ಬೆಂಗಳೂರು(ಫೆ.22): ಉತ್ತಮವಾಗಿ ಕಾರ್ಯ ನಿರ್ವಹಿಸದೆ ಇರುವ ಸಾರ್ವಜನಿಕ ಸಂಸ್ಥೆಗಳನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ದೇಶದ ಅಭಿವೃದ್ಧಿ ಸಾಧಿಸಲು ಖಾಸಗೀಕರಣ ಅನಿವಾರ್ಯ ಎಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರತಿಪಾದಿಸಿದ್ದಾರೆ.

ಭಾನುವಾರ ನಗರದ ಪಂಚತಾರಾ ಹೋಟೆಲ್‌ವೊಂದರಲ್ಲಿ ಬಿಜೆಪಿ ಆರ್ಥಿಕ ಪ್ರಕೋಷ್ಠ ಏರ್ಪಡಿಸಿದ್ದ ‘ಆರ್ಥಿಕ ಅವಲೋಕನ; ಆತ್ಮವಿಶ್ವಾಸದ ಭಾರತಕ್ಕಾಗಿ ಆತ್ಮನಿರ್ಭರ ಬಜೆಟ್‌’ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆದಾರರ ಮೇಲೆ ನಂಬಿಕೆ ಇಡುವ ಮತ್ತು ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಚಿಂತನೆಯಡಿ ದೇಶದ ಅಭಿವೃದ್ಧಿಗೆ ಬದ್ಧತೆ ತೋರುವ ಸರಕಾರ ನಮ್ಮದು. ಉದ್ಯೋಗ ಹೆಚ್ಚಿಸುವ ಮೂಲಸೌಕರ್ಯಕ್ಕೆ ಆದ್ಯತೆ ನೀಡಿ ಸುಸ್ಥಿರ ಪ್ರಗತಿ ನಮ್ಮದಾಗಿಸಲು ಸರಕಾರ ಮುಂದಾಗಿದೆ ಎಂದು ಹೇಳಿದರು.

ಪೆಟ್ರೋಲ್‌ ಬೆಲೆ ಇಳಿಕೆ : ಸಚಿವೆ ನಿರ್ಮಲಾ ಪ್ರಸ್ತಾಪ

ಬಡವರಿಗೆ ತಲುಪುವಂಥ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕೆಲಸವನ್ನು ಜನಪ್ರಿಯ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಮಾಡಿದೆ. ಉಜ್ವಲ, ಉಜಾಲಾ, ಸ್ವನಿಧಿ, ಮುದ್ರಾ, ಜನೌಷಧಿ, ಕಿಸಾನ್‌ ಸಮ್ಮಾನ್‌ನಂಥ ಯೋಜನೆಗಳ ಮೂಲಕ ಕೇಂದ್ರದ ಬಿಜೆಪಿ ಸರಕಾರವು ಬಡವರ ಸಮಸ್ಯೆಗಳನ್ನು ನಿವಾರಿಸಲು ಆದ್ಯತೆ ಕೊಟ್ಟಿದೆ ಎಂದು ವಿವರಿಸಿದರು.

ಹಿಂದೆ ಭಾರತವೆಂದರೆ ಮೂಲಸೌಕರ್ಯಗಳ ಕೊರತೆ ಇರುವ ದೇಶ ಎಂಬ ಚಿಂತನೆ ಸಹಜವಾಗಿತ್ತು. ಆದರೆ, ಈಗ ಬದಲಾಗಿದೆ. ದೀನ್‌ ದಯಾಳ ಉಪಾಧ್ಯಾಯರ ಅಂತ್ಯೋದಯ ಚಿಂತನೆಗಳೊಂದಿಗೆ ಅದನ್ನು ತೊಡೆದುಹಾಕಲು ಕೇಂದ್ರ ಸರಕಾರವು ಶ್ರಮಿಸುತ್ತಿದೆ. ಲೈಸಸ್ಸ್‌ ರಾಜ್‌ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದೆ. ಅಟಲ್‌ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರಕಾರವು ಸುಸ್ಥಿರ ಆಡಳಿತ ನೀಡಲು ಶ್ರಮಿಸಿತು. ಈಗಿನ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರವು ಉಜ್ವಲ ಯೋಜನೆಯಡಿ ಈಗಾಗಲೇ ಎಂಟು ಕೋಟಿ ಬಡವರಿಗೆ ಉಚಿತ ಗ್ಯಾಸ್‌ ಸಿಲಿಂಡರ್‌ ಸಂಪರ್ಕ ನೀಡಿದ್ದು, ಈ ಬಾರಿಯ ಬಜೆಟ್‌ನಲ್ಲಿ ಮತ್ತೆ ಒಂದು ಕೋಟಿ ಅರ್ಹ ಬಡವರಿಗೆ ಉಚಿತ ಸಿಲಿಂಡರ್‌ ಸಂಪರ್ಕ ನೀಡಲು ಮುಂದಾಗಿದೆ ಎಂದರು.

ಕೊರೋನಾಗೂ ಎದೆಗುಂದದೆ ಆರ್ಥಿಕ ಪ್ರಗತಿಗೆ ಕೇಂದ್ರದ ಒತ್ತು!

1969ರಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣ ನಡೆದರೂ ಬಡವರಿಗೆ ಅದರಿಂದ ವಿಶೇಷ ಪ್ರಯೋಜನ ಲಭಿಸಿರಲಿಲ್ಲ. ಆಧಾರ್‌ ಸಂಖ್ಯೆಯನ್ನು ಮೊಬೈಲ್‌ಗೆ ಸಂಪರ್ಕಿಸಿ ಜನಧನ್‌ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದರಿಂದ ನಿಜವಾದ ಬಡವರಿಗೆ ಈ ಯೋಜನೆಯ ಪ್ರಯೋಜನ ಲಭಿಸುತ್ತಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಆರ್ಥಿಕ ಪ್ರಕೋಷ್ಠದ ಸಂಚಾಲಕರಾದ ಸಮೀರ್‌ ಕಾಗಲ್ಕರ್‌, ಪ್ರಕೋಷ್ಠದ ಸಲಹೆಗಾರರಾದ ವಿಶ್ವನಾಥ ಭಟ್‌, ಸಹ ಸಂಚಾಲಕ ಕರಣ್‌ ಜವಾಜೆ ಮತ್ತಿತರರು ಭಾಗವಹಿಸಿದ್ದರು.