ಬೆಂಗಳೂರು(ಏ.17): ನಗರದಲ್ಲಿ ಹತ್ತು ಖಾಸಗಿ ಹೋಟೆಲ್‌ಗಳನ್ನು ತಾತ್ಕಾಲಿಕ ಆಸ್ಪತ್ರೆಗಳನ್ನಾಗಿ ಪರಿವರ್ತಿಸಿ 3 ಸಾವಿರ ಹಾಸಿಗೆಗಳನ್ನು ಕೋವಿಡ್‌ ರೋಗಿಗಳಿಗೆ ಮೀಸಲಿಡಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ಆಸ್ಪತ್ರೆಗಳು ಈ ತಾತ್ಕಾಲಿಕ ಆಸ್ಪತ್ರೆಗಳ ನಿರ್ವಹಣೆ ಮಾಡಬೇಕಿದೆ. ಮೂರು ತಿಂಗಳ ಕಾಲ ಈ ತಾತ್ಕಾಲಿಕ ಆಸ್ಪತ್ರೆಗಳು ಕಾರ್ಯನಿರ್ವಹಿಸಲಿದೆ. ಇಲ್ಲಿ ಸೋಂಕಿನ ಸೌಮ್ಯ ಗುಣಲಕ್ಷಣಗಳಿದ್ದವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಐಸಿಯು ಅಥವಾ ವೆಂಟಿಲೇಟರ್‌ನ ಚಿಕಿತ್ಸೆ ಅಗತ್ಯವಾದವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕು ಎಂದರು.

ಈ ಸಂಬಂಧ ಖಾಸಗಿ ಆಸ್ಪತ್ರೆಗಳು, ಕಾರ್ಪೋರೇಟ್‌ ಆಸ್ಪತ್ರೆಗಳ ಜತೆ ಮಾತುಕತೆ ನಡೆಸಲಾಗಿದೆ. ಬೆಂಗಳೂರು ವ್ಯಾಪ್ತಿಯ ತಾರಾ ಹೊಟೇಲ್‌ಗಳ ಪೈಕಿ ಹತ್ತು ಹೋಟೆಲ್‌ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಹೋಟೆಲ್‌ಗಳಲ್ಲಿ ಚಿಕಿತ್ಸೆ ಪಡೆಯಲು ವಿಶೇಷ ದರವನ್ನು ನಿಗದಿ ಪಡಿಸುತ್ತೇವೆ ಎಂದು ಆರೋಗ್ಯ ಸಚಿವರು ಹೇಳಿದರು.

ಮತ್ತೆ ಲಾಕ್ ಡೌನ್‌ ಆಗುತ್ತಾ? ಹೆಣ ಸುಡಲು ಆಂಬುಲೆನ್ಸ್ ಸರತಿ ಸಾಲು

2,131 ಹಾಸಿಗೆ ಲಭ್ಯ:

ಶುಕ್ರವಾರ ಕಿಮ್ಸ್‌, ವಿಕ್ಟೋರಿಯಾ ಹಾಗೂ ಸೇಂಟ್‌ಜಾನ್ಸ್‌ ಆಸ್ಪತ್ರೆಗಳನ್ನು ಪರಿಶೀಲನೆ ನಡೆಸಿದ ಅವರು, ಕಿಮ್ಸ್‌, ಬೆಂಗಳೂರು ಮೆಡಿಕಲ್‌ ಕಾಲೇಜಿನಲ್ಲಿ ಕೋವಿಡ್‌-19 ರೋಗಿಗಳಿಗೆ 1,800 ಹಾಸಿಗೆಗಳು ಲಭ್ಯವಾಗಲಿದೆ. ಬೆಂಗಳೂರಿನ ವಿವಿಧ ಆಸ್ಪತ್ರೆ, ಕೋವಿಡ್‌ ಕೇರ್‌ ಸೆಂಟರ್‌ ಸೇರಿದಂತೆ ಒಟ್ಟು 6,000 ಹಾಸಿಗೆ ಲಭ್ಯವಿದ್ದು ಈ ಪೈಕಿ 3,869 ಹಾಸಿಗೆ ಭರ್ತಿಯಾಗಿದೆ. ಇನ್ನೂ 2,131 ಹಾಸಿಗೆ ಲಭ್ಯವಿದೆ ಎಂದು ಮಾಹಿತಿ ನೀಡಿದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈಗಾಗಲೇ 70 ತೀವ್ರ ನಿಗಾ ಘಟಕದ ಬೆಡ್‌ಗಳು ಲಭ್ಯವಿವೆ. ಇನ್ನು 15 ದಿನದಲ್ಲಿ 50 ರಿಂದ 100 ಐಸಿಯು ಬೆಡ್‌ಗಳನ್ನು ಒದಗಿಸಲು ಪ್ರಯತ್ನಿಸುತ್ತೇವೆ. ಕಿಮ್ಸ್‌ನಲ್ಲಿ 500 ಹಾಸಿಗೆ ನೀಡಲು ಸೂಚಿಸಿದ್ದು ಎರಡು ಮೂರು ದಿನದೊಳಗೆ ಹಾಸಿಗೆ ಲಭಿಸಲಿದೆ ಎಂದರು.

ಸೇಂಟ್‌ ಜಾನ್ಸ್‌ ಆಸ್ಪತ್ರೆಯ ಆಡಳಿತ ಮಂಡಳಿಯ ಜೊತೆ ಸಭೆ ನಡೆಸಿ ಸರ್ಕಾರ ಸೂಚಿಸಿರುವ ದರದನ್ವಯ ಆಸ್ಪತ್ರೆಯ ಶೇ.50 ಹಾಸಿಗೆಯನ್ನು ಕೊರೋನಾ ರೋಗಿಗಳಿಗೆ ಮೀಸಲಿಡುವಂತೆ ಸೂಚಿಸಿರುವುದಾಗಿ ಡಾ. ಸುಧಾಕರ್‌ ಹೇಳಿದರು.

ಕಂಟೈನ್ಮೆಂಟ್‌ ವಲಯಗಳ ಹೆಚ್ಚಳ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಲಾಗಿದೆ. ನಿಯಂತ್ರಣ, ಚಿಕಿತ್ಸೆಗಾಗಿ ಪರೀಕ್ಷೆಗಳನ್ನು ಹೆಚ್ಚು ಮಾಡುತ್ತೇವೆ. ಕಂಟೈನ್ಮೆಂಟ್‌ ಜೋನ್‌ಗಳನ್ನು ಜಾಸ್ತಿ ಮಾಡಿ ಐಸೋಲೇಷನ್‌ ಮೇಲೆ ತೀವ್ರ ನಿಗಾ ಇಡಲಾಗುವುದು ಎಂದು ಸುಧಾಕರ್‌ ತಿಳಿಸಿದರು.