ಹೊಸನಗರ(ಜು.22): ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಮಂಜುನಾಥಗೌಡರ ಸದಸ್ಯತ್ವ ರದ್ದತಿ ಹಿಂಪಡೆಯುವಂತೆ ಆಗ್ರಹಿಸಿ ತಾಲೂಕಿನ ಸಹಕಾರಿಗಳು ಪ್ರತಿಭಟನೆ ನಡೆಸಿದರು.

ಕಳೆದ 4 ದಶಕಗಳಿಂದ ಸಹಕಾರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಆರ್‌.ಎಂ. ಮಂಜುನಾಥ ಗೌಡ ಅವರ ಸದಸ್ಯತ್ವ ರದ್ದು ಮಾಡಿರುವ ಕ್ರಮ ಖಂಡನೀಯ ಎಂದು ಜಿಲ್ಲಾ ಯೂನಿಯನ್‌ ಅಧ್ಯಕ್ಷ ವಾಟಗೋಡು ಸುರೇಶ ಹೇಳಿದರು.

ಸಹಕಾರಿ ರಂಗದಲ್ಲಿ ರಾಜಕೀಯ ಸಲ್ಲದು. ಆದರೂ ಸಹ ಇದೊಂದು ರಾಜಕೀಯ ಪ್ರೇರಿತ ಹಾಗೂ ಪೋಷಿತ ಕೆಲಸ ಆಗಿದೆ. ಸ್ಥಳೀಯ ಬಿಜೆಪಿ ಮುಖಂಡರ ಮಾತು ಕೇಳಿದ ಸರ್ಕಾರ ಇಂತಹ ಹೀನ ಕೃತ್ಯಕ್ಕ ಕೈಹಾಕಿದೆ ಎಂದು ದೂರಿದರು.

ಕಳೆದ 2 ದಶಕಗಳಿಂದ ಡಿಸಿಸಿ ಬ್ಯಾಂಕ್‌ ಹಾಗೂ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರಾಗಿ ಜಿಲ್ಲೆಯ ಸಹಕಾರಿ ಕ್ಷೇತ್ರವನ್ನು ಉನ್ನತಮಟ್ಟಕ್ಕೆ ಏರಿಸುವ ಕೆಲಸ ಮಾಡಿದ ಮಂಜುನಾಥ ಗೌಡರನ್ನು ರಾಜಕೀಯ ದ್ವೇಶಕ್ಕೆ ಬಲಿಪಶು ಮಾಡಿರುವ ಕ್ರಮ ಸರಿ ಅಲ್ಲ ಎಂದರು.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಪ್ರಭಾರ ಅಧ್ಯಕ್ಷರಾಗಿ ಚನ್ನವೀರಪ್ಪಗೌಡ ಅಧಿಕಾರ ಸ್ವೀಕಾರ

ಅಪೆಕ್ಸ್‌ ಬ್ಯಾಂಕ್‌ ಚುನಾವಣೆ ಹಿನ್ನೆಲೆಯಲ್ಲಿ ಸದಸ್ಯತ್ವ ರದ್ದು ಮಾಡಿರುವುದು ಸರ್ಕಾರಕ್ಕೆ ಶೋಭೆ ತರುವಂತಹದು ಅಲ್ಲ. ಜಿಲ್ಲೆ ಸಮಸ್ತ ರೈತರ ಹಾಗೂ ಸಹಕಾರಿಗಳ ಪರವಾಗಿ ಸರ್ಕಾರದ ಅಧೀನ ಅಧಿ​ಕಾರಿಗಳ ಆದೇಶವನ್ನು ಮುಖ್ಯಮಂತ್ರಿಗಳು ಹಿಂಪಡೆಯಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾದ ಪ್ರಸಂಗ ಬರಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಹಕಾರಿ ಧುರೀಣರಾದ ಗುರುಶಕ್ತಿ ವಿದ್ಯಾಧರ್‌, ಹಾಲಗದ್ದೆ ಉಮೇಶ, ದುಮ್ಮಾ ವಿನಯ್‌ಕುಮಾರ್‌, ಚಕ್ಕಾರು ವಿನಾಯಕ, ಮಾಸ್ತಿಕಟ್ಟೆರಾಘವೇಂದ್ರ, ಮನು ಮತ್ತಿತರರು ಇದ್ದರು.