ಬೆಂಗಳೂರು(ಜು.31): ಖಾಸಗಿ ಆಸ್ಪತ್ರೆಗಳು ಕೊರೋನಾ ಚಿಕಿತ್ಸೆಗೆ ನಿರಾಕರಿಸಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಬೆಂಗಳೂರಿನ ಎಂಟು ಆಸ್ಪತ್ರೆಗಳಿಗೆ ನೋಟಿಸ್‌ ನೀಡಿದ್ದು, ಇನ್ನು ಮುಂದೆ ಇಂತಹ ಧೋರಣೆ ತೋರುವ ಆಸ್ಪತ್ರೆಗಳನ್ನು ಸಂಪೂರ್ಣ ಸರ್ಕಾರದ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಹಲವು ಕಡೆ ಖಾಸಗಿ ಆಸ್ಪತ್ರೆಗಳು ಕೊರೋನಾ ಚಿಕಿತ್ಸೆಗೆ ನಿರಾಕರಿಸುವ ಘಟನೆಗಳು ನಡೆಯುತ್ತಿವೆ.

ದೆಹಲಿ ಭೇಟಿ ಅಸಲಿ ರಹಸ್ಯ ಹೇಳಿದ ಸವದಿ

ಇಂತಹ ಎಂಟು ಆಸ್ಪತ್ರೆಗಳಿಗೆ ಈಗಾಗಲೇ ನೋಟಿಸ್‌ ನೀಡಿ ಹೊರ ರೋಗಿ ಸೇವೆ (ಒಪಿಡಿ) ಬಂದ್‌ ಮಾಡಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಅಂತಹ ಆಸ್ಪತ್ರೆಗಳನ್ನು ಸಂಪೂರ್ಣ ಸರ್ಕಾರದ ವಶಕ್ಕೆ ಪಡೆಯಲು ಸಹ ಕ್ರಮ ಕೈಗೊಳ್ಳಲಾಗುವುದು ಎಂದರು.

ಇನ್ನು ವೈದ್ಯರು ಹಾಗೂ ಶುಶ್ರೂಷಕರು ಕೊರೋನಾ ಸೇವೆಗೆ ಹಿಂದೇಟು ಹಾಕುತ್ತಿದ್ದಾರೆ. ಕೊರೋನಾ ವಾರಿಯರ್‌ಗಳು ನೆಪ ಹೇಳಿ ತಮ್ಮ ಕರ್ತವ್ಯದಿಂದ ತಪ್ಪಿಸಿಕೊಳ್ಳಬಾರದು. ಕಡ್ಡಾಯವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಅನಗತ್ಯವಾಗಿ ಸೇವೆಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದರೆ ವೈದ್ಯರು ಹಾಗೂ ಶುಶ್ರೂಷಕರ ಮೇಲೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.