ಅಕ್ರಮ ಗೋ ಸಾಗಾಣಿಕೆ ಮತ್ತು ಕಸಾಯಿಖಾನೆಗಳ ವಿರುದ್ದ ನಿಲ್ಲದ ಹೋರಾಟ: ಮಾತು ಕೇಳದ ಪೋಲಿಸರಿಗೆ ಪ್ರತಿಭಟನೆ ಮೂಲಕ ಎಚ್ಚರಿಕೆ!
ರಾಜ್ಯದಲ್ಲಿ ದಿನೇ ದಿನೇ ಹಿಂದೂಪರ ಸಂಘಟನೆಗಳ ಹೋರಾಟಗಳು ನಡೆಯುತ್ತಿದ್ದರೂ ಸಹ ಇನ್ನೂ ಹಲವೆಡೆ ಗೋಹತ್ಯೆ, ಅಕ್ರಮ ಗೋಸಾಗಾಣಿಕೆ ಮತ್ತು ಅಕ್ರಮ ಕಸಾಯಿಖಾನೆಗಳ ನಿರಾತಂಕವಾಗಿ ನಡೆಯುತ್ತಿವೆ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಮೇ.15): ರಾಜ್ಯದಲ್ಲಿ (Karnataka) ದಿನೇ ದಿನೇ ಹಿಂದೂಪರ ಸಂಘಟನೆಗಳ ಹೋರಾಟಗಳು ನಡೆಯುತ್ತಿದ್ದರೂ ಸಹ ಇನ್ನೂ ಹಲವೆಡೆ ಗೋಹತ್ಯೆ, ಅಕ್ರಮ ಗೋಸಾಗಾಣಿಕೆ (Illegal Cattle Trafficking) ಮತ್ತು ಅಕ್ರಮ ಕಸಾಯಿಖಾನೆಗಳ (Slaughterhouses) ನಿರಾತಂಕವಾಗಿ ನಡೆಯುತ್ತಿವೆ. ಇಂತಹ ಅಕ್ರಮಗಳ ವಿರುದ್ದ ಕಟ್ಟು ನಿಟ್ಟಿನ ಕ್ರಮವಾಗ್ತಿಲ್ಲ ಎಂದು ಬಾಗಲಕೋಟೆ ನಗರದಲ್ಲಿ ಹಿಂದೂ ಜಾಗರಣ ವೇದಿಕೆ ಇಂದು ಸಹ ಬೀದಿಗಿಳಿದು ಹೋರಾಟ (Protest) ನಡೆಸಿತು. ಈ ಮಧ್ಯೆ ಕ್ರಮಕೈಗೊಳ್ಳದ ಪೋಲಿಸ್ ಇಲಾಖೆ (Police Department) ವಿರುದ್ದ ತೀವ್ರ ಅಸಮಾಧಾನ ಕೇಳಿ ಬಂತು. ಬಾಗಲಕೋಟೆ ನಗರದಲ್ಲಿ ಇಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರೆಲ್ಲಾ ಸೇರಿ ಹೋರಾಟಕ್ಕಾಗಿ ರಸ್ತೆಗಳಿದಿದ್ದರು.
