ಕೊಟ್ಟೂರು(ಜ.19): ಫೆ. 18ರಂದು ನಡೆಯಲಿರುವ ಕೊಟ್ಟೂರು ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ಭವ್ಯ ರಥೋತ್ಸವಕ್ಕೆ ಭಕ್ತರು ಬಾಳೆಹಣ್ಣು ಮತ್ತು ಉತ್ತತ್ತಿಗಳನ್ನು ತೂರದಂತೆ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಲಿದ್ದು, ಸಮಸ್ತ ಭಕ್ತರು ಈ ಆದೇಶದಂತೆ ನಡೆದುಕೊಂಡು ರಥೋತ್ಸವದ ಯಶಸ್ಸಿಗೆ ಸಹಕರಿಸಬೇಕು ಎಂದು ಶಾಸಕ ಎಸ್‌. ಭೀಮಾನಾಯ್ಕ ಹೇಳಿದರು.

ಇಲ್ಲಿನ ಕೊಟ್ಟೂರೇಶ್ವರ ದೇವಸ್ಥಾನದ ಬಳಿ ಇರುವ ಕಲ್ಯಾಣ ಮಂಟಪದಲ್ಲಿ ಹಿಂದು ಧಾರ್ಮಿಕ ದತ್ತಿ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ಸ್ವಾಮಿಯ ವಾರ್ಷಿಕ ರಥೋತ್ಸವ ಮತ್ತು ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ನೇತೃತ್ವವಹಿಸಿ ಅವರು ಮಾತನಾಡಿದರು. ಕಳೆದ ಎರಡು ವರ್ಷದಿಂದ ಭಕ್ತರು ರಥಕ್ಕೆ ಬಾಳೆಹಣ್ಣು ಎಸೆಯುವುದನ್ನು ನಿಷೇಧಿಸಲಾಗಿದೆ. ಆದರೂ ಕೆಲವರು ಬಾಳೆಹಣ್ಣು ಮತ್ತು ಉತ್ತತ್ತಿಗಳನ್ನು ಎಸೆಯುವ ಪ್ರಯತ್ನ ಮಾಡುತ್ತಾರೆ. ರಥ ಸುಗಮವಾಗಿ ಸಾಗಲು ಸನ್ನೆ ಹಾಕುವ ಸಿಬ್ಬಂದಿ ಮತ್ತು ಜನತೆಗೆ ಯಾವುದೇ ರೀತಿಯ ಅಪಾಯ ತಗುಲಬಾರದೆಂಬ ಕಾರಣಕ್ಕಾಗಿ ಈ ಆದೇಶವನ್ನು ತರಲು ತೀರ್ಮಾನಿಸಲಾಗಿದೆ. ಇದನ್ನು ಈ ಬಾರಿ ಮತ್ತಷ್ಟು ಬಗೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸ್‌ ಆಡಳಿತಕ್ಕೆ ಸೂಚಿಸಲಾಗಿದ್ದು ಭಕ್ತರು ಸಹಕರಿಸಬೇಕು ಎಂದು ಕೋರಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಥೋತ್ಸವಕ್ಕೆ 4 ರಿಂದ 5 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಉತ್ತರ ಕರ್ನಾಟಕ ಭಾಗದಲ್ಲೇ ಎರಡನೇ ದೊಡ್ಡ ರಥೋತ್ಸವ ಇದಾಗಿದ್ದು, ಆಗಮಿಸುವ ಭಕ್ತರಿಗೆ ಎಲ್ಲ ಬಗೆಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಅಧಿಕಾರಿಗಳು ಈಗಿನಿಂದಲೇ ಸಿದ್ಧತೆ ಕೈಗೊಳ್ಳಬೇಕು ಎಂದು ಸೂಚಿಸಿದರು.

ನೈರ್ಮಲೀಕರಣ, ಸ್ವಚ್ಛತಾ ಕಾರ್ಯ ಕೈಗೊಳ್ಳುವುದು, ರಸ್ತೆಗೆ ನೀರನ್ನು ಸಿಂಪಡಿಸಿ ಧೂಳು ಏಳದಂತೆ ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಅಗತ್ಯ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿಕೊಳ್ಳವಂತೆ ಮುಖ್ಯಾಧಿಕಾರಿ ಎಚ್‌.ಎಫ್‌. ಬಿದರಿಗೆ ಹೇಳಿದರು.

ತ್ಯಾಜ್ಯ ಸಾಗಿಸಲು ಮತ್ತು ಪಟ್ಟಣದಲ್ಲಿನ ಎಲ್ಲ 20 ವಾರ್ಡ್‌ಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಆಡಳಿತ ಸದಾ ತೊಡಗಿಸಿಕೊಳ್ಳಬೇಕು. ಕುಡಿಯುವ ನೀರಿಗೆ ಯಾವುದೇ ತೊಂದರೆ ಉಂಟಾಗದಂತೆ ಗಮನಹರಿಸಬೇಕು. ಟ್ಯಾಂಕರ್‌ ಮೂಲಕ ನೀರು ವಿತರಿಸಲು, ಸಿಂಪಡಿಸಲು, ಎಲ್ಲ ರೀತಿ ಸಿದ್ಧತೆ ಮಾಡಿಕೊಳ್ಳಿ ಎಂದು ಹೇಳಿದರು.

ಜಾತ್ರೆ ನಿಮಿತ್ತ ವಿದ್ಯುತ್‌ ವ್ಯತ್ಯಯ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು. ಫೆ. 14ರಿಂದ 23ರ ವರೆಗೆ ಪಟ್ಟಣದಲ್ಲಿ ನಿರಂತರ ವಿದ್ಯುತ್‌ ಸರಬರಾಜು ಪೂರೈಕೆಯಾಗುವುದಂತೆ ಈಗಾಗಲೇ ಸಿದ್ಧತೆ ಕೈಗೊಂಡಿದ್ದೇವೆ. ಟ್ರಾನ್ಸ್‌ಫಾಮ್‌ರ್‍ರ್‌ಗಳ ತೊಂದರೆ ಉಂಟಾದರೆ ಪರ್ಯಾಯ ವ್ಯವಸ್ಥೆ ಮಾಡಲು ಕ್ರಮ ಕೈಗೊಂಡಿದ್ದೇವೆ ಎಂದು ಜೆಸ್ಕಾಂ ಎಇಇ ರಾಜೇಶ್‌ ಸಭೆಗೆ ವಿವರಿಸಿದರು.

ದಾವಣಗೆರೆ, ಹೊಸಪೇಟೆ, ಹರಿಹರ, ಹರಪನಹಳ್ಳಿ, ಕೂಡ್ಲಿಗಿ, ಹಾವೇರಿ, ಸಾರಿಗೆ ಡಿಪೋಗಳಿಂದ ಹೆಚ್ಚಿನ ಬಸ್‌ಗಳನ್ನು ಭಕ್ತಾದಿಗಳ ಅನುಕೂಲಕ್ಕಾಗಿ ಓಡಾಡಿಸಲು ಕ್ರಮ ಕೈಗೊಳ್ಳಲಾಗಿದೆ. ತಾತ್ಕಾಲಿಕ ಬಸ್‌ ನಿಲ್ದಾಣವನ್ನು ಎಪಿಎಂಸಿ ಆವರಣದಲ್ಲಿ ತೆರೆಯಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ತಿಳಿಸಿದರು.

ಸರ್ಕಲ್‌ ಇನ್‌ಸ್ಪೆಕ್ಟರ್‌ ರವೀಂದ್ರ ಎಂ. ಕುರಬಗಟ್ಟಿಮಾತನಾಡಿ, ಜಾತ್ರಾ ಮಹೋತ್ಸವ ಕಾಲಕ್ಕೆ ಯಾವುದೇ ಕಾಲ್ತುಳಿತ ಆಗದಂತೆ ಜನರನ್ನು ನಿಭಾಯಿಸಲಾಗುವುದು. ನೂಕುನುಗ್ಗಲು ಉಂಟಾಗದಂತೆ ಹೆಚ್ಚುವರಿ ಬಂದೋಬಸ್ತ್‌ ಸೇವೆಯನ್ನು ನಿಯೋಜಿಸಲಾಗುವುದು ಎಂದರು.

ಕ್ರಿಯಾಮೂರ್ತಿ ಶ್ರೀ ಶಂಕರಸ್ವಾಮೀಜಿ, ಜಿಪಂ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ, ಧರ್ಮಕರ್ತ ಸಿ. ಎಚ್‌. ಎಂ. ಗಂಗಾಧರ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಪಿ.ಎನ್‌. ಲೋಕೇಶ್‌, ತಹಸೀಲ್ದಾರ್‌ ಜಿ. ಅನಿಲ್‌ಕುಮಾರ್‌, ಸಬ್‌ ಇನ್‌ಸ್ಪೆಕ್ಟರ್‌ ಎ. ಕಾಳಿಂಗ, ಪಿಡಬ್ಲ್ಯೂಡಿ ಎಇಇ ಮಾರ್ಗದಪ್ಪ, ಎ.ಇ. ಸೋಮಣ್ಣ, ತಾಲೂಕು ವೈದ್ಯಾಧಿಕಾರಿ ಡಾ. ಷಣ್ಮಖನಾಯ್ಕ, ಎಪಿಎಂಸಿ ಅಧ್ಯಕ್ಷ ಬೂದಿ ಶಿವಕುಮಾರ, ಸದಸ್ಯ ವಿನಯ ಹೊಸಮನಿ, ಮುಖಂಡರಾದ ಬೇಲಿಗೌಡ್ರು ಸೋಮಶೇಖರಗೌಡ, ಪಪಂ ಸದಸ್ಯರಾದ ವಿನಯ ಹೊಸಮನಿ, ಮರಬದ ಕೊಟ್ರೇಶ್‌, ಶಫಿ, ತೋಟದ ರಾಮಣ್ಣ, ಜಗದೀಶ್‌, ಮರಬದ ನಾಗರಾಜ, ಮೇಘರಾಜ್‌, ಹಂಪಜ್ಜರ ಪ್ರಕಾಶ್‌, ಕೂಡ್ಲಿಗಿ ಕೊಟ್ರೇಶ್‌ ಮತ್ತಿತರರು ಪಾಲ್ಗೊಂಡಿದ್ದರು.