Asianet Suvarna News Asianet Suvarna News

ಸಾರ್ವಜನಿಕ ಗಣೇಶೋತ್ಸವ : ಅನುಮತಿ ಸಿಗುತ್ತಾ..?

ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶ ಉತ್ಸವಕ್ಕೆ ನಿರ್ಬಂಧ ಹೇರಲಾಗಿದ್ದು, ಅನುಮತಿಗಾಗಿ ಆಗ್ರಹಿಸಿ ವಿವಿಧೆಡೆ ಪ್ರತಿಭಟನೆ ನಡೆಸಲಾಗಿದೆ.

protest For Ganesh Festival In Davanagere
Author
Bengaluru, First Published Aug 18, 2020, 7:42 AM IST

 ದಾವಣಗೆರೆ(ಆ.18):  ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುವಂತೆ ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ನಿಯಂತ್ರಣ ಕಾರಣಕ್ಕೆ ಸಾರ್ವಜನಿಕ ಗಣೇಶ ಉತ್ಸವಕ್ಕೆ ಸರ್ಕಾರ ಅನುಮತಿ ನೀಡದಿರುವುದು ನೋವಿನ ಸಂಗತಿ. ದೇಶದ ಜನತೆ ಕೋವಿಡ್‌ ವಿಚಾರದಲ್ಲಿ ಜಾಗೃತರಿದ್ದು, ನಿಯಮ ಮೀರಿ ವರ್ತಿಸುವುದಿಲ್ಲ ಎಂದು ಹೇಳಿದರು.

ಸ್ವಾತಂತ್ರ್ಯ ಸಂಗ್ರಾಮದ ನೇತಾರ ಬಾಲಗಂಗಾಧರ ತಿಲಕರು ಇಡೀ ದೇಶವನ್ನು ಒಗ್ಗೂಡಿಸಿ, ಸ್ವಾತಂತ್ರ್ಯದ ಕಿಚ್ಚು ಹಚ್ಚಲು ಮನೆಯಲ್ಲಿದ್ದ ಗಣೇಶನನ್ನು ಸಾರ್ವತ್ರಿಕಗೊಳಿಸಿ, ಜಾತಿ, ಮತ, ಪ್ರಾಂತ, ಭಾಷೆ, ಪಕ್ಷ ಮರೆತು ಏಕತೆಯ ಸೂತ್ರದಲ್ಲಿ ಪೋಣಿಸಿದ ಇತಿಹಾಸ ಸಾರ್ವಜನಿಕ ಗಣೇಶ ಆಚರಣೆಗೆ ಇದೆ. ಕೊರೋನಾ ನೆಪದಲ್ಲಿ 125 ವರ್ಷಗಳ ಪರಂಪರೆಗೆ ಧಕ್ಕೆ ತರುವುದು ಸರಿಯಲ್ಲ. ಗಣೇಶೋತ್ಸವದಂತಹ ಸಾರ್ವಜನಿಕ ಉತ್ಸವಕ್ಕೆ ಕೊರೋನಾ ಹೆಸರಲ್ಲಿ ಸರ್ಕಾರಗಳು ಅನುಮತಿ ನೀಡದಿರುವುದು ಅತ್ಯಂತ ನೋವಿನ ಸಂಗತಿ ಹಾಗೂ ಖಂಡನೀಯ ವಿಚಾರ ಎಂದು ಅಭಿಪ್ರಾಯ ಪಟ್ಟರು.

ಇದು ಮುಸ್ಲಿಂ ದೇಶವಲ್ಲವೇ'? ಮಹಿಳೆಯಿಂದ ಗಣೇಶ ವಿಗ್ರಹ ಕುಟ್ಟಿ ಪುಡಿಪುಡಿ!..

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಾಗಲೂ ಸಾರ್ವಜನಿಕ ಗಣೇಶೋತ್ಸವಕ್ಕೆ ಯಾವುದೇ ವಿಘ್ನವಿರಲಿಲ್ಲ. ಆದರೆ, ಕೇವಲ ಹಿಂದುಗಳ ಹಬ್ಬಕ್ಕೆ ನಿರ್ಬಂಧ ಹೇರುವುದೂ ದುರಂತ. ಬಾರ್‌, ಮಾಲ್‌, ಜಿಮ್‌ಗೆ ಅನುಮತಿ ನೀಡಿ, ಮಸೀದಿ, ಚಚ್‌ರ್‍ ತೆರೆಯಲು ಅವಕಾಶ ನೀಡಿದ ಸರ್ಕಾರ ಗಣೇಶೋತ್ಸವಕ್ಕೆ ಅನುಮತಿ ನೀಡದಿರುವುದು ಸರಿಯಲ್ಲ. ಈ ಬಗ್ಗೆ ಸರ್ಕಾರ ತನ್ನ ನಿರ್ಧಾರ ಬಗ್ಗೆ ಮರು ಪರಿಶೀಲಿಸಲಿ ಎಂದು ಆಗ್ರಹಿಸಿದರು.

