EMI ಸಾಲ ವಸೂಲಿ ಗಲಾಟೆ ವೇಳೆ ಬಿತ್ತು ಗುಂಡೇಟು!
ಖಾಸಗಿ ಕಂಪನಿ ಮಾಲಿಕನೋರ್ವ ಸಾಲ ವಸೂಲಾತಿ ಏಜೆಂಟ್ ಸ್ನೇಹಿತನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಆತ ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಾನೆ.
ಬೆಂಗಳೂರು [ಜ.31]: ದುಬಾರಿ ಮೌಲ್ಯದ ಬೈಕ್ ಸಾಲದ ಇಎಂಐ ಪಾವತಿ ವಿಚಾರ ಸಂಬಂಧ ಉಂಟಾದ ಜಗಳದಲ್ಲಿ ರೊಚ್ಚಿಗೆದ್ದ ಖಾಸಗಿ ಕಂಪನಿ ಮಾಲಿಕರೊಬ್ಬರು, ಸಾಲ ವಸೂಲಾತಿ ಏಜೆಂಟನ ಸ್ನೇಹಿತನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಹೆಣ್ಣೂರಿನಲ್ಲಿ ನಡೆದಿದೆ.
ಡಿ.ಜೆ.ಹಳ್ಳಿಯ ನಿವಾಸಿ ಸೈಯದ್ ಸಲೀಂ ಗುಂಡೇಟಿನಿಂದ ಗಾಯಗೊಂಡಿದ್ದು, ಆತ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾನೆ. ಈ ಗುಂಡಿನ ದಾಳಿ ನಡೆಸಿದ ಆರೋಪದ ಮೇರೆಗೆ ಉದ್ಯಮಿಗಳಾದ ಮಯೂರೇಶ್ ಹಾಗೂ ಅಮರೇಂದರ್ ಹಾಗೂ ಸಾಲ ವಸೂಲಿಗೆ ತೆರಳಿ ಗಲಾಟೆ ಮಾಡಿದ ಆರೋಪದ ಮೇರೆಗೆ ಸಲೀಂ ಸ್ನೇಹಿತರಾದ ಸೈಯದ್ ಅರ್ಫಾದ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಬ್ಯಾಂಕ್‌ನಲ್ಲಿ ಸಾಲ ಪಡೆದು ಹಾರ್ಲೆ ಡೇವಿಡಸನ್ ಬೈಕನ್ನು ಮಯೂರೇಶ್ ಖರೀದಿಸಿದ್ದರು. ಆದರೆ ಜನವರಿ ತಿಂಗಳ ಇಎಂಐ ಪಾವತಿಸದ ಕಾರಣಕ್ಕೆ ಅವರ ಮನೆಗೆ ಸಾಲ ವಸೂಲಿಗೆ ಏಜೆಂಟ್ ಸೈಯದ್ ತೆರಳಿದ್ದ. ಆಗ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಈ ಹಂತದಲ್ಲಿ ಕೆರಳಿದ ಮಯೂರೇಶ್ ಸಂಬಂಧಿ ಅಮರೇಂದರ್, ಸಾಲ ವಸೂಲಿಗಾರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಸಲೀಂ ಎದೆಗೆ ಒಂದು ಗುಂಡು ಹೊಕ್ಕಿತು. ಕೂಡಲೇ ಆತನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
32 ಸಾವಿರಕ್ಕೆ ಗಲಾಟೆ:
ಜಾರ್ಖಂಡ್ ಮೂಲದ ಅಮರೇಂದರ್ ಹಾಗೂ ಮಯೂರೇಶ್, ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದಾರೆ. ಹೆಣ್ಣೂರು ಕ್ರಾಸ್ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ತಮ್ಮ ಕುಟುಂಬಗಳ ಜತೆ ಪ್ರತ್ಯೇಕವಾಗಿ ನೆಲೆಸಿದ್ದರು. ಮೂಯರೇಶ್ ಸಣ್ಣದೊಂದು ಐಟಿ ಕಂಪನಿ ನಡೆಸುತ್ತಿದ್ದರೆ, ಅಮರೇಂದರ್ ರೆಡಿ ಮಿಕ್ಸ್ ಸಿಮೆಂಟ್ ಘಟಕದ ಮಾಲಿಕರಾಗಿದ್ದಾರೆ. ಎರಡು ವರ್ಷಗಳ ಹಿಂದೆ ಮಯೂರೇಶ್, ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ತಿಂಗಳ ಕಂತಿನ ಆಧಾರದಲ್ಲಿ 15 ಲಕ್ಷ ರು. ಸಾಲ ಪಡೆದು ಹಾರ್ಲೆ ಡೇವಿಡ್‌ಸನ್ ಬೈಕ್ ಖರೀದಿಸಿದ್ದರು. ಪ್ರತಿ ತಿಂಗಳು ಬ್ಯಾಂಕ್‌ಗೆ 32 ಸಾವಿರವನ್ನು ಅವರು ಪಾವತಿಸಬೇಕಿತ್ತು. ಅದರಂತೆ ಎರಡು ವರ್ಷಗಳಿಂದ ತಪ್ಪದೆ ಮಾಸಿಕ ಇಎಂಐ ಕಟ್ಟುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
10 ಸೆಕೆಂಡ್‌ನಲ್ಲಿ 196 ಗ್ರಾಂ ಚಿನ್ನದ ಸರ ಎಗರಿಸಿದ 'ಮಿಣ ಮಿಣ' ಕಳ್ಳರು!...
ಆದರೆ ಜ.5ರಂದು ಇಎಂಐ ಅನ್ನು ಕಟ್ಟದೆ ಮಯೂರೇಶ್ ಬಾಕಿ ಉಳಿಸಿಕೊಂಡಿದ್ದರು. ಈ ಬಾಕಿ ಸಾಲ ವಸೂಲಿಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ನವರು ಸಾಲ ವಸೂಲಾತಿ ಏಜೆಂಟ್ ಸೈಯದ್ ಅರ್ಫಾದ್‌ಗೆ ವಹಿಸಿದ್ದರು. ಎರಡ್ಮೂರು ದಿನಗಳಿಂದ ಮಯೂರೇಶ್‌ಗೆ ಕರೆ ಮಾಡಿದ ಆತ, ಇಎಂಐ ಕಟ್ಟುವಂತೆ ಹೇಳುತ್ತಿದ್ದ. ಇದರಿಂದ ಕಿರಿಕಿರಿಗೊಳಗಾದ ಮಯೂರೇಶ್, ಸಮಯಾವಕಾಶ ನೀಡುವಂತೆ ಕೇಳಿದ್ದರು. ಆದರೆ ಇದಕ್ಕೊಪ್ಪದ ಏಜೆಂಟ್, ತಕ್ಷಣವೇ ಪಾವತಿಗೆ ತಾಕೀತು ಮಾಡಿದ್ದ.
ಆಗ ಮೊಬೈಲ್ ಕರೆ ಮಾಡಿದಾಗಲೇ ಇಬ್ಬರ ಮಧ್ಯೆ ಬಿರುಸಿನ ಮಾತುಕತೆ ನಡೆದಿತ್ತು. ಈ ಬೆಳವಣಿಗೆಯಿಂದ ಕೆರಳಿದ ಸೈಯದ್, ತನ್ನ ನಾಲ್ವರು ಸ್ನೇಹಿತರನ್ನು ಕರೆದುಕೊಂಡು ಮಯೂರೇಶ್ ಮನೆಗೆ ಸಾಲ ವಸೂಲಿಗೆ ಬುಧವಾರ ರಾತ್ರಿ 9.30ರ ಸುಮಾರಿಗೆ ಹೋಗಿದ್ದಾನೆ. ಆಗ ಮಯೂರೇಶ್ ಮತ್ತು ಸಾಲ ವಸೂಲಿಗಾರರ ನಡುವೆ ಮಾತಿಗೆ ಮಾತು ಬೆಳೆದು ಜೋರಾಗಿ ಜಗಳವಾಗಿದೆ.
ಅದೇ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಅಮರೇಂದರ್, ಗಲಾಟೆ ವಿಚಾರ ತಿಳಿದು ಕೂಡಲೇ ಮಯೂರೇಶ್ ಫ್ಲ್ಯಾಟ್‌ಗೆ ಬಂದಿದ್ದಾರೆ. ಈ ಘರ್ಷಣೆ ಶಾಂತಗೊಳಿಸಲು ಎರಡು ಬಾರಿ ತಮ್ಮ ಪರವಾನಿಗೆ ಹೊಂದಿದ್ದ ಪಿಸ್ತೂಲ್‌ನಿಂದ ಗಾಳಿಯಲ್ಲಿ ಅಮರೇಂದರ್ ಗುಂಡು ಹಾರಿಸಿದ್ದಾರೆ. ಇದಕ್ಕೆ ಜಗ್ಗದೆ ಹೋದಾಗ ಸಾಲ ವಸೂಲಿಗಾರರ ಮೇಲೆಯೇ ಒಂದು ಸುತ್ತು ಅವರು ಗುಂಡು ಹಾರಿಸಿದ್ದಾರೆ. ಆಗ ಗುಂಡು ಸಲೀಂಗೆ ಹೊಕ್ಕಿದೆ. ಕೂಡಲೇ ಗುಂಡೇಟಿನಿಂದ ಗಾಯಗೊಂಡು ಸ್ನೇಹಿತನನ್ನು ಆಸ್ಪತ್ರೆಗೆ ಸಾಗಿಸಲು ಸೈಯದ್ ಅರ್ಫಾದ್ ತಂಡ ತೆರಳಿದೆ. ಅಷ್ಟರಲ್ಲಿ ಈ ಘಟನೆ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಹೆಣ್ಣೂರು ಠಾಣೆ ಪೊಲೀಸರು, ಅಮರೇಂದರ್ ಹಾಗೂ ಮಯೂರೇಶ್‌ನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಎರಡು ಕಡೆಯವರು ನೀಡಿದ ದೂರಿನ ಮೇರೆಗೆ ಪ್ರತ್ಯೇಕವಾಗಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.