ನಿಡಗುಂದಿ(ಜೂ.21): ಪಾನಮತ್ತರಾದ ಸಾಧುಗಳಿಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಒಬ್ಬ ಸಾಧುವಿನ ಹತ್ಯೆಯಲ್ಲಿ ಕೊನೆಗೊಂಡ ಘಟನೆ ವಿಜಯಪುರ ಜಿಲ್ಲೆಯ ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಜರುಗಿದೆ. ವಿಜಯಪುರದ ಯೋಗಪುರ ಕಾಲೋನಿಯ ಅರ್ಜುನ ಕುರಬರ(60) ಹತ್ಯೆಯಾದ ಸಾಧು. ಕಲಬುರಗಿ ಜಿಲ್ಲೆಯ ನೆಲೋಗಿ ಗ್ರಾಮದ ಚಂದ್ರಕಾಂತ ಹಡಪದ(55) ಹತ್ಯೆ ಮಾಡಿದ ಸಾಧು.

ಬ್ಯಾಲ್ಯಾಳ ಗ್ರಾಮದ ಅವ್ವಪ್ಪಮುತ್ಯಾನ ಮಠದಲ್ಲಿ ಕಳೆದ ಕೆಲ ದಿನಗಳಿಂದ ವಾಸವಾಗಿದ್ದ ಈ ಸಾಧುಗಳು ಗುರುವಾರ ರಾತ್ರಿ ಇಬ್ಬರೂ ಸೇರಿ ಸಾಕಷ್ಟು ಮದ್ಯ ಸೇವಿಸಿದ್ದಾರೆ. ನಂತರ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ. 

ಆಸ್ತಿಗಾಗಿ ಚಿಕ್ಕಪ್ಪನ ಜೊತೆ ಸೇರಿ ತಂದೆಯ ಕತ್ತು ಸೀಳಿದ ಪಾಪಿ ಮಗ..!

ಈ ಸಂದರ್ಭದಲ್ಲಿ ಕುಪಿತಗೊಂಡ ಚಂದ್ರಕಾಂತ ಎಂಬ ಸಾಧು ಕಾವಿಧಾರಿ ಅರ್ಜುನನಿಗೆ ಕುಡಗೋಲಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ಶುಕ್ರವಾರ ಬೆಳಗ್ಗೆ ಗ್ರಾಮಸ್ಥರು ಪೊಲೀಸರ ಗಮನಕ್ಕೆ ತಂದಾಗ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.