ಸರ್ಕಾರ ಒಂದು ವೇಳೆ ಅನುಮತಿ ನೀಡದಿದ್ದರೂ ಸಾಂಕೇತಿಕವಾಗಿಯಾದರೂ ಸಾರ್ವಜನಿಕ ಗಣೇಶೋತ್ಸವ ಆಚರಿಸಲಿದ್ದೇವೆ. ಆಕಸ್ಮಾತ್‌ ನಮ್ಮನ್ನು ಬಂಧಿಸಿದರೆ ಜೈಲಿನಲ್ಲಿಯೇ ಗಣೇಶನ ಪೂಜೆ ಮಾಡುತ್ತೇವೆ. ಮಹಾರಾಷ್ಟ್ರದಲ್ಲಿ ಕೋವಿಡ್‌ ಬಾಧಿತವಾಗಿದ್ದರೂ, ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಲಾಗಿದೆ. ಅಲ್ಲಿಗೆ ಆಗುವುದು ಇಲ್ಲಿ ಏಕೆ ಸಾಧ್ಯವಿಲ್ಲ ಎಂದು ಅವರು ಪ್ರಶ್ನಿಸಿದರು.

ಈಗಾಗಲೇ ಗಣೇಶೋತ್ಸವ ನಂಬಿಕೊಂಡು ದೇಶಾದ್ಯಂತ ಲಕ್ಷಾಂತರ ಕುಟುಂಬಗಳು ಹೆಚ್ಚಿನ ಬಂಡವಾಳ ಹಾಕಿ, ಗಣೇಶನ ವಿಗ್ರಹಗಳನ್ನು ಸಿದ್ಧಪಡಿಸಿಕೊಂಡಿವೆ. ಅದರಲ್ಲೂ ಸಾರ್ವಜನಿಕ ಗಣೇಶೋತ್ಸವಕ್ಕೆಂದು ದೊಡ್ಡ ದೊಡ್ಡ ಗಣೇಶ ತಯಾರಿಸಿ, ಇದಕ್ಕಾಗಿ ಹೆಚ್ಚಿನ ಹಣ ವ್ಯಯಿಸಿರುವ ಕಲಾವಿದರ ಕುಟುಂಬಗಳ ಪರಿಸ್ಥಿತಿಯ ಬಗ್ಗೆಯೂ ಸರ್ಕಾರ ಆಲೋಚಿಸಲಿ ಎಂದು ಆಗ್ರಹಿಸಿದರು.

ಗೌರಿ, ಗಣೇಶ ಹಬ್ಬಕ್ಕೆ ಕೆಎಂಎಫ್‌ ನಿಂದ ಬಂಪರ್‌ ಕೊಡುಗೆ...

ಈ ಎಲ್ಲಾ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು, ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಬೇಕು. ಯಾವುದೇ ಕಾರಣಕ್ಕೂ 125 ವರ್ಷಗಳ ಇತಿಹಾಸ, ಹಿನ್ನೆಲೆ, ಮಹತ್ವ ಹೊಂದಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ ವಿಘ್ನ ಹೇರುವುದು ಬೇಡ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಗಣೇಶೋತ್ಸವಕ್ಕೆ ಅನುಮತಿ ನೀಡಲಿ ಎಂದು ಕುಲಕರ್ಣಿ ಒತ್ತಾಯಿಸಿದರು.

ಶ್ರೀರಾಮ ಸೇನೆ ರಾಜ್ಯ ಸಂಪರ್ಕ ಪ್ರಮುಖ ಪರಶುರಾಮ ನಡುಮನಿ, ಜಿಲ್ಲಾಧ್ಯಕ್ಷ ಮಣಿ ಸರ್ಕಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಬಿ.ವಿನೋದರಾಜ್‌, ಕುಮಾರ ನಾಯ್ಕ, ಆನಂದಜ್ಯೋತಿ, ಶ್ರೀಧರ್‌, ಸಾಗರ್‌, ಡಿ.ರಾಜೇಶ, ಮಾರ್ಕಂಡೇಯ, ರಾಜು, ಕರಾಟೆ ರಮೇಶ ಇತರರು ಇದ್ದರು. ನಂತರ ಡಿಸಿ ಕಚೇರಿಗೆ ತೆರಳಿದ ಗಂಗಾಧರ ಕುಲಕರ್ಣಿ ಇತರರು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Follow Us:
Download App:
  • android
  • ios