ಶಿವಮೊಗ್ಗ(ಜು.20): ಕೊಪ್ಪಳ ಜಿಲ್ಲೆ ಆನೆಗೊಂದಿಯಲ್ಲಿರುವ ವಿಪ್ರ ಸಮುದಾಯಕ್ಕೆ ಸೇರಿದ ವ್ಯಾಸರಾಜ ವೃಂದಾವನ ಧ್ವಂಸ ಮಾಡಿರುವುದನ್ನು ಖಂಡಿಸಿ ಹಾಗೂ ಘಟನೆಗೆ ಕಾರಣಕರ್ತರಾದವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿ ಶುಕ್ರವಾರ ತಾಲೂಕು ಬ್ರಾಹ್ಮಣ ಸೇವಾ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಪವಿತ್ರ ಕ್ಷೇತ್ರ ಕೊಪ್ಪಳ ಜಿಲ್ಲೆಯ ಆನೆಗೊಂದಿಯಲ್ಲಿ ವಿಪ್ರ ಸಮುದಾಯದ ಮಾಧ್ವ ಪಂಗಡದ ವ್ಯಾಸರಾಜ ವೃಂದಾವನ ಇದೆ. ಕೆಲವು ದುಷ್ಕರ್ಮಿಗಳು ಆ ಸ್ಥಳದಲ್ಲಿ ನಿಧಿ ಇದೆ ಎಂದು ಭಾವಿಸಿ ವೃಂದಾವನವನ್ನು ಹಾಳುಗೆಡವಿದ್ದಾರೆ. ವೃಂದಾವನದ ಕಲ್ಲುಗಳನ್ನು ಕಿತ್ತು ಸ್ಥಳ ಅಗೆಯಲಾಗಿದೆ. ತುಂಗಭದ್ರಾ ನದಿ ದಡದಲ್ಲಿರುವ ಈ ಕ್ಷೇತ್ರ ನವವೃಂದಾವನ ಎಂದು ಪ್ರಸಿದ್ಧಿಯಾಗಿತ್ತು. ಆದರೆ ದುಷ್ಕರ್ಮಿಗಳು ಸ್ಥಳವನ್ನು ಸಂಪೂರ್ಣ ಧ್ವಂಸ ಮಾಡಿದ್ದು, ಘಟನೆಯನ್ನು ತಾಲೂಕು ಬ್ರಾಹ್ಮಣ ಸೇವಾ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಇದು ಕೇವಲ ವಿಪ್ರ ಸಮಾಜಕ್ಕೆ ಮಾತ್ರವಲ್ಲ, ಇಡೀ ಹಿಂದು ಸಮಾಜಕ್ಕೆ ಹಾಗೂ ರಾಜ್ಯಕ್ಕೆ ಮಾಡಿದ ಅವಮಾನವಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಜಿ. ಕೆ. ಮಾಧವ ಮೂರ್ತಿ, ಮಾಜಿ ಶಾಸಕ ಕೆ. ಬಿ. ಪ್ರಸನ್ನಕುಮಾರ್‌, ಪಾಲಿಕೆ ಸದಸ್ಯೆ ಸುರೇಖಾ ಮುರಳೀಧರ್‌, ಎಚ್‌.ಡಿ. ಚಂದ್ರಶೇಖರ್‌, ಮ.ಸ. ನಂಜುಂಡಸ್ವಾಮಿ, ನಾಗರಾಜ್‌, ರವಿಶಂಕರ್‌, ಸುರೇಶ್‌, ವೆಂಕಟೇಶ್‌, ಶ್ರೀಧರ ಮೂರ್ತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು