ರಾಷ್ಟ್ರಕ್ಕೆ ಧ್ವಜ ಮಾಡುವ ಕೈಗಳಲ್ಲಿ ದುಡ್ಡಿಲ್ಲ: ಕೊಡಲು ಸರ್ಕಾರಕ್ಕೆ ಪುರುಸೊತ್ತಿಲ್ಲ!
ರಾಷ್ಟ್ರಧ್ವಜ ಬಟ್ಟೆ ತಯಾರಿಸುವ ನೇಕಾರರಿಗೆ ಇಲ್ಲ ಸಮರ್ಪಕ ಕೂಲಿ| ರಾಷ್ಟ್ರೀಯ ದಿನಗಳಲ್ಲಿ ಮಾತ್ರ ನೆನಪಾಗುವ ನೇಕಾರರು| ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮದಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರ| ದಿನವಿಡೀ ದುಡಿದರೂ ಸಿಗದ ಸೂಕ್ತ ಕೂಲಿ| ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿರುವ ನೇಕಾರರ ಗೋಳು ಕೇಳೋರಿಲ್ಲ|
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ಆ.16): ಅವರೆಲ್ಲಾ ರಾಷ್ಟ್ರದ ಹೆಮ್ಮೆಯ ಪ್ರತೀಕವಾಗಿರುವ ರಾಷ್ಟ್ರಧ್ವಜದ ಬಟ್ಟೆಯನ್ನು ತಯಾರಿಸುವ ನೇಕಾರರು. ಅವರು ಅಭಿಮಾನದಿಂದ ಮಾಡುವ ಕೆಲಸಕ್ಕೆ ಇಂದಿಗೂ ಸಮರ್ಪಕ ಕೂಲಿ ಸಿಗುತ್ತಿಲ್ಲ.
ಕಳೆದ 15 ವರ್ಷಗಳಿಂದ ಖಾದಿ ಕೇಂದ್ರದಲ್ಲಿ ರಾಷ್ಟ್ರಧ್ವಜದ ಬಟ್ಟೆ ನೇಯುತ್ತಲೇ ಬದುಕು ಸಾಗಿಸುತ್ತಿರುವ ಇವರ ಬದುಕು ಅತ್ಯಂತ ಬವಣೆಯಿಂದ ಕೂಡಿದೆ. ಅದರಂತೆ ಮತ್ತೊಂದು ಸ್ವಾತಂತ್ರ್ಯ ದಿನಾಚರಣೆ ಮುಗಿದಿದ್ದು, ಇಲ್ಲಿನ ನೇಕಾರರ ಗೋಳು ಮಾತ್ರ ಇನ್ನೂ ಅಂತ್ಯ ಕಂಡಿಲ್ಲ.
"
ಹೀಗೆ ಬೆಳಗಿನಿಂದ ಸಂಜೆವರೆಗೂ ಮೈ ಮುರಿದು ದುಡಿದು ರಾಷ್ಟ್ರಧ್ವಜದ ಬಟ್ಟೆ ತಯಾರಿಸುವ ನೇಕಾರ ಮಹಿಳೆಯರು ಕಂಡು ಬರುವುದು ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮೋದ್ಯೋಗ ಕೇಂದ್ರದಲ್ಲಿ. ಈ ಕೇಂದ್ರ ಸ್ಥಾಪನೆಯಾಗಿದ್ದು 1981ರಲ್ಲಿ.
ಇಲ್ಲಿ ಕಳೆದ 15 ವರ್ಷಗಳಿಂದ ರಾಷ್ಟ್ರಧ್ವಜದ ಬಟ್ಟೆಯನ್ನು ತಯಾರಿಸಲಾಗುತ್ತಿದೆ. ಇಲ್ಲಿ ತಯಾರಾಗುವ ರಾಷ್ಟ್ರಧ್ವಜವನ್ನು ಹುಬ್ಬಳ್ಳಿ ಕೇಂದ್ರಕ್ಕೆ ರವಾನಿಸಲಾಗುತ್ತದೆ.
ಹೀಗಿರುವಾಗ ಇಲ್ಲಿ ಕೆಲಸ ಮಾಡುವ ನೇಕಾರರಿಗೆ ಮಾತ್ರ ದುಡಿತಕ್ಕೆ ತಕ್ಕಂತೆ ಸಮರ್ಪಕ ಕೂಲಿ ಮಾತ್ರ ಸಿಗ್ತಿಲ್ಲ. 1 ಮೀಟರ್ ಬಟ್ಟೆ ನೇಯ್ದರೆ 20 ರಿಂದ 25 ರೂ. ಸಿಗುತ್ತದೆ.
ಹೀಗೆ ದಿನವಿಡೀ ದುಡಿದರೂ ಇವರಿಗೆ ಸಮರ್ಪಕ ಕೂಲಿ ಸಿಗುವುದಿಲ್ಲ. ಇದರಿಂದ ಇಲ್ಲಿಗೆ ರಾಷ್ಟ್ರಧ್ವಜದ ಬಟ್ಟೆ ತಯಾರಿಸೋಕೆ ಬರುವ ನೇಕಾರರು, ಸೂಕ್ತ ಕೂಲಿ ಸಿಗದೇ ಅತಂತ್ರ ಪರಿಸ್ಥಿತಿ ಎದುರಿಸುವಂತಾಗಿದೆ.
"
ದಿನಕ್ಕೆ 1OO ರೂ. ದುಡಿಯಬೇಕಾದರೂ ಶೋಚನೀಯ ಪರಿಸ್ಥಿತಿ ಇಲ್ಲಿದೆ. ಹೀಗಾಗಿ ಸರ್ಕಾರ ರಾಷ್ಟ್ರಧ್ವಜದ ಬಟ್ಟೆ ತಯಾರಿಸುವ ನಮ್ಮಂತಹ ನೇಕಾರರ ಗೋಳು ಕೇಳಿ ಕೂಲಿ ಹೆಚ್ಚಿಸುವಂತಾಗಲಿ ಅಂತಾರೆ ಇಲ್ಲಿನ ನೇಕಾರ ಮಹಿಳೆಯರು.
ಇಂದಿನ ದಿನಗಳಲ್ಲಿ ಬೇರೆ ಬೇರೆ ಕೂಲಿಗಳಿಗೆ ಹೋಲಿಸಿಕೊಂಡರೆ ರಾಷ್ಟ್ರಧ್ವಜ ಬಟ್ಟೆ ತಯಾರಿಸುವ ನೇಕಾರರಿಗೆ ಕೊಡುವ ಕೂಲಿ ಮಾತ್ರ ಕಡಿಮೆ. ಬೇರೆ ಕಡೆಗೆ ಹೋದರೆ ಇದಕ್ಕಿಂತಲೂ ಹೆಚ್ಚಿನ ಕೂಲಿ ಸಿಗುತ್ತದೆ. ಆದರೆ ರಾಷ್ಟ್ರಧ್ವಜದ ಬಟ್ಟೆ ತಯಾರಿಸುವ ಅಭಿಮಾನಕ್ಕೆ ಕಟುಬಿದ್ದಿರುವ ಇಲ್ಲಿನ ನೇಕಾರರು ಮಾತ್ರ ಅಭಿಮಾನಕ್ಕಾಗಿ ಇಂದಿಗೂ ಇದೇ ಕೆಲಸ ಮಾಡುತ್ತಾರೆ.
ಹೀಗಾಗಿ ಕಡಿಮೆ ಕೂಲಿ ಪಡೆದು ರಾಷ್ಟ್ರಧ್ವಜದ ಬಟ್ಟೆ ತಯಾರಿಕೆಯಲ್ಲಿ ಅತ್ಯಂತ ಸ್ವಾಭಿಮಾನದ ಬದುಕನ್ನು ಇಲ್ಲಿನ ನೇಕಾರರು ನಡೆಸುತ್ತಿದ್ದಾರೆ. ಇಲ್ಲಿರೋ ನೇಕಾರರಿಗೆ ಕೂಲಿ ಹೆಚ್ಚಿಗೆ ಮಾಡಬೇಕು ಮತ್ತು ವಯಸ್ಸಾದ ಬಳಿಕ ಹಲವಾರು ವರ್ಷ ದುಡಿದವರಿಗೆ ನಿವೃತ್ತಿ ವೇತನವೊಂದನ್ನು ಕೊಡುವಂತಾಗಬೇಕು. ಹೀಗಾಗಿ ಸರ್ಕಾರ ನಮ್ಮಂತಹ ಬಡನೇಕಾರರ ಪ್ರೋತ್ಸಾಹಕ್ಕೆ ನಿಲ್ಲಬೇಕು ಅಂತಾರೆ ನೇಕಾರರು.
"
ಒಟ್ಟಿನಲ್ಲಿ ರಾಷ್ಟ್ರಧ್ವಜದ ಬಟ್ಟೆ ತಯಾರಿಸೋ ಕಾಯಕದಲ್ಲಿ ನಿರತರಾಗಿರೋ ತುಳಸಿಗೇರಿ ಖಾದಿ ಗ್ರಾಮೋದ್ಯೋಗದ ನೇಕಾರರು ಅಭಿಮಾನದ ಮೂಲಕ ಕಡಿಮೆ ಕೂಲಿ ಪಡೆದು ಕುಟುಂಬ ನಿರ್ವಹಣೆ ಮಾಡುತ್ತಿದ್ದು, ಇನ್ನಾದರೂ ಸರ್ಕಾರ ಎಚ್ಚೆತ್ತು ಕೂಲಿ ಹೆಚ್ಚಿಸುವ ನಿರ್ಣಯ ಕೈಗೊಳ್ಳಲಿದೆಯೇ ಕಾದು ನೋಡಬೇಕಿದೆ.