ಕೈಯಲ್ಲಿ ಕೇಸರಿ ಬಾವುಟಗಳನ್ನ ಹಿಡಿದು ಪ್ರತಿ ಹೆಜ್ಜೆಗೂ ಘೋಷಣೆಗಳನ್ನ ಕೂಗುತ್ತಾ, ಗೋವಿನ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಹೌದು! ಬಾಗಲಕೋಟೆ ಜಿಲ್ಲೆಯಲ್ಲಿ ಹತ್ತು ಹಲವು ಹೋರಾಟಗಳು ನಿರಂತರವಾಗಿ ನಡೆಯುತ್ತಿರುವುದರ ಮಧ್ಯೆ ಇಂದು ಅವ್ಯಾಹತವಾಗಿ ಗೋಹತ್ಯೆ ಮತ್ತು ಅಕ್ರಮ ಗೋಸಾಗಾಣಿಕೆ ನಡೆಯುತ್ತಿತ್ತು. ಇವುಗಳ ಮಧ್ಯೆ ಜಿಲ್ಲೆಯ ವಿವಿದೆಡೆ ಅಕ್ರಮವಾಗಿ ಕಸಾಯಿಖಾನೆಗಳೂ ಸಹ ಕಾರ್ಯ ನಿರ್ವಹಿಸುತ್ತಿವೆ. ಇಂತಹಗಳ ವಿರುದ್ದ ಕ್ರಮಕೈಗೊಳ್ಳುವಂತೆ ಸಾಕಷ್ಟು ಬಾರಿ ಹೇಳಿದರೂ ಪೋಲಿಸ ಇಲಾಖೆ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಇಂತಹ ಹಿಂದೂ ಜಾಗರಣ ವೇದಿಕೆ ಬೀದಿಗಿಳಿದು ಹೋರಾಟ ನಡೆಸಿತು.
Bagalkote: ಈ ಊರಲ್ಲಿ ಇನ್ನು 6 ತಿಂಗಳು ಗಂಡು ಮಕ್ಕಳ ಮದುವೆ ಮಾಡೋಂಗಿಲ್ಲ: ಇದು ತುಳಸಿಗೇರಿ ಹನುಮನ ಎಫೆಕ್ಟ್!
ಅಮೀನಗಡ ಮತ್ತು ಕೆರೂರ ಪ್ರತಿವಾರದ ಜಾನುವಾರ ಸಂತೆಯಲ್ಲಿ ಅಂತಾರಾಜ್ಯಕ್ಕೆ ಗೋಸಾಗಾಣಿಕೆ: ಪ್ರಮುಖವಾಗಿ ಬಾಗಲಕೋಟೆ ಜಿಲ್ಲೆಯ ಕೆರೂರ ಮತ್ತು ಅಮೀನಗಡ ಪಟ್ಟಣಗಳಲ್ಲಿ ಪ್ರತಿವಾರ ಬೃಹತ್ ಜಾನುವಾರ ಸಂತೆಗಳು ನಡೆಯುತ್ತಿದ್ದು, ಸಾವಿರಾರು ಜನರು ಸೇರುತ್ತಾರೆ. ಅದರಲ್ಲೂ ಅಚ್ಚರಿ ಅಂದರೆ ಈ ಜಾನುವಾರಗಳ ಪ್ರತಿವಾರದ ಸಂತೆಗೆ ನಮ್ಮ ಕರ್ನಾಟಕ ರಾಜ್ಯವಲ್ಲದೆ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಹೀಗೆ ಬೇರೆ ಬೇರೆ ರಾಜ್ಯಗಳಿಂದಲೂ ಸಹ ಜಾನುವಾರ ಕೊಂಡೊಯ್ಯಲು ಜನ ಬರ್ತಾರೆ. ಹೀಗೆ ಬಂದವರು ತಮಗೆ ಬೇಕಾದ ಗೋವುಗಳನ್ನ ಖರೀದಿಸಿ ಲಾರಿ ಮೂಲಕ ಕೊಂಡೊಯ್ಯುತ್ತಾರೆ. ಆದರೆ ಇಂತಹ ಜಾನುವಾರ ಸಂತೆಗಳಲ್ಲಿ ಖದೀಮರು ಗೋವುಗಳನ್ನ ಕೊಂಡೊಯ್ದು ಅಕ್ರಮವಾಗಿ ಮಾರಾಟ ಮಾಡುತ್ತಿರುವುದರ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಇದರೊಟ್ಟಿಗೆ ಎಲ್ಲೆಂದರಲ್ಲಿ ಗೋಹತ್ಯೆ ನಡೆಯುತ್ತಿದೆ. ಹೀಗಾಗಿ ಈ ಕೂಡಲೇ ಪೋಲಿಸ ಇಲಾಖೆ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜಾಗರಣ ವೇದಿಕೆ ಮುಖಂಡರಾದ ಕಿರಣ ಪವಾಡಶೆಟ್ಟರ್ ಆಗ್ರಹಿಸಿದ್ದಾರೆ.
ಸ್ಪಂದಿಸದ ಪೋಲಿಸ್ ಇಲಾಖೆ ವಿರುದ್ದ ಹಿಂದೂ ಜಾಗರಣ ವೇದಿಕೆ ಅಸಮಾಧಾನ: ಈಗಾಗಲೇ ಬಾಗಲಕೋಟೆ ಜಿಲ್ಲೆಯಲ್ಲಿ ಕೆಲವೆಡೆ ಗೋಹತ್ಯೆ ಮತ್ತು ಗೋಸಾಗಾಣಿಕೆ ಹಾಗೂ ಕಸಾಯಿಖಾನೆಗಳು ನಡೆಯುತ್ತಿರುವುದರ ಬಗ್ಗೆ ಪೋಲಿಸ್ ಇಲಾಖೆಗೆ ಹಿಂದೂ ಜಾಗರಣ ವೇದಿಕೆ ಮೌಖಿಕವಾಗಿ ದೂರು ನೀಡಿದೆಯಂತೆ. ಆದರೆ ಇದಕ್ಕೆ ಪೋಲಿಸ ಇಲಾಖೆ ಮಾತ್ರ ಸ್ಪಂದನೆ ನೀಡದೇ ಕ್ರಮಕ್ಕೆ ಮುಂದಾಗದೇ ಇರುವ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನ ನಡೆಸಲಾಯಿತು. ವಿಶೇಷ ಅಂದ್ರೆ ಗೋವಿನ ಸಮ್ಮುಖದಲ್ಲೇ ಪ್ರತಿಭಟನೆ ಮೆರವಣಿಗೆಯನ್ನ ನಡೆಸಲಾಯಿತು. ನಗರದ ಬೀಳೂರಜ್ಜನ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಕಾಯಿಪಲ್ಯೆ ಮಾರ್ಕೆಟ್, ವಲ್ಲಬಾಯ್ ವೃತ್ತ ಮತ್ತು ಬಸವೇಶ್ವರ ವೃತ್ತದ ಮೂಲಕ ಕೇಸರಿ ಬಾವುಟಗಳನ್ನ ಹಿಡಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಪಡೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
Bagalkote: ಲಾಬಿಗೆ ಮಣಿಯದೆ ಮಲಪ್ರಭೆ ಒತ್ತುವರಿ ತೆರವಿಗೆ ಮುಂದಾಗುತ್ತಾ ಸರ್ಕಾರ?
ಇನ್ನು ಪ್ರತಿಭಟನಾ ಮೆರವಣಿಗೆ ವೇಳೆ ಸೂಕ್ತ ಪೋಲಿಸ ಬಂದೂಬಸ್ತ್ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಆನಂದ ಮಾತನಾಡಿ, ಜಿಲ್ಲೆಯಲ್ಲಿ ನಡೆಯುತ್ತಿರೋ ಅಕ್ರಮಗಳನ್ನ ತಡೆಯಲು ಪೋಲಿಸ್ ಇಲಾಖೆ ಮುಂದಾಗಬೇಕೆಂದು ಆಗ್ರಹಿಸಿದರು. ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯಾದ್ಯಂತ ನಡೆಯುತ್ತಿರೋ ಗೋಸಾಗಾಣಿಕೆ ಸೇರಿದಂತೆ ಹಲವು ಅಕ್ರಮಗಳ ವಿರುದ್ದ ಹಿಂದೂ ಜಾಗರಣ ವೇದಿಕೆ ಬೀದಿಗಿಳಿದು ಹೋರಾಟ ನಡೆಸಿದ್ದು, ಇದಕ್ಕೆ ಪೋಲಿಸ ಇಲಾಖೆ ಮುಂದಿನ ದಿನಗಳಲ್ಲಿ ಇನ್ಯಾವ ರೀತಿ ಕ್ರಮಕ್ಕೆ ಮುಂದಾಗುತ್ತೇ ಅಂತ ಕಾದು ನೋಡಬೇಕಿದೆ.