ಹೊಸ ವರ್ಷಾಚರಣೆಗೆ ಪೂರ್ವಾನುಮತಿ ಕಡ್ಡಾಯ, ಷರತ್ತುಗಳೇನೇನು..?
ಹೊಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳು 2020ರ ಹೊಸ ವರ್ಷಾಚರಣೆ ಮಾಡಬೇಕಾದರೆ ಕಡ್ಡಾಯವಾಗಿ ನಗರ ಪೊಲೀಸ್ ಕಮಿಷನರ್ ಕಚೇರಿಯಿಂದ ಪೂರ್ವಾನುಮತಿ ಪಡೆಯಲು ಸೂಚಿಸಲಾಗಿದೆ. ಆಚರಣೆಗೆ ಷರತ್ತುಗಳನ್ನೂ ಹೇರಲಾಗಿದ್ದು, ಅವುಗಳೇನೇನು..? ಇಲ್ಲಿ ಓದಿ.
ಮಂಗಳೂರು(ಡಿ.12): ಮಂಗಳೂರು ನಗರದ ಹೊಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳು 2020ರ ಹೊಸ ವರ್ಷಾಚರಣೆ ಮಾಡಬೇಕಾದರೆ ಕಡ್ಡಾಯವಾಗಿ ನಗರ ಪೊಲೀಸ್ ಕಮಿಷನರ್ ಕಚೇರಿಯಿಂದ ಪೂರ್ವಾನುಮತಿ ಪಡೆಯಲು ಸೂಚಿಸಲಾಗಿದೆ. ಅಲ್ಲದೆ, ಅಂದು ಕಾನೂನು ಬಾಹಿರ ಚಟುವಟಿಕೆ ನಡೆಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆ ಎಚ್ಚರಿಸಿದೆ.
ಹೊಸ ವರ್ಷಾಚರಣೆಯ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಈ ಕಡ್ಡಾಯ ಆದೇಶ ಜಾರಿಗೊಳಿಸಲಾಗಿದೆ. ಹೊಸ ವರ್ಷಾಚರಣೆ ಮಾಡುವವರು ಡಿಸೆಂಬರ್ 24ರ ಸಂಜೆ 4 ಗಂಟೆಯೊಳಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಪೂರ್ವಾನುಮತಿ ಪಡೆಯದೆ ನೂತನ ವರ್ಷಾಚರಣೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಕನ್ನಡ ನಾಮಫಲಕ, ರಸ್ತೆ ಗುಂಡಿ ವಿಷಯ ಒಂದೇ ಪತ್ರದಲ್ಲಿ ಬರೆದು ಎಡವಟ್ಟು
ಹೊಸ ವರ್ಷಾಚರಣೆಯ ಎಲ್ಲ ಕಾರ್ಯಕ್ರಮಗಳನ್ನು ಮಧ್ಯರಾತ್ರಿ 12 ಗಂಟೆಯೊಳಗೆ ಕಡ್ಡಾಯವಾಗಿ ಮುಕ್ತಾಯಗೊಳಿಸಬೇಕು. ಅಲ್ಲದೆ, ಈ ಕಾರ್ಯಕ್ರಮಗಳನ್ನು ಆಯೋಜಿಸುವವರು ಸಂಬಂಧಪಟ್ಟಇಲಾಖೆಗಳಿಂದ ಪಡೆದ ಪರವಾನಗಿಯಲ್ಲಿ ನೀಡಿದ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಷರತ್ತುಗಳೇನು:
ಹೊಸ ವರ್ಷಾಚರಣೆಯ ಕಾರ್ಯಕ್ರಮಗಳನ್ನು ಆಯೋಜಿಸುವವರು ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಗ್ನಿಶಾಮಕ ಉಪಕರಣಗಳು, ತುರ್ತು ಚಿಕಿತ್ಸಾ ವಾಹನ ಹಾಗೂ ಇತರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ರೆಸ್ಟೋರೆಂಟ್ ಮತ್ತು ಮದ್ಯಪಾನ ಸರಬರಾಜು ಮಾಡುವ ಹೊಟೇಲ್‌ಗಳಲ್ಲಿ ಸರ್ಕಾರವು ನಿಗದಿಪಡಿಸಿದ ಸಮಯಕ್ಕಿಂತ ಹೆಚ್ಚಿನ ಸಮಯದಲ್ಲಿ ಮದ್ಯ ವಿತರಿಸಲು ಉದ್ದೇಶಿಸಿದ್ದರೆ ಅಬಕಾರಿ ಇಲಾಖೆಯಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಅನುಮತಿ ಪಡೆದ ಪತ್ರದ ಪ್ರತಿಯನ್ನು ಅರ್ಜಿಯೊಂದಿಗೆ ಕಚೇರಿಗೆ ಸಲ್ಲಿಸಬೇಕು. ಆಯೋಜಕರು ಮಹಿಳೆಯರ ಸುರಕ್ಷತೆಗಾಗಿ ಪ್ರತ್ಯೇಕ ಮಹಿಳಾ ಭದ್ರತಾ ಸಿಬ್ಬಂದಿಯನ್ನು ಕಡ್ಡಾಯವಾಗಿ ನೇಮಿಸಬೇಕು. ಆಯೋಜಕರು ಕಾರ್ಯಕ್ರಮ ನಡೆಸುವ ಸ್ಥಳದ ಮುಖ್ಯ ದ್ವಾರ, ಒಳಾವರಣ ಮತ್ತು ಹೊರಾವರಣಗಳಲ್ಲಿ ಸಿಸಿ ಟಿವಿ ಕ್ಯಾಮರ ಅಳವಡಿಸಬೇಕು ಹಾಗೂ ಯಾವುದೇ ಸಮಯದಲ್ಲಿ ಪರಿಶೀಲನೆಗಾಗಿ ರೆಕಾಡಿಂಗ್ ಫೋಟೇಜ್ ಲಭ್ಯವಿರಿಸಬೇಕು.
ಬಾರ್, ಮದ್ಯದಂಗಡಿ ಮತ್ತು ಮದ್ಯ ವಿತರಿಸುವ ಸ್ಥಳಗಳಲ್ಲಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾದಲ್ಲಿ ಸನ್ನದುದಾರರ ಮೇಲೆ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರಡಿ ಕ್ರಮ ಕೈಗೊಳ್ಳಲಾಗುತ್ತದೆ. ಹೊಸ ವರ್ಷಾಚರಣೆ ನಡೆಸುವ ಹೊಟೇಲ್, ಕ್ಲಬ್ ಅಥವಾ ವಿಶೇಷ ಕೂಟಗಳ ವ್ಯವಸ್ಥಾಪಕರು, ಸಾರ್ವಜನಿಕ ರಸ್ತೆಯ ಮೇಲೆ ಪಾಕಿಂರ್‍ಗ್ ಮಾಡಿದರೆ ವ್ಯವಸ್ಥಾಪಕರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುತ್ತದೆ. ಸಾರ್ವಜನಿಕ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸದೆ ಪ್ರತ್ಯೇಕ ಪಾಕಿಂರ್‍ಗ್ ವ್ಯವಸ್ಥೆ ಮಾಡಬೇಕು. 18 ವರ್ಷ ವಯಸ್ಸಿಗಿಂತ ಕೆಳಗಿನವರಿಗೆ ಕಡ್ಡಾಯವಾಗಿ ಮದ್ಯ ವಿತರಿಸಬಾರದು. ಪೋಷಕರು ಜೊತೆಯಲ್ಲಿ ಇರದೇ ಇರುವ ಪಕ್ಷದಲ್ಲಿ 18 ವರ್ಷ ಕೆಳಗಿನವರಿಗೆ ಯಾವುದೇ ಕಾರಣಕ್ಕೂ ಕಾರ್ಯಕ್ರಮಕ್ಕೆ ಪ್ರವೇಶ ನೀಡುವಂತಿಲ್ಲ. ಯಾವುದೇ ಅಹಿತಕರ ಘಟನೆಗಳಾಗದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಭಂಗವುಂಟಾದಲ್ಲಿ ವ್ಯವಸ್ಥಾಪಕರನ್ನೆ ಹೊಣೆಗಾರರನ್ನಾಗಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಅರೆ ಬೆತ್ತಲೆ ನೃತ್ಯ ನಿಷೇಧ:
ಹೊಸ ವರ್ಷ ಆಚರಣೆ ಸಂದರ್ಭ ಧ್ವನಿವರ್ಧಕವನ್ನು ಅಳವಡಿಸುವವರು ತಮ್ಮ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವಂತೆ ಬಾಕ್ಸ್ ಮಾದರಿ ಧ್ವನಿವರ್ಧಕವನ್ನು ಅಳವಡಿಸಿಕೊಂಡು ಕಡಿಮೆ ಧ್ವನಿಯಲ್ಲಿ ಕಾರ್ಯಕ್ರಮವನ್ನು ನಡೆಸಬೇಕು. ಧ್ವನಿವರ್ಧಕದ ಧ್ವನಿ ಪ್ರಮಾಣವು ನಿಗದಿಪಡಿಸಲಾದ ಪ್ರಮಾಣವನ್ನು ಯಾವುದೇ ಕಾರಣಕ್ಕೂ ಮೀರಬಾರದು, ಸಾಂಸ್ಕೃತಿಕ ಕಾರ್ಯಕ್ರಮಗಳ ನೆಪದಲ್ಲಿ ಅಶ್ಲೀಲ, ಅರೆಬೆತ್ತಲೆ ಅಥವಾ ಬೆತ್ತಲೆ ನೃತ್ಯ, ಜೂಜಾಟ ನಡೆಸುವುದನ್ನು ನಿಷೇಧಿಸಲಾಗಿದೆ.
ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಶುಭಕೋರುವ ನೆಪದಲ್ಲಿ ಕೀಟಲೆ/ ಅಸಭ್ಯವಾಗಿ ವರ್ತಿಸುವುದನ್ನು ತಡೆಯಲು ಕಾರ್ಯಪಡೆ ತಂಡಗಳನ್ನು ರಚಿಸಲಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಅಂಥವರ ಮೇಲೆ ನಿಗಾ ವಹಿಸಲು ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಕಾರ್ಯಪಡೆ ಮಂಗಳೂರು ನಗರದ ಎಲ್ಲ ಪ್ರದೇಶಗಳಲ್ಲಿ ಕಾರ್ಯಾಚರಣೆಯಲ್ಲಿರುತ್ತದೆ.
ಹರಪನಹಳ್ಳಿ: ಸಾಂಕ್ರಾಮಿಕ ಕಾಯಿಲೆ ಭೀತಿಯಲ್ಲಿ ಕನ್ನನಾಯಕನಹಳ್ಳಿ
ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಏರ್ಪಡಿಸಲಾಗಿರುವ ಹೊಸ ವರ್ಷಾಚರಣೆಯ ಕಾರ್ಯಕ್ರಮದ ಹಾಗೂ ಇನ್ನಿತರ ನೆಪದಲ್ಲಿ ಬಸ್ಸು ತಂಗುದಾಣ, ಸಾರ್ವಜನಿಕ ಉದ್ಯಾನವನಗಳು, ಕ್ರೀಡಾಂಗಣಗಳಲ್ಲಿ, ರೈಲ್ವೇ ಸ್ಟೇಶನ್ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಮದ್ಯಪಾನ ಮಾಡುವುದನ್ನು ನಿಷೇಧಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಯುವಕರು ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆ ನೆಪದಲ್ಲಿ ಯಾವುದೇ ಕಾರಣಕ್ಕೂ ರಸ್ತೆಗಳಲ್ಲಿ ಅಸಭ್ಯವಾಗಿ ವರ್ತಿಸಬಾರದು. ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಹೊಸ ವರ್ಷಾಚರಣೆ ನೆಪದಲ್ಲಿ ವಾಹನಗಳನ್ನು ವೀಲಿಂಗ್ ಮತ್ತು ಡ್ರಾಗ್ ರೇಸ್ ಮಾಡುವುದನ್ನು, ಬೊಬ್ಬೆ ಹಾಕುವುದು ಹಾಗೂ ಅತಿ ವೇಗವಾಗಿ ವಾಹನಗಳನ್ನು ಚಲಾಯಿಸುವುದು ಮತ್ತು ಕರ್ಕಶ ಶಬ್ದ ಮಾಡುವುದನ್ನು ತಡೆಗಟ್ಟಲು ಕೂಡಾ ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆಯನ್ನು ರಚಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯವಾಗಿ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ.
ಬೀಚ್ ಮದ್ಯಪಾನ ಸಲ್ಲದು:
ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಸಮುದ್ರ ಕಿನಾರೆಗಳಲ್ಲಿ ಬೀಚ್ ಪ್ರದೇಶಗಳಲ್ಲಿ ಮದ್ಯಪಾನ ಮಾಡಬಾರದು. ಅಂದು ಪಟಾಕಿ ಸುಡುಮದ್ದುಗಳನ್ನು ಸಿಡಿಸುವುದನ್ನು ನಿಷೇಧಿಸಲಾಗಿದೆ. ಹೊಸ ವರ್ಷ ಆಚರಿಸುವವರು ಡಿಸೆಂಬರ್ 31ರ ರಾತ್ರಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಬಲವಂತವಾಗಿ ನಿಲ್ಲಿಸಿ ಅವರ ಇಚ್ಛೆಗೆ ವಿರುದ್ಧವಾಗಿ ಶುಭಕೋರುವ ನೆಪದಲ್ಲಿ ಕಿರಿಕಿರಿ ಮಾಡಬಾರದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.