ಕದ್ದು ಮುಚ್ಚಿ ನೀರು ಬಿಡುತ್ತಿರುವ ಸರ್ಕಾರ ಕ್ರಮ ಖಂಡಿಸಿ ರೈತರಿಂದ ಪ್ರತಿಭಟನೆ
ಕಾವೇರಿ ನೀರು ಬಿಡುವುದಿಲ್ಲ ಎಂದು ಹೇಳುತ್ತಲೆ ಕದ್ದು ಮುಚ್ಚಿ ನೀರು ಬಿಡುತ್ತಿರುವ ಸರ್ಕಾರ ಕ್ರಮ ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕಬ್ಬು ಬೆಳೆಗಾರರ ಸಂಘದವರು ಮೈಸೂರಿನ ಕೆಎಸ್ಆರ್ಟಿಸಿ ಗ್ರಾಮಾಂತರ ಬಸ್ ನಿಲ್ದಾಣ ಮುಂಭಾಗದಲ್ಲಿ ಮಂಗಳವಾರ ರಸ್ತೆ ತಡೆ ಪ್ರತಿಭಟಿಸಿದರು
ಮೈಸೂರು : ಕಾವೇರಿ ನೀರು ಬಿಡುವುದಿಲ್ಲ ಎಂದು ಹೇಳುತ್ತಲೆ ಕದ್ದು ಮುಚ್ಚಿ ನೀರು ಬಿಡುತ್ತಿರುವ ಸರ್ಕಾರ ಕ್ರಮ ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕಬ್ಬು ಬೆಳೆಗಾರರ ಸಂಘದವರು ಮೈಸೂರಿನ ಕೆಎಸ್ಆರ್ಟಿಸಿ ಗ್ರಾಮಾಂತರ ಬಸ್ ನಿಲ್ದಾಣ ಮುಂಭಾಗದಲ್ಲಿ ಮಂಗಳವಾರ ರಸ್ತೆ ತಡೆ ಪ್ರತಿಭಟಿಸಿದರು.
ಕಾವೇರಿ ಭಾಗದ ಜಲಾಶಯಗಳಲ್ಲಿ ಕುಡಿಯ ನೀರಿಗೂ ಬರ ಬಂದಿದೆ. ಪ್ರಾಧಿಕಾರದ ಆದೇಶ ಪಾಲನೆ ಮಾಡಲು ಸಾಧ್ಯವಿಲ್ಲ. ನೀರು ಹರಿಸುವುದಿಲ್ಲ ಎಂದು ರಾಜ್ಯದ ರೈತರಿಗೆ ಜನರಿಗೆ ಭರವಸೆ ನೀಡಿದ ರಾಜ್ಯ ಸರ್ಕಾರವು, ಕಾವೇರಿ ನೀರನ್ನು ಮತ್ತೆ ತಮಿಳುನಾಡಿಗೆ 5000 ಕ್ಯುಸಕ್ ನೀರನ್ನು ಬಿಡುತ್ತಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನೀರು ಹರಿಸುವುದನ್ನು ನಿಲ್ಲಿಸಿ
ಈ ವೇಳೆ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಸರ್ಕಾರ ನುಡಿದಂತೆ ನಡೆಯುತ್ತಿಲ್ಲ. ಕದ್ದುಮುಚ್ಚಿ ನೀರು ಬಿಡುತ್ತಿದೆ. ಕಾವೇರಿ ಭಾಗದ ಜನರನ್ನ ಬಲಿ ಕೊಡುತ್ತಿದೆ. ಬೆಂಗಳೂರು, ಮೈಸೂರು ನಗರದ ಜನತೆಗೆ ಕುಡಿಯುವ ನೀರಿಗೂ ಸಮಸ್ಯೆ ತಂದೊಡುತ್ತಿದೆ ಎಂದು ದೂರಿದರು.
ನೀರಾವರಿ ಸಚಿವರು ಬೇಜವಾಬ್ದಾರಿ ನಡವಳಿಕೆ ಸಮಸ್ಯೆಗೆ ಕಾರಣವಾಗಿದೆ. ಕೂಡಲೇ ಸಚಿವ ಸ್ಥಾನ ಬದಲಾಯಿಸಬೇಕು, ಕಾವೇರಿ ನೀರು ನಿರ್ವಹಣಾ ಮಂಡಳಿ ಪ್ರಾಧಿಕಾರದ ಆದೇಶ ಧಿಕ್ಕರಿಸಬೇಕು. ನೀರು ಹರಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.
ಕೂಡಲೇ ಮೈಸೂರು, ಬೆಂಗಳೂರು ನಗರಗಳ ಅಚ್ಚುಕಟ್ಟು ಭಾಗದ ರೈತರು, ಜನಸಾಮಾನ್ಯರು ಜನಪ್ರತಿನಿಧಿಗಳಿಗೆ ಸರಿಯಾದ ಪಾಠ ಕಲಿಸಬೇಕು. ಇಲ್ಲದಿದ್ದರೆ ಎಲ್ಲರೂ ಸೇರಿ ಕುಡಿಯುವ ನೀರಿನ ಮರಣ ಶಾಸನ ಬರೆಯುತ್ತಾರೆ. ತಕ್ಷಣ ಎಲ್ಲಾ ಸಂಘ ಸಂಸ್ಥೆಗಳು ಹೋರಾಟಕ್ಕಿಳಿದು ಸರ್ಕಾರಕ್ಕೆ ಬಿಸಿ ಮುಟಿಸಬೇಕು ಎಂದು ಅವರು ಕರೆ ನೀಡಿದರು.
ರೈತರ ಬಂಧನ- ಬಿಡುಗಡೆ
ರೈತರು ದಿಢೀರನೇ ರಸ್ತೆ ತಡೆದಿದ್ದರಿಂದ ಬಸ್ ನಿಲ್ದಾಣ ಮುಂಭಾಗದ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಈ ವೇಳೆ ರಸ್ತೆ ತಡೆ ತೆರವುಗೊಳಿಸುವಂತೆ ರೈತರನ್ನು ಮನವೊಲಿಸಲು ಪೊಲೀಸರು ಮುಂದಾದರು. ಇದಕ್ಕೆ ರೈತರು ಜಗ್ಗದೆ, ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು. ರೈತರು ಪೊಲೀಸರ ವಿರುದ್ಧ ತಿರುಗಿ ಬಿದ್ದಾಗ ಪ್ರತಿಭಟಿಸುತ್ತಿದ್ದ ರೈತರನ್ನ ಪೊಲೀಸರು ಬಂಧಿಸಿ, ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸಿಎಆರ್ ಮೈದಾನಕ್ಕೆ ಕರೆದೊಯ್ದುರು ನಂತರ ಬಿಡುಗಡೆಗೊಳಿಸಿದರು.
ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಅಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ರಂಗಯ್ಯ, ರೈತ ಮುಖಂಡರಾದ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಬರಡನಪುರ ನಾಗರಾಜ್, ಕುರುಬೂರು ಸಿದ್ದೇಶ್, ಹಾಡ್ಯ ರವಿ, ಕುರುಬೂರು ಪ್ರದೀಪ್, ಹೆಗ್ಗೂರು ರಂಗರಾಜ್, ಅಂಬಳೆ ಮಂಜುನಾಥ್, ಮಾರ್ಬಳ್ಳಿ ನೀಲಕಂಠಪ್ಪ, ಕಾಟೂರು ಮಾದೇವಸ್ವಾಮಿ, ಕೋಟೆ ಸುನಿಲ್, ಸಾತಗಳ್ಳಿ ಬಸವರಾಜ್, ಹಿರೇನಂದಿ ಮಹಾದೇವಪ್ಪ, ಕೆಂಡಗಣ್ಣಸ್ವಾಮಿ, ಮಹೇಶ್, ಚುಂಚುರಾಯನಹುಂಡಿ ಗಿರೀಶ್, ದೇವನೂರು ನಾಗೇಂದ್ರಸ್ವಾಮಿ, ಪಿ. ರಾಜು ಮೊದಲಾದವರು ಇದ್ದರು.