Bagalkote: ಈ ಊರಲ್ಲಿ ಇನ್ನು 6 ತಿಂಗಳು ಗಂಡು ಮಕ್ಕಳ ಮದುವೆ ಮಾಡೋಂಗಿಲ್ಲ: ಇದು ತುಳಸಿಗೇರಿ ಹನುಮನ ಎಫೆಕ್ಟ್!
ಈ ಊರಲ್ಲಿ ಇನ್ನು ಏನಿದ್ದರೂ 6 ತಿಂಗಳ ಗಂಡು ಮಕ್ಕಳ ಮದುವೆ ಮಾಡೋ ಹಾಗಿಲ್ಲ, ಅಲ್ಲಿ ತನಕ ಮನೆಗಳಿಗೆ ಸುಣ್ಣ ಬಣ್ಣವನ್ನು ಹಚ್ಚುವ ಹಾಗಿಲ್ಲ. ಇನ್ನು ಮನೆಗೆ ಕಸಬರಿಗೆಯಂತ ವಸ್ತುಗಳನ್ನ ಖರೀದಿ ಮಾಡುವ ಹಾಗಿಲ್ಲ. ಯಾಕೆಂದರೆ ಇಷ್ಟೆಲ್ಲಾ ಹನುಮಂತ ದೇವರ ಓಕುಳಿ ನಂತರ ನಡೆಯುವುದರಿಂದ ಇದು ಹನುಮ ದೇವರ ಎಫೆಕ್ಟ್.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಮೇ.15): ಈ ಊರಲ್ಲಿ ಇನ್ನು ಏನಿದ್ದರೂ 6 ತಿಂಗಳ ಗಂಡು ಮಕ್ಕಳ ಮದುವೆ (Marriage) ಮಾಡೋ ಹಾಗಿಲ್ಲ, ಅಲ್ಲಿ ತನಕ ಮನೆಗಳಿಗೆ ಸುಣ್ಣ ಬಣ್ಣವನ್ನು ಹಚ್ಚುವ ಹಾಗಿಲ್ಲ. ಇನ್ನು ಮನೆಗೆ ಕಸಬರಿಗೆಯಂತ ವಸ್ತುಗಳನ್ನ ಖರೀದಿ ಮಾಡುವ ಹಾಗಿಲ್ಲ. ಯಾಕೆಂದರೆ ಇಷ್ಟೆಲ್ಲಾ ಹನುಮಂತ (Hanuman) ದೇವರ ಓಕುಳಿ ನಂತರ ನಡೆಯುವುದರಿಂದ ಇದು ಹನುಮ ದೇವರ ಎಫೆಕ್ಟ್.
ಹೌದು! ಇಂತಹವೊಂದು ಅಪರೂಪದ ಸಂಪ್ರದಾಯವಿರೋದು ಬಾಗಲಕೋಟೆ (Bagalkote) ಜಿಲ್ಲೆಯ ತುಳಸಿಗೇರಿ ಗ್ರಾಮದಲ್ಲಿ. ಇದು ಬಾಗಲಕೋಟೆ ಜಿಲ್ಲೆಯ ಹನುಮಂತ ದೇವರ ಸುಕ್ಷೇತ್ರವಾಗಿರುವ ತುಳಸಿಗೇರಿ ಗ್ರಾಮ (Tulasigeri Anjaneya Temple). ಈ ಗ್ರಾಮದಲ್ಲಿ ತಲೆತಲಾಂತರದಿಂದ ಹನುಮ ದೇವರ ಹೆಸರಲ್ಲಿ ವಿಶಿಷ್ಟ ಸಂಪ್ರದಾಯಿಕ ಓಕುಳಿಯೊಂದು ನಡೆದುಕೊಂಡು ಬರುತ್ತೇ. ಇಡೀ ಊರಿಗೆ ಊರೇ ಒಂದಾಗಿ ಸಂಭ್ರಮದಿಂದ ಸೇರಿ ದೇವರಿಗೆ ವಿಶೇಷ ಕಡುಬು ಸಹಿತ ಅನ್ನಪ್ರಸಾದ ಮಾಡಿ ಭಾವೈಕ್ಯತೆಯಿಂದ ಓಕುಳಿಯಾಡುತ್ತಾರೆ. ಹೀಗೆ ಅತ್ತ ಇಡೀ ಊರಿಗೇ ಊರೇ ಸೇರಿಕೊಂಡು ಓಕುಳಿಯಾಡಿದರೆ ಸಾಕು ಆ ಊರಲ್ಲಿ ನಾನಾ ತರಹದ ಸಂಪ್ರದಾಯಗಳು ನಡೆದುಕೊಂಡು ಬರುತ್ತವೆ.
ಹನುಮಾನ್ ಓಕುಳಿ ತುಳಸಿಗೇರಿ ಗ್ರಾಮಕ್ಕೊಂದು ಹಬ್ಬ: ತುಳಸಿಗೇರಿಯಲ್ಲಿರುವ ಆಂಜನೇಯ ಸ್ವಾಮಿ ಜಾಗೃತ ದೇವರೆಂದೆ ಈ ಭಾಗದಲ್ಲಿ ಹೆಚ್ಚು ಪ್ರತೀತಿ. ರಾಜ್ಯದ ಮೂಲೆ ಮೂಲೆಯಲ್ಲಿ ಈ ಆಂಜನೇಯ ಸ್ವಾಮಿಗೆ ಭಕ್ತರಿದ್ದಾರೆ. ಇಂತಹ ಹನುಮ ದೇವನಿಗೆ ತುಳಸಿಗೇರಿ ಗ್ರಾಮಸ್ಥರು ಪ್ರತಿ ಮೂರು ವರ್ಷಕ್ಕೊಮ್ಮೆ ಓಕುಳಿಯಾಚರಣೆ ಮಾಡುತ್ತಿದ್ದರು. ಆದರೆ ಈಗ ಹರಕೆ ಹೊತ್ತ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಯಾದ ಪ್ರಯುಕ್ತ ತಮ್ಮ ವೆಚ್ಚದಲ್ಲಿ ಓಕುಳಿ ಮಾಡಲು ನಿರ್ಧರಿಸಿ ಅದನ್ನು ದೈವದ ಹಿರಿಯರ ಮುಂದೆ ಪ್ರಸ್ತಾಪ ಮಾಡಿದ ಕಾರಣ, ಇಂದು ಓಕುಳಿ ಮಾಡಿಸಲು ಮುಂದಾಗಿರುವ ಭಕ್ತರ ಸಂಖ್ಯೆ ಹೆಚ್ಚಿರುವ ಕಾರಣ ಪ್ರತಿವರ್ಷ ಓಕುಳಿಯನ್ನ ಆಡಲಾಗುತ್ತಿದೆ. ಜಾತಿ ಮತ ಭೇಧ ಎನ್ನದೇ ಎಲ್ಲರೂ ಸೇರಿ ಈ ಓಕುಳಿಯಲ್ಲಿ ಮಿಂದೇಳುವ ದೃಶ್ಯ ರೋಮಾಂಚನವನ್ನುಂಟು ಮಾಡುತ್ತದೆ. ಹನುಮ ದೇವನಿಗಾಗಿ ಇಡೀ ಊರಿನ ಮಹಿಳೆಯರು, ಯುವಕರೆಲ್ಲಾ ಸೇರಿ ಅಡುಗೆ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಮೂಲಕ ದೇವರಿಗೆ ಕಡುಬಿನ ನೈವೇದ್ಯ ಮಾಡಿ ಇಡೀ ಊರಿಗೆ ಊರೇ ಸೇರಿ ಪ್ರಸಾದ ನೈವೇದ್ಯ ಮಾಡಿ ಸಂಭ್ರಮಿಸುತ್ತಾರೆ. ಹೀಗಾಗಿ ಹನುಮಾನ ಓಕುಳಿ ತುಳಸಿಗೇರಿ ಗ್ರಾಮಕ್ಕೊಂದು ಹಬ್ಬವಾಗಿದೆ.
Bagalkote: ಲಾಬಿಗೆ ಮಣಿಯದೆ ಮಲಪ್ರಭೆ ಒತ್ತುವರಿ ತೆರವಿಗೆ ಮುಂದಾಗುತ್ತಾ ಸರ್ಕಾರ?
ಓಕುಳಿ ಬೆನ್ನಲ್ಲೆ ಗ್ರಾಮದಲ್ಲಿ 6 ತಿಂಗಳ ಗಂಡು ಮಕ್ಕಳ ಮದುವೆ ಮಾಡದ ಗ್ರಾಮಸ್ಥರು: ಇನ್ನು ತುಳಸಿಗೇರಿ ಗ್ರಾಮದಲ್ಲಿ ಅತ್ತ ಓಕುಳಿ ಸಂಭ್ರಮ ಮುಗಿಯುತ್ತಿದ್ದಂತೆ ಇತ್ತ ಹಿರಿಯ ಅಣತಿಯಂತೆ ನೈತಿಕ ಸಂಪ್ರದಾಯಗಳು ಶುರುವಾಗುತ್ತವೆ. ಅಂದರೆ ಮುಖ್ಯವಾಗಿ ಇಲ್ಲಿ ಬರೋಬ್ಬರಿ 6 ತಿಂಗಳ ಏನೇ ಆದರೂ ಮನೆಯಲ್ಲಿನ ಗಂಡು ಮಕ್ಕಳಿಗೆ ಮದುವೆಯನ್ನ ಮಾಡೋ ಹಾಗಿಲ್ಲ, ಅಂತಹವೊಂದು ನಿಷಿದ್ದತೆಯನ್ನ ಈ ಗ್ರಾಮದ ಹಿರಿಯರು ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ಓಕುಳಿಗೂ ಮೊದಲೇ ಹಿರಿಯರು ತಮ್ಮ ಮಕ್ಕಳಿಗೆ ಮದುವೆ ಮಾಡೋ ಸಂಪ್ರದಾಯ ಇಲ್ಲಿದೆ. ಇಲ್ಲವಾದರೆ ಮರುವರ್ಷ ಮಕ್ಕಳ ಮದುವೆ ಮಾಡುತ್ತಾರೆ. ಆನಂತರದಲ್ಲಿ ಮನೆಗಳಿಗೆ ಹೊಸದಾಗಿ ಸುಣ್ಣ ಬಣ್ಣಗಳನ್ನೂ ಸಹ ಹಚ್ಚುವುದಿಲ್ಲ, ಮೇಲಾಗಿ ಕಸಬರಿಗೆಯಂತ ವಸ್ತುಗಳ ಖರೀದಿಯನ್ನ ಸಹಿತ ಮಾಡುವ ಹಾಗಿಲ್ಲ. ಇಂತಹ ಸಂಪ್ರದಾಯಗಳನ್ನ ಊರಿನ ಕುಟುಂಬಗಳೆಲ್ಲಾ ಸೇರಿ ಹಿರಿಯರ ಅಣತಿಯಂತೆ ನಡೆಸಿಕೊಂಡು ಬರುತ್ತಿದ್ದಾರೆ. ಇದು ತುಳಸಿಗೇರಿಯ ಜಾಗೃತ ದೇವರೆಂದೇ ಹೆಸರಾಗಿರುವ ಹನುಮ ದೇವರಲ್ಲಿ ಜನರಿಟ್ಟಿರೋ ನಂಬಿಕೆಯಾಗಿದೆ ಅಂತಾರೆ ಗ್ರಾಮದ ಹಿರಿಯರಾದ ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ.
ಗಂಡು ಮಕ್ಕಳಂತೆ ಹೆಣ್ಣು ಮಕ್ಕಳ ಮದುವೆಗಿಲ್ಲ ಬ್ರೇಕ್: ತುಳಸಿಗೇರಿ ಗ್ರಾಮದಲ್ಲಿ ಓಕುಳಿ ನಂತರ ಗಂಡು ಮಕ್ಕಳ ಮದುವೆಗೆ ನಿಷೇಧ ಇದ್ದರೂ ಸಹ ಅದು ಹೆಣ್ಣು ಮಕ್ಕಳಿಗೆ ಮಾತ್ರ ಸಂಭಂದವಿಲ್ಲ. ಯಾರಾದರೂ ಸಹ ತಮ್ಮ ಮನೆಯ ಹೆಣ್ಣು ಮಕ್ಕಳ ಮದುವೆಯನ್ನ ಮಾಡಬಹುದು ಆದರೆ ಗಂಡು ಮಕ್ಕಳಿಗೆ ಮಾತ್ರ ಇದು ನಿಷಿದ್ಧ. ಹೀಗಾಗಿ ಓಕುಳಿ ಬರುವುದಕ್ಕಿಂತ ಮುಂಚಿತವಾಗಿಯೇ ಗ್ರಾಮದಲ್ಲಿ ಕುಟುಂಬಗಳು ತಮ್ಮ ಗಂಡು ಮಕ್ಕಳ ಮದುವೆ ಮಾಡಲು ಮುಂದಾಗುತ್ತಾರೆ. ಇಂತಹ ಸಂಪ್ರದಾಯ ಪದ್ದತಿಯನ್ನ ಹಿಂದಿನಿಂದಲೂ ಸಹ ಹಿರಿಯರು ಮಾಡಿಕೊಂಡು ಬಂದಿದ್ದು, ಇಂದಿಗೂ ಸಹ ಹಿರಿಯರ ಅಪ್ಪಣೆಯಂತೆ ಗ್ರಾಮದ ಯುವಕರೆಲ್ಲಾ ಸೇರಿ ಅನುಸರಿಸಿಕೊಂಡು ಬರುತ್ತಿರುವುದು ವಿಶೇಷ. ಹೀಗಾಗಿ ಹಲವು ವಿಶೇಷಗಳೊಂದಿಗೆ ತುಳಸಿಗೇರಿ ಗ್ರಾಮದಲ್ಲಿ ಊರಿನ ಹಿರಿಯರ ಸಮ್ಮುಖದಲ್ಲಿ ಸಂಭ್ರಮದ ಓಕುಳಿ ಪ್ರತಿವರ್ಷ ಗಮನ ಸೆಳೆಯುತ್ತಿದೆ, ಇವುಗಳ ಮಧ್ಯೆ ಹಿರಿಯರು ಮಾಡಿಕೊಂಡು ಬಂದಿರತಕ್ಕಂತಹ ವಿಶೇಷ ಸಾಂಪ್ರದಾಯಿಕ ಆಚರಣೆಗಳು ಮುಂದುವರೆದುಕೊಂಡು ಬಂದಿದ್ದು, ಹೀಗಾಗಿ ಇಂತಹ ಸಂಪ್ರದಾಯಗಳ ಆಚರಣೆಯಿಂದ ಹನುಮ ದೇವರು ತಮಗೆ ಒಳ್ಳೆಯದನ್ನ ಮಾಡಿದ್ದಾನೆ. ಇದನ್ನ ಮೀರಿ ಯಾರು ನಡೆದಿಲ್ಲಾ ಅನ್ನೋ ನಂಬಿಕೆ ಈ ಗ್ರಾಮಸ್ಥರಲ್ಲಿದೆ.
ಜೈಲಿಗೆ ಹೋಗಿ ಬಂದ ಕಾಂಗ್ರೆಸ್ಸಿಗರಿಂದ ಬಿಜೆಪಿಗೆ ನೈತಿಕ ಪಾಠ ಬೇಕಿಲ್ಲ: ಸಚಿವ ಕಾರಜೋಳ ವಾಗ್ದಾಳಿ
ಒಟ್ಟಿನಲ್ಲಿ ಆಧುನಿಕತೆಯ ಭರಾಟೆಯಲ್ಲೂ ಸಹ ಎಲ್ಲೆಡೆ ಸಂಪ್ರದಾಯಗಳು ನಶಿಸಿ ಹೋಗುತ್ತಿರುವುದರ ಮಧ್ಯೆಯೇ ತುಳಸಿಗೇರಿ ಗ್ರಾಮದಲ್ಲಿ ಮಾತ್ರ ಯುವಕರು ವಿಶಿಷ್ಟ ಸಂಪ್ರದಾಯಗಳ ಮೂಲಕ ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರೆಯುತ್ತಿರೋದು ವಿಶೇಷವೇ ಸರಿ. ಒಟ್ಟಾರೆ ಇಂದಿನ ಟೆಕ್ನಾಲಜಿ ಯುಗದಲ್ಲೂ ಹಳ್ಳಿಗಾಡಿನ ಸಂಪ್ರದಾಯಗಳು ಮುಂದುವರೆದುಕೊಂಡು ಬಂದಿವೆ ಅನ್ನೋದಕ್ಕೆ ತುಳಸಿಗೇರಿ ಗ್ರಾಮ ಸಾಕ್ಷಿಯಾಗಿದೆ.