ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಫೆ.24): ನಗರದಲ್ಲಿ ‘ಎ’ ಮತ್ತು ‘ಬಿ’ ಖಾತಾ ವ್ಯವಸ್ಥೆಗೆ ಇತಿಶ್ರೀ ಹಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಎಲ್ಲ ರೀತಿಯ ನಿವೇಶನಗಳಿಗೆ ಏಕೀಕೃತ ಖಾತಾ ವ್ಯವಸ್ಥೆ ಜಾರಿಗೆ ಸಿದ್ಧತೆ ಆರಂಭಗೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸರ್ಕಾರದ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ‘ಎ’ ಮತ್ತು ‘ಬಿ’ ಖಾತಾ ಎಂಬ ಉಲ್ಲೇಖವಿಲ್ಲ. ಆದರೆ, ಅಧಿಕಾರಿಗಳು ಕಾನೂನಾತ್ಮಕವಾಗಿರುವ ನಿವೇಶನಗಳನ್ನು ‘ಎ’ ಖಾತಾ ನಿವೇಶನಗಳು, ಅನಧಿಕೃತ ಲೇಔಟ್‌, ಕಂದಾಯ ನಿವೇಶನಗಳಿಗೆ ತಾತ್ಕಾಲಿಕವಾಗಿ ತೆರಿಗೆ ಸಂಗ್ರಹಿಸುವ ಒಂದೇ ಉದ್ದೇಶಕ್ಕೆ ‘ಬಿ’ ನೋಂದಣಿ (ಬಿ ಖಾತಾ) ಮಾಡುತ್ತಿದ್ದಾರೆ.

‘ಎ’ ಖಾತಾ ನಿವೇಶನಗಳಿಗೆ ಮಾತ್ರ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಹಾಗೂ ಬಿಬಿಎಂಪಿಯಿಂದ ಅಧಿಕೃತವಾಗಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡಲಾಗುತ್ತಿತ್ತು. ಇದು ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಅವಕಾಶ ನೀಡುತ್ತಿದ್ದು, ರಾತ್ರೋರಾತ್ರಿ ‘ಬಿ’ ಖಾತಾ ನಿವೇಶನಗಳು ‘ಎ’ ಖಾತಾ ನಿವೇಶನಗಳಗಾಗಿ ಪರಿವರ್ತನೆ ಮಾಡಲಾಗುತ್ತಿದೆ. ಇದರಿಂದ ಬಿಬಿಎಂಪಿ ಮತ್ತು ಸರ್ಕಾರ ಬರಬೇಕಾದ ಸುಧಾರಣ ಶುಲ್ಕ ಸೇರಿದಂತೆ ಇನ್ನಿತರೆ ಆದಾಯ ನಷ್ಟ ಉಂಟಾಗುತ್ತಿದೆ. ಹಾಗಾಗಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಎ ಖಾತಾ ಮತ್ತು ಬಿ ಖಾತಾ ಎಂದು ಅಧಿಕಾರಿಗಳು ರೂಪಿಸಿಕೊಂಡಿರುವ ