ಶಿಗ್ಗಾಂವಿ(ಏ.18): ತಾಲೂಕಿನ ರೈತರು ಬೆಳೆದ ತರಕಾರಿಗಳಿಗೆ ಲಾಕ್‌ಡೌನ್‌ ಘೋಷಣೆಯಾದ ದಿನದಿಂದ ಸೂಕ್ತವಾಗಿ ಸ್ಥಳೀಯ ಮಾರುಕಟ್ಟೆ ವ್ಯವಸ್ಥೆಯಿಲ್ಲದೇ ತರಕಾರಿ ಕೊಳೆಯುವ ಸ್ಥಿತಿ ತಲುಪಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಅಂತಹ ರೈತರ ತರಕಾರಿಯನ್ನು ಕ್ಷೇತ್ರದ ಶಾಸಕ, ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಖರೀದಿಸಿ ಜನತೆಗೆ ವಿತರಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಬಸಲಿಂಗಪ್ಪ ನರಗುಂದ ಮನವಿ ಮಾಡಿದ್ದಾರೆ.

ತಾಲೂಕಿನ ಬಿಸೆಟ್ಟಿಕೊಪ್ಪ ಸೇರಿದಂತೆ ವಿವಿಧ ಗ್ರಾಮಗಳ ತರಕಾರಿ ಬೆಳೆದ ರೈತರ ಜಮೀನುಗಳಿಗೆ ಶುಕ್ರವಾರ ಭೇಟಿ ನೀಡಿ ರೈತರೊಂದಿಗೆ ಸಂವಾದ ಮಾಡಿ ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ತಾಲೂಕಿನ 4 ಸಾವಿರ ಎಕರೆ ಹಸಿಮೆಳಸಿನಕಾಯಿ, 2 ರಿಂದ 3 ಸಾವಿರ ಎಕರೆಯಲ್ಲಿ ತರಕಾರಿ ಬೆಳೆಯಲಾಗಿದೆ. ಗೊಟಗೋಡಿ, ಕಾಮನಹಳ್ಳಿ, ಚಾಕಾಪುರ, ಕುರ್ಷಾಪುರ ಸೇರಿದಂತೆ ವಿವಿಧ ಗ್ರಾಮಗಳ ರೈತರು ಬೆಳೆದು ತರಕಾರಿ ಕಟಾವಿಗೆ ಬಂದು ಸಂಕಷ್ಟದಲ್ಲಿದ್ದಾರೆ. ಕೂಡಲೇ ಹರಾಜು ಪ್ರಕ್ರಿಯೇ ಮಾಡಬೇಕು, ಇಲ್ಲವಾದರೆ ಶಾಸಕರೆ ಖರೀದಿಸಿ ರೈತರಿಗೆ ನೆರವಾಗಬೇಕು ಎಂದು ಅಗ್ರಹಿಸಿದ್ದಾರೆ.

ಲಾಕ್‌ಡೌನ್‌ ಮಧ್ಯೆ ಕಾರ್ಮಿಕರಿಗೆ ಸಿಕ್ತು ಉದ್ಯೋಗ: ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಆಸರೆ

ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳು ರೈತರ ವ್ಯಾಪಾರ ವಹಿವಾಟು ನಡೆಸಲು ತೊಂದರೆ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಮಾರಾಟಕ್ಕೆ ಯಾವುದೇ ಮಾರುಕಟ್ಟೆವ್ಯವಸ್ಥೆ ಇಲ್ಲ. ಇದು ರೈತರನ್ನು ಮತ್ತಷ್ಟುಸಂಕಷ್ಟಕ್ಕೆ ನೂಕಿದೆ. ರೈತರು ತಾವು ಬೆಳೆದ ವಿವಿಧ ಬೆಳೆಗಳನ್ನು ತಾವೇ ನಾಶಮಾಡುತ್ತಾರೆ. ತಕ್ಷಣ ಸಚಿವರು ರೈತರ ನೆರವಿಗೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.
ಈ ವೇಳೆ ಬಿಸೆಟ್ಟಿ ಕೊಪ್ಪದ ರೈತ ನಿಂಗಪ್ಪ ಮಲ್ಲೂರ, ಬಸಲಿಂಗಪ್ಪ ಮಲ್ಲೂರ, ರೈತ ಮುಖಂಡರು ಇದ್ದರು.