ಕೆ ಅನುಗುಣವಾಗಿ ಮಾರ್ಗಸೂಚಿಯನ್ವಯ ರೈತರಿಗೆ ನಿಗದಿಪಡಿಸಿರುವ ವೆಚ್ಚದ ಶೇ.90 ಸಹಾಯಧನವನ್ನು ಪ್ರಥಮ 2 ಹೆಕ್ಟೆರ್‌ಗೆ ಹಾಗೂ ನಂತರದ 3 ಹೆಕ್ಟೇರ್‌ಗೆ ಶೇ.45ರ ಸಹಾಯಧನವನ್ನು ನೀಡಲಾಗುತ್ತಿದ್ದು, ಪ್ರತಿ ಫಲಾನುಭವಿ ಕುಟುಂಬಕ್ಕೆ 5 ಹೆಕ್ಟೇರ್‌ಗೆ ಮಿತಿಗೊಳಿಸಲಾಗಿದೆ.

ತೋಟಗಾರಿಕೆಯಲ್ಲಿ ಕೃಷಿ ಮಾಡುತ್ತಿರುವ ಹಾಗೂ ಬೋರ್‌ವೆಲ್‌ ಹೊಂದಿರುವ ರೈತರು ತಮ್ಮ ಜಮೀನಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಆಸಕ್ತಿ ಇರುವ ರೈತರು ತಮ್ಮ ಜಮೀನು ವ್ಯಾಪ್ತಿಯ ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಕೇಂದ್ರದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿಯನ್ನು ಪಡೆಯಬಹುದಾಗಿದೆ.

ಮೊದಲ ಬಾರಿಗೆ ಶುಂಠಿ ಮಲೇಷ್ಯಾಕ್ಕೆ ರಫ್ತು : ರೈತರಲ್ಲಿ ಹರ್ಷ

ಆಸಕ್ತಿಯುಳ್ಳ ರೈತರು ಅರ್ಜಿಯನ್ನು ಪಡೆದು ಪಹಣಿ, ಚೆಕ್‌ಬಂದಿ, ಆಧಾರ್‌ ಕಾರ್ಡ್‌ ಪ್ರತಿ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಯ ಪ್ರತಿ, ಪ್ರಸ್ತಾಪಿತ ಸೂಕ್ಷ್ಮ ನೀರಾವರಿ ಘಟಕದ ವಿನ್ಯಾಸ, ದರಪಟ್ಟಿ, ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್‌ ಖಾತೆಯ ವಿವರಗಳನ್ನು ಲಗತ್ತಿಸಿ ನೀಡಬೇಕು.

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ದೂ.0821-2430450, ಎಚ್‌.ಡಿ. ಕೋಟೆ 08228- 255261, ಹುಣಸೂರು 08222- 252447, ಕೆ.ಆರ್‌. ನಗರ 08223- 262791, ನಂಜನಗೂಡು 08221- 226201, ಪಿರಿಯಾಪಟ್ಟಣ 08223- 273535 ಹಾಗೂ ಟಿ. ನರಸೀಪುರ 08227- 260086 ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರುದ್ರೇಶ್‌ ತಿಳಿಸಿದ್ದಾರೆ.