ಬೆಳಗಾವಿ ಮಹಾನಗರ ಪಾಲಿಕೆಯ ಕನ್ನಡದ ಪ್ರಥಮ ಮೇಯರ್ ಆಗಿದ್ದ ಸಿದ್ದನಗೌಡ ಪಾಟೀಲ ಇನ್ನಿಲ್ಲ
ಕನ್ನಡದ ಕಟ್ಟಾಳು ಸಿದ್ದನಗೌಡ ಪಾಟೀಲ ನಿಧನ| ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಇಹಲೋಕ ತ್ಯಜಿಸಿದ ಸಿದ್ದನಗೌಡ ಪಾಟೀಲ| ಪಾಟೀಲರಿಗೆ ಕರ್ನಾಟಕ ಸರಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ|
ಬೆಳಗಾವಿ(ಆ.26): ಕನ್ನಡದ ಕಟ್ಟಾಳು,ಬೆಳಗಾವಿ ಮಹಾನಗರ ಪಾಲಿಕೆಯ ಕನ್ನಡದ ಮೊದಲ ಮೇಯರ್ ಆಗಿದ್ದ ಸಿದ್ದನಗೌಡ ಪಾಟೀಲ ಇಂದು(ಬುಧವಾರ) ನಿಧನರಾಗಿದ್ದಾರೆ. 92 ವರ್ಷದ ಸಿದ್ದನಗೌಡ ಪಾಟೀಲ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಾಪುರ ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿದ್ದರು.
ಸಿದ್ದನಗೌಡ ಪಾಟೀಲ ಅವರು ಸುಮಾರು ಐದು ದಶಕಗಳ ಕನ್ನಡ ಪರ ಹೋರಾಟ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ. ಕನ್ನಡದ ಗಟ್ಟಿ ಧ್ವನಿಯಾಗಿ ಗಡಿ ಭಾಗದ ಬೆಳಗಾವಿ ನೆಲದಲ್ಲಿ ಕನ್ನಡದ ಹುಂಬನಾಗಿ ಕನ್ನಡ ವಿರೋಧಿಗಳಿಗೆ ನುಂಗಲಾರದ ತುತ್ತಾಗಿದ್ದ ಸಿದ್ದನಗೌಡರು, ಬೆಳಗಾವಿ ಮಹಾನಗರ ಪಾಲಿಕೆಯ ಮರಾಠಿಮಯ ಕಪ್ಪು ಚುಕ್ಕೆಯನ್ನು ಅಳಿಸಿ ಹಾಕಿದ ಕನ್ನಡದ ಪ್ರಥಮ ಮೇಯರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದವರು.
ಬೆಳಗಾವಿಯ ಕನ್ನಡ, ಹೋರಾಟ ಎನ್ನುವ ಪದದೊಡನೆ ತಮ್ಮನ್ನು ಬೆಸೆದುಕೊಂಡಿದ್ದ ಸಿದ್ದನಗೌಡ ಪಾಟೀಲ, ಗಡಿ ಕನ್ನಡದ ಕೊಂಡಿಯಾಗಿ ತಮ್ಮ ಕೊನೆಯುಸಿರು ಇರುವವರೆಗೂ ಕನ್ನಡತನ ಮೆರೆದವರು. ಇವರಿಗೆ ಕರ್ನಾಟಕ ಸರಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಅನೇಕ ಪ್ರತಿಷ್ಠಿತ ಸಂಸ್ಥೆಗಳು ಇವರನ್ನು ಅರಸಿ ಬಂದಿವೆ.
ಶೀಘ್ರ ಕರ್ನಾಟಕ ಸಾರಿಗೆ ಇಲಾಖೆಯಿಂದ ಮತ್ತೊಂದು ಸೇವೆ
ಕೇವಲ ಕನ್ನಡ ಹೋರಾಟವಷ್ಟೇ ಆಗಿರದೆ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ವ್ಯವಹಾರಿಕವಾಗಿ ಗಡಿಯಲ್ಲಿ ಕನ್ನಡವನ್ನು ಗಟ್ಟಿಗೊಳಿಸಿ, ಬೆಳೆಸಿದ ಇವರು, ಸಹಕಾರಿ ಕ್ಷೇತ್ರದಲ್ಲಿಯೂ ಸಾಕಷ್ಟು ಸೇವೆಯನ್ನ ಸಲ್ಲಿಸಿದ್ದಾರೆ. ಬೆಳಗಾವಿ ಆಗುಹೋಗುಗಳ ಮೇಲೆ ಸದಾ ನಿಗಾ ವಹಿಸಿ ಕನ್ನಡಿಗರನ್ನು ಬಡಿದೆಬ್ಬಿಸಿ ಕನ್ನಡದ ಹಿತ ಕಾಯುತ್ತಿದ್ದ ಇವರ ಕನ್ನಡದ ಕೆಚ್ಚೆದೆಯನ್ನು ಎಂಥವರೂ ಮೆಚ್ಚಲೇ ಬೇಕು.
ಸಿದ್ದನಗೌಡ ಪಾಟೀಲರ ಅಂತ್ಯಕ್ರಿಯೆ ಅವರ ಸ್ವಗಾಮ ಮಲ್ಲಾಪುರದಲ್ಲಿ ಇಂದು(ಬುಧವಾರ) ಸಾಯಂಕಾಲ ನೆರವೇರಲಿದೆ ಎಂದು ತಿಳಿದು ಬಂದಿದೆ. ಇವರ ಕನ್ನಡದಾತ್ಮಕ್ಕೆ ಸಂಗನ ಬಸವರು ಚಿರಶಾಂತಿ ನೀಡಲಿ. "ಸಿದ್ದನಗೌಡರೇ ಮತ್ತೊಮ್ಮೆ ಹುಟ್ಟಿ ಬನ್ನಿ" ಎನ್ನುವ ವ್ಯಕ್ತಿತ್ವ ಇವರದ್ದಾಗಿತ್ತು.