ಟಿ. ನರಸೀಪುರ (ಸೆ.16):  ಆಟೋಗಳಲ್ಲೇ ಪ್ರಯಾಣಿಕರನ್ನು ಮೈಸೂರಿನವರೆಗೆ ಕರೆದೊಯ್ಯುತ್ತಿರುವ ಹಿನ್ನೆಲೆ ಖಾಸಗಿ ಬಸ್‌ಗಳ ಸಂಚಾರಕ್ಕೆ ಬಹಳ ತೊಂದರೆಯಾಗಿದ್ದು, ಜಿಲ್ಲಾಡಳಿತ ಈ ಬಗ್ಗೆ ಕ್ರಮವಹಿಸಬೇಕೆಂದು ಖಾಸಗಿ ಬಸ್‌ ಕಾರ್ಮಿಕರು ಮನವಿ ಮಾಡಿದ್ದಾರೆ.

ತಾಲೂಕಿನಲ್ಲಿ ದಿನನಿತ್ಯ ನೂರಾರು ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದವು. ಮೈಸೂರು, ಕೊಳ್ಳೆಗಾಲ ಮತ್ತು ಚಾಮರಾಜನಗರ ಸೇರಿದಂತೆ ವಿವಿಧೆಡೆ ಖಾಸಗಿ ಬಸ್‌ಗಳು ಸಂಚಾರವಿತ್ತು, ಅದರಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ, ಈಗ ಕೊರೋನಾ ಹಿನ್ನೆಲೆ ಸುಮಾರು 5 ರಿಂದ 6 ತಿಂಗಳಿಂದ ಜೀವನ ನಿರ್ವಹಣೆಗೆ ತೊಂದರೆ ಅನುಭವಿಸುತ್ತಿದ್ದಾರೆ.

ಡ್ರಗ್ಸ್‌ ದಂಧೆಯಲ್ಲಿ ರಾಜಕಾರಣಿಗಳ ಮಕ್ಕಳು ಇಲ್ವಾ?: ವಾಟಾಳ್‌ ಪ್ರಶ್ನೆ ...

ಖಾಸಗಿ ಬಸ್‌ ಮಾಲೀಕರು ಕೊರೋನಾ ಸಮಯದಲ್ಲಿ ಲಾಕ್‌ಡೌನ್‌ನಿಂದ ಸಂಚಾರ ಸ್ಥಗಿತಗೊಳಿಸಿದರು. ಕಾರ್ಮಿಕರ ಬಗ್ಗೆ ಅವರು ಗಮನ ಹರಿಸದೆ ಕೈಚೆಲ್ಲಿ ಕುಳಿತರು. ಇತ್ತೀಚಿನ ದಿನಗಳಲ್ಲಿ ಸರ್ಕಾರ ಖಾಸಗಿ ಬಸ್‌ ಸಂಚಾರಕ್ಕೆ ಅನುವು ನೀಡಿದ ಹಿನ್ನೆಲೆ ಬಸ್‌ ಚಾಲನೆ ಪ್ರಾರಂಭಿಸಿದಾಗ 200ಕ್ಕೂ ಹೆಚ್ಚು ಬಸ್‌ ಸಂಚಾರ ಮಾಡುತ್ತಿದ್ದ ಕಡೆ 20 ಬಸ್‌ ಓಡಾಡಲು ಪ್ರಾರಂಭಿಸಿದೆ. 

ಆದರೆ ಮೈಸೂರಿನಿಂದ ಟಿ. ನರಸೀಪುರಕ್ಕೆ ಹಾಗೂ ಕೊಳ್ಳೇಗಾಲದ ಕಡೆಗೆ ದಿನಕ್ಕೆ 5 ಸಾವಿರಕ್ಕೂ ಹೆಚ್ಚು ಸಂಪಾದನೇ ಆಗುತ್ತಿತ್ತು, ಆದರೆ ಈಗ ಸ್ಥಳಿಯ ಆಟೋ ಚಾಲಕರು ಅಲ್ಲಲ್ಲಿ ಆಟೋಗಳಿಗೆ 15ಕ್ಕೂ ಹೆಚ್ಚು ಜನರನ್ನು ಕರೆದುಕೊಂಡು ಹೋಗುವುದರಿಂದ ಪ್ರಯಾಣಿಕರು ತಮ್ಮ ಊರುಗಳಿಗೆ ಆಟೋಗಳಿಂದ ಹೋಗುತ್ತಾರೆ. ಇದರಿಂದ ಬಸ್‌ ಮಾಲೀಕರಿಗೆ ತೊಂದರೆ ಯಾಗಿರುವುದಲ್ಲದೇ ನಮ್ಮಂತಹ ಕಾರ್ಮಿಕರಿಗೆ ಜೀವನ ನಡೆಸುವುದು ಕಷ್ಟವಾಗಿದೆ. ಇದರಿಂದ ಸರ್ಕಾರ ಹಾಗೂ ಜಿಲ್ಲಾಡಳಿತ ಮಧ್ಯ ಪ್ರವೇಶಿಸಬೇಕೆಂದು ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕೊರೋನಾ ಸಂಕಷ್ಟದಲ್ಲಿರುವ ನಮಗೆ ಈಗಾಗಲೇ ಬಾರಿ ಹೊಡೆತ ಬಿದ್ದಿದೆ. ಉದ್ಯೋಗವೇ ಇಲ್ಲದಂತಾಗಿದೆ.

ಈ ನಡುವೆ ಆಟೋಗಳವರು ಪ್ರಯಾಣಿಕರನ್ನು ಮೈಸೂರಿನವರೆಗೆ ಕರೆದೊಯ್ಯುವುದರಿಂದ ಖಾಸಗಿ ಬಸ್‌ಗಳಿಗೆ ಪ್ರಯಾಣಿಕರೇ ಬರುತ್ತಿಲ್ಲ. ಜತೆಗೆ ಸಂಚರಿಸುವ ಬಸ್‌ಗಳೇ ಕಡಿಮೆ. ಈ ಪರಿಸ್ಥಿತಿ ಮುಂದುವರಿದರೆ ನಮ್ಮ ಜೀವನ ನಿರ್ವಹಣೆ ಮಾಡುವುದಾದರೂ ಹೇಗೆ ಎಂಬುದೇ ತಿಳಿಯದಾಗಿದೆ.