ಮುದ್ದೇಬಿಹಾಳ(ಜೂ.24): ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಉತ್ತಮ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿವೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ಬಿಜೆಪಿ ಸರ್ಕಾರದ ಧೋರಣೆ, ಆಡಳಿತ ವೈಫಲ್ಯವನ್ನು ಜನರ ಮನೆ ಮನೆ ತಲುಪಿಸುವಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಚೈತನ್ಯ ತುಂಬುವ ಮೂಲಕ ತಳಮಟ್ಟದಿಂದ ಪಕ್ಷ ಕಟ್ಟಿಬೆಳೆಸುವಲ್ಲಿ ಮುಖಂಡರು ಮುಂದಾಗಬೇಕು ಎಂದು ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ರಾಜು ಆಲಗೂರ ಕರೆ ನೀಡಿದರು.

ಪಟ್ಟಣದ ಹುಡ್ಕೋ ಬಡಾವಣೆಯಲ್ಲಿ ಮಾಜಿ ಸಚಿವ ಸಿ.ಎಸ್‌. ನಾಡಗೌಡ ಅವರ ನಿವಾಸದಲ್ಲಿ ಈಚೆಗೆ ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಡಿ.ಕೆ. ಶಿವಕುಮಾರ ಅವರ ಜು. 2ರಂದು ನಡೆಯುವ ಅಧಿಕಾರ ಪ್ರತಿಜ್ಞಾ ವಿಧಿ ಕಾರ್ಯಕ್ರಮದ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಮುಖಂಡರ ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ವಿಜಯಪುರ: ಎಣ್ಣೆ ಮತ್ತಲ್ಲಿ ಸಾಧುವಿನಿಂದ ಮತ್ತೊಬ್ಬ ಸಾಧುವಿನ ಬರ್ಬರ ಹತ್ಯೆ

ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಆಡಳತದಲ್ಲಿ ನಿರುದ್ಯೋಗ ಸಮಸ್ಯೆ ಎದುರಾಗಿರಲಿಲ್ಲ. ಗೃಹಪಯೋಗಿ ವಸ್ತುಗಳು ಸಾಮಾನ್ಯ ವರ್ಗದವರಿಗೆ ಅನುಕೂಲವಾಗುವ ರೀತಿಯಲ್ಲಿದ್ದವು. ಆದರೆ ಕೇವಲ 3 ರು. ಪೆಟ್ರೋಲ್‌ ದರ ಏರಿಸಿದ್ದರಿಂದ ಬಿಜೆಪಿಯವರು ಆರ್‌ಎಸ್‌ಎಸ್‌, ಭಜರಂಗದಳ ಸಂಘಟನೆಗಳು ದೇಶಾದ್ಯಂತ ಹೋರಾಟ ನಡೆಸಿದ್ದವು. ಆದರೇ ಈಗ ದೇಶದಲ್ಲಿ ನಿರುದ್ಯೋಗ ಸಮಸ್ಯೆ, ಆರ್ಥಿಕತೆ ಕುಸಿತಗೊಂಡಿದೆ. ಪೆಟ್ರೊಲ್‌, ಡಿಸೇಲ್‌ ಬೆಲೆ ಮತ್ತು ಗೃಹೋಪಯೋಗಿ ವಸ್ತುಗಳ ದರ ಗಗನಕ್ಕೇರಿದೆ. ಬಿಜೆಪಿ ಸರ್ಕಾರದ ದುರಾಡಳಿತ ಪ್ರಶ್ನಿಸಿ ಜನಸಾಮನ್ಯರಿಗೆ ನ್ಯಾಯ ಒದಗಿಸಲು ಕಾಂಗ್ರೆಸ್‌ ಪಕ್ಷ ಹೋರಾಟ ಮಾಡುವ ಪ್ರಯತ್ನಕ್ಕೆ ಪರವಾನಗಿ ನೀಡದಂತೆ ಸೂಚನೆ ನೀಡಿದೆ. ಅಲ್ಲದೇ ಹೋರಾಟ ನಡೆಯದಂತೆ ಷಡ್ಯಂತ್ರ ರೂಪಿಸುವ ಮೂಲಕ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವಂತೆ ಮಾಡಿದ್ದಾರೆ ಎಂದು ಗಂಭೀರ ಆರೋಪಿಸಿದರು.

ತಾಲೂಕಿನಲ್ಲಿ ಸೌಮ್ಯ ಹಾಗೂ ಸಜ್ಜನ ರಾಜಕಾರಿಣಿ ಮಾಜಿ ಸಚಿವ ಸಿ.ಎಸ್‌. ನಾಡಗೌಡರು 25 ವರ್ಷಗಳಿಂದ ಭ್ರಷ್ಟಾಚಾರದ ಆರೋಪವಿಲ್ಲದೆ ಉತ್ತಮ ಆಡಳಿತ ನಡೆಸಿದರೂ, ಬಿಜೆಪಿಯವರ ಅಬ್ಬರ ಪ್ರಚಾರ ಹಾಗೂ ಪೊಳ್ಳು ಆಶ್ವಾಸನೆಯಿಂದ ಯುವಕರನ್ನು ದಾರಿ ತಪ್ಪಸಿದ್ದರಿಂದ ಕೆಲವೆ ಮತಗಳ ಅಂತರದಿಂದ ಸೋಲುವಂತಾಯಿತು. ಆದರೆ ಈ ಬಾರಿ ಯುವ ಕಾರ್ಯಕರ್ತರಲ್ಲಿ ಚೈತನ್ಯ ತುಂಬಿ ಪಕ್ಷ ಸಂಘಟನೆ ಮೂಲಕ ಸಿ.ಎಸ್‌. ನಾಡಗೌಡರನ್ನು ಗೆಲ್ಲುವಂತೆ ಮಾಡಬೇಕಿದೆ ಎಂದರು.

ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ ಅವರ ಅಧಿಕಾರ ಪ್ರತಿಜ್ಞಾ ವಿಧಿ ಕಾರ್ಯಕ್ರಮ ಜುಲೈ 2ರಂದು ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ಎಲ್ಲ ಮುಖಂಡರು ಕಾರ್ಯಕರ್ತರು ಪ್ರತಿ ಗ್ರಾಪಂ, ಪಪಂ, ಪುರಸಭೆ ವ್ಯಾಪ್ತಿಗಳಲ್ಲಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕಾಂಗ್ರೆಸ್‌ ಪಕ್ಷ ಬಲವರ್ಧನೆಗಾಗಿ ಕೈಜೋಡಿಸಬೇಕು. ಹಿಂದಿನ ಕಾಂಗ್ರೆಸ್‌ ಸರ್ಕಾರದ ಉತ್ತಮ ಆಡಳಿತ ಹಾಗೂ ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ವೈಫಲ್ಯಗಳನ್ನು ಜನರಿಗೆ ತಿಳಿಸಬೇಕು ಎಂದು ಕರೆ ನೀಡಿದರು.

ತಾಳಿಕೋಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಜಿಲ್ಲಾ ಯೂಥ್‌ ಕಾಂಗ್ರೆಸ್‌ ಅಧ್ಯಕ್ಷ ಅಬ್ದೂಲ ಖಾದರ, ಜಿಲ್ಲಾ ಮುಖಂಡ ರಫೀಕ ಟಪಾಲ, ಯೂಥ್‌ ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ಚಿನ್ನು (ಧಣಿ) ನಾಡಗೌಡ, ಪುರಸಭೆ ಸದಸ್ಯರಾದ ಮೈಬೂಬ ಗೊಳಸಂಗಿ, ರಿಯಾಜಮ್ಮದ ಢವಳಗಿ, ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ, ಪಿಂಟು ಸಾಲಿಮನಿ, ಅನೀಲ ನಾಯಕ, ತಂಗಡಗಿ ಗ್ರಾಪಂ ಅಧ್ಯಕ್ಷ ಸಂಗಯ್ಯಾ ಸಾರಂಗಮಠ, ತಾಲೂಕು ಯೂಥ್‌ ಕಾಂಗ್ರೆಸ್‌ ಅಧ್ಯಕ್ಷ ರಫೀಕ ಶಿರೋಳ, ಸಚೀನ ಪಾಟೀಲ, ಪ್ರಶಾಂತ ತಾರನಾಳ, ಹುಸೇನ್‌ ಮುಲ್ಲಾ, ಶರಣು ಚಲವಾದಿ ಅನೇಕರಿದ್ದರು. ಲಕ್ಷ್ಮಣ ಲಮಾಣಿ ನಿರೂಪಿಸಿದರು. ಎಪಿಎಂಸಿ ಸದಸ್ಯ ವೈ.ಎಚ್‌. ವಿಜಯಕರ ಪ್ರಾಸ್ತಾವಿಕ ಮಾತನಾಡಿದರು.