ಉಡುಪಿ(ಮೇ 27): ಈಗಾಗಲೇ ಕೇಂದ್ರ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ಆದೇಶ ಹೊರಡಿಸಿದ್ದ 61 ದಿನಗಳ ಮಾನ್ಸೂನ್‌ ಸಮುದ್ರ ಮೀನುಗಾರಿಕೆ ನಿಷೇಧವನ್ನು 47 ದಿನಗಳಿಗೆ ಇಳಿಸಲಾಗಿದೆ.

ಈ ಹಿಂದೆ ದೇಶದ ಪಶ್ಚಿಮ ಕರಾವಳಿ ರಾಜ್ಯಗಳಲ್ಲಿ ಜೂ.1ರಿಂದ ಜು.31ರವರೆಗೆ ಮಳೆಗಾಲದ 2 ತಿಂಗಳು ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಯನ್ನು ನಿಷೇಧಿಸಿ ಕೇಂದ್ರ ಸರ್ಕಾರ ಏಕರೂಪದ ಆದೇಶವನ್ನು ಹೊರಡಿಸಿತ್ತು.

ವಿದ್ಯಾರ್ಥಿನಿಯ ಕವನ ಪುಸ್ತಕಕ್ಕೆ ಅಭಿ​ನಂದನಾ ಪತ್ರ ಬರೆದ ಶಿಕ್ಷಣ ಸಚಿವ

ಆದರೆ ಈ ಬಾರಿ ಈಗಾಗಲೇ ಲಾಕ್‌ಡೌನ್‌ನಿಂದ ಮೀನುಗಾರರಿಗೆ ಅನೇಕ ದಿನಗಳ ಮೀನುಗಾರಿಕೆ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರ ವಿವಿಧ ಸಂಘಟನೆಗಳ ಮನವಿಯಂತೆ ಈ ನಿಷೇಧವನ್ನು 15 ದಿನಗಳ ಕಾಲ ಕಡಿತಗೊಳಿಸಲಾಗಿದೆ. ಆದ್ದರಿಂದ ಈ ವರ್ಷ ಮೀನುಗಾರಿಕೆ ನಿಷೇಧ ಜೂ.15ರಿಂದ ಜುಲೈ 31ರ ವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಕೇಂದ್ರ ಸರ್ಕಾರದ ಹೊಸ ಆದೇಶದಲ್ಲಿ ತಿಳಿಸಲಾಗಿದೆ.

ಆದ್ದರಿಂದ ಕರ್ನಾಟಕ ಕರಾವಳಿಯ ಮೀನುಗಾರರು ಜೂ. 15ರವರೆಗೆ ಮೀನುಗಾರಿಕೆ ನಡೆಸಬಹುದು ಎಂದು ರಾಜ್ಯ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಮಳೆಗಾಲದಲ್ಲಿ ಮೀನುಗಳು ಮೊಟ್ಟೆಇಟ್ಟು ಸಂತಾನೋತ್ಪತ್ತಿ ಮಾಡುವ ಕಾಲವಾಗಿರುತ್ತದೆ.

ಗುಜರಾತಿಂದ ಬಿಹಾರಕ್ಕೆ ಹೊರಟಿದ್ದ ಶ್ರಮಿಕ್‌ ರೈಲು ತಲುಪಿದ್ದು ಬೆಂಗಳೂರಿಗೆ!

ಆದ್ದರಿಂದ ಮೀನು ಸಂಪತ್ತನ್ನು ರಕ್ಷಿಸುವುದಕ್ಕಾಗಿ ಮತ್ತು ಮಳೆಗಾಲದಲ್ಲಿ ಮೀನುಗಾರರ ರಕ್ಷಣೆಗಾಗಿ ಈ ನಿಷೇಧವನ್ನು ಹೇರಲಾಗುತ್ತದೆ. ಆದರೆ ಈ ನಿಷೇಧದ ಅವಧಿಯಲ್ಲಿ ಯಾಂತ್ರೀಕೃತವಲ್ಲದ, ಸಾಂಪ್ರದಾಯಿಕ ದೋಣಿಗಳಿಂದ ಮೀನು ಹಿಡಿಯುವುದಕ್ಕೆ ಅವಕಾಶ ಇದೆ.