ಬೆಂಗಳೂರು(ಡಿ.12): ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯಗೊಳಿಸಿರುವ ಬಿಬಿಎಂಪಿ ಆದೇಶದ ಬಗ್ಗೆ ಪ್ರತಿಕ್ರಿಯಿಸುವ ವೇಳೆ ಬಿಬಿಎಂಪಿ ವೈಫಲ್ಯಗಳನ್ನು ಪ್ರಸ್ತಾಪಿಸಿ ಮೇಯರ್‌ ಗೌತಮ್‌ ಕುಮಾರ್‌ ಅವರಿಗೆ ಪತ್ರ ಬರೆದಿರುವುದು ತಪ್ಪಾಗಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್‌. ಜನಾರ್ದನ್‌ ವಿಷಾದ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಮೇಯರ್‌ ಗೌತಮ್‌ಕುಮಾರ್‌ಗೆ ಬರೆದಿದ್ದ ಪತ್ರದಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ 2020ರ ಏಪ್ರಿಲ್‌ವರೆಗೆ ಕಾಲಾವಕಾಶ ಕೇಳಿದ್ದ ಸಿ.ಆರ್‌. ಜನಾರ್ದನ್‌, ತಿಂಗಳಾಂತ್ಯದೊಳಗಾಗಿ (ಡಿ.2019) ಎಲ್ಲಾ ಉದ್ದಿಮೆಗಳಲ್ಲೂ ಕನ್ನಡ ನಾಮಫಲಕ ಅಳವಡಿಕೆಗೆ ಎಫ್‌ಕೆಸಿಸಿಐ ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಎಲ್ಲಾ ಉದ್ದಿಮೆಗಳಿಗೂ ಸ್ಪಷ್ಟಸೂಚನೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

3.5 ವರ್ಷದಲ್ಲಿ ರಾಜ್ಯದ ಚಿತ್ರಣ ಬದಲು: ಬಿಎಸ್‌ವೈ.

ನಗರದಲ್ಲಿನ ಎಲ್ಲಾ ಉದ್ದಿಮೆಗಳು ನವೆಂಬರ್‌ 1ರ ಒಳಗೆ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಕೆ ಮಾಡುವಂತೆ ಬಿಬಿಎಂಪಿ ಆದೇಶ ಹೊರಡಿಸಿತ್ತು. ಈ ಬಗ್ಗೆ ಎಫ್‌ಕೆಸಿಸಿಐ ಉದ್ಯಮಿಗಳ ಪರವಾಗಿ ಹೆಚ್ಚುವರಿ ಕಾಲಾವಕಾಶ ಕೋರಿ ಮೇಯರ್‌ ಅವರಿಗೆ ಪತ್ರ ಬರೆದಿದ್ದ ಸಿ.ಆರ್‌.ಜನಾರ್ದನ್‌, ಬಿಬಿಎಂಪಿ ಬಗ್ಗೆ ಉಡಾಫೆ ಮಾತುಗಳನ್ನು ಆಡಿದ್ದರು. ಅಲ್ಲದೆ, ಕನ್ನಡ ನಾಮಫಲಕದ ಹೆಸರಿನಲ್ಲಿ ಉದ್ಯಮಿಗಳಿಗೆ ಕಿರುಕುಳ ನೀಡಬೇಡಿ. ಮೊದಲು ರಸ್ತೆ ಗುಂಡಿ, ಕಸದ ಸಮಸ್ಯೆ, ಕಳಪೆ ಕಾಮಗಾರಿ ಸರಿಪಡಿಸಿ ಎಂದು ಉದ್ಧಟತನ ಪ್ರದರ್ಶಿಸಿದ್ದರು.

ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಡಿಕೆಶಿ, ಎಂಬಿಪಾ ಲಾಬಿ!

ಡಿ.5ರಂದು ಜನಾರ್ದನ್‌ ಅವರು ಬರೆದ ಪತ್ರದ ಬಗ್ಗೆ ಭಾನುವಾರ ‘ಕನ್ನಡಪ್ರಭ’ ವಿಸ್ತೃತ ವರದಿ ಪ್ರಕಟಿಸಿತ್ತು. ಇದರಿಂದ ಕನ್ನಡಪರ ಸಂಘಟನೆಗಳು, ಬಿಬಿಎಂಪಿ ಅಧಿಕಾರಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಹಲವರು ಎಫ್‌ಕೆಸಿಸಿಐ ಅಧ್ಯಕ್ಷರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಕ್ಷಮೆ ಕೋರುವಂತೆ ಆಗ್ರಹಿಸಿದರು. ಇದರ ಬೆನ್ನಲ್ಲೇ ಡಿ.10ರಂದು ಮೇಯರ್‌ ಗೌತಮ್‌ಕುಮಾರ್‌, ಕನ್ನಡ ಭಾಷೆಗೆ ಗೌರವ ನೀಡದ ಎಫ್‌ಕೆಸಿಸಿಐ ಸಭೆ, ಸಮಾರಂಭಗಳಿಗೆ ಇನ್ನು ಮುಂದೆ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸಿ.ಆರ್‌.ಜನಾರ್ದನ್‌ ಅವರು ಬುಧವಾರ ತಮ್ಮಿಂದ ಆದ ತಪ್ಪನ್ನು ಒಪ್ಪಿಕೊಂಡು ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ವಾರದೊಳಗೆ ಖುದ್ದು ಮೇಯರ್‌ ಅವರನ್ನು ಭೇಟಿ ಮಾಡಿ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳಲಾಗುವುದು ಎಂದು ಹೇಳಿದರು.

ಕನ್ನಡ ವಿಚಾರದಲ್ಲಿ ಬಿಬಿಎಂಪಿ ಸಮಸ್ಯೆ ಬರೆದಿದ್ದು ತಪ್ಪಾಗಿದೆ

ಕನ್ನಡ ನಾಮಫಲಕ ಅಳವಡಿಕೆ ಅವಧಿ ವಿಸ್ತರಣೆಗೆ ಸಮಯಾವಕಾಶ ಕೋರಿ ಬರೆದ ಪತ್ರದಲ್ಲೇ ರಸ್ತೆ ಗುಂಡಿ ಸಮಸ್ಯೆ, ಕಸ ವಿಲೇವಾರಿ ಸಮಸ್ಯೆ, ಕಳಪೆ ಕಾಮಗಾರಿ, ಸಂಚಾರದಟ್ಟಣೆ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದು ತಪ್ಪು. ಎರಡು ವಿಷಯಗಳಿಗೂ ಪ್ರತ್ಯೇಕವಾಗಿ ಪತ್ರ ಬರೆಯಬೇಕಾಗಿತ್ತು. ಕನ್ನಡ ನಾಮಫಲಕ ವಿಚಾರದಲ್ಲಿ ಬಿಬಿಎಂಪಿ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದರಿಂದ ತಪ್ಪು ಗ್ರಹಿಕೆ ಉಂಟಾಗಿದೆ. ಈ ಬಗ್ಗೆ ಮೇಯರ್‌ ಅವರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತೇನೆ ಎಂದರು.

‘ಕನ್ನಡ ನಾಮಫಲಕ ಅಳವಡಿಕೆಗೆ ಸ್ವಾಗತ, ಆದರೆ ಕಾಲಾವಕಾಶ ನೀಡಿ’

ನಗರದಲ್ಲಿ ಕನ್ನಡ ನಾಮಫಲಕ ಅಳವಡಿಕೆಯ ಬಿಬಿಎಂಪಿಯ ಆದೇಶಕ್ಕೆ ಯಾವುದೇ ವಿರೋಧವಿಲ್ಲ. ಎಫ್‌ಕೆಸಿಸಿಐ ಕನ್ನಡ ನಾಮಫಲಕ ಅಳವಡಿಕೆಯನ್ನು ಮುಕ್ತವಾಗಿ ಸ್ವಾಗತಿಸುತ್ತದೆ. ಆದರೆ, ನಾಮಫಲಕ ಅಳವಡಿಕೆಗೆ 2020ರ ಏಪ್ರಿಲ್‌ 30ರ ವರೆಗೆ ಕಾಲಾವಕಾಶ ನೀಡುವಂತೆ ಬಿಬಿಎಂಪಿ ಮೇಯರ್‌ ಅವರಿಗೆ ಕೇಳಿದ್ದೆವು. ನಾಮಫಲಕ ಅಳವಡಿಕೆ ಮಾಡುವುದಿಲ್ಲ ಎಂದು ನಾವು ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಕನ್ನಡ ಭಾಷೆಗೆ ಅವಮಾನ ಆಗಲು ತಾಯಿ ಭುವನೇಶ್ವರಿ ಸಾಕ್ಷಿಯಾಗಿ ಅವಕಾಶ ನೀಡುವುದಿಲ್ಲ. ಪ್ರತಿ ವರ್ಷ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತೇವೆ. ಕಳೆದ ನ.14 ರಂದು ಕನ್ನಡ ರಾಜ್ಯೋತ್ಸವ ಆಚರಿಸಿ ಇಬ್ಬರು ಸಾಹಿತಿಗಳಿಗೆ ಸನ್ಮಾನಿಸಿ ಗೌರವಿಸಿದ್ದೇವೆ ಎಂದರು.

ಕ್ಷಮೆ ಕೇಳಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೂಚನೆ

ಕನ್ನಡ ನಾಮಫಲಕ ವಿಚಾರಕ್ಕೆ ಸಂಬಂಧಿಸಿದಂತೆ ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್‌. ಜನಾರ್ದನ್‌ ಅವರು ಮೇಯರ್‌ ಗೌತಮ್‌ಕುಮಾರ್‌ ಅವರಿಗೆ ಬರೆದಿರುವ ಪತ್ರದ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಫ್‌ಕೆಸಿಸಿಐ ಅಧ್ಯಕ್ಷರಿಗೆ ಎರಡು ಪುಟಗಳ ಪತ್ರ ಬರೆದಿರುವ ಅವರು, ಭಾಷೆಯ ವಿಚಾರದಲ್ಲಿ ಕನ್ನಡಿಗರ ಅಸ್ಮಿತೆ ಧಕ್ಕೆ ಉಂಟು ಮಾಡುವ ಪ್ರವೃತ್ತಿ ಸಲ್ಲದು. ಎಫ್‌ಕೆಸಿಸಿಐ ತನ್ನ ವ್ಯಾಪ್ತಿಗೆ ಮೀರಿ ಉದ್ದಟತನದಿಂದ ಮಾತನಾಡುವುದು ಕನ್ನಡಿಗರು ಮತ್ತು ಕನ್ನಡ ಭಾಷೆಗೆ ಮಾಡುವ ಅವಮಾನ. ಎಫ್‌ಕೆಸಿಸಿಐ ನೀಡಿರುವ ಉಡಾಫೆ ಹೇಳಿಕೆ ಹಿಂಪಡೆದು ಕ್ಷಮೆ ಕೋರಬೇಕು. ಒಂದು ವಾರದಲ್ಲಿ ಈ ಕುರಿತು ಸೂಕ್ತ ವಿವರಣೆ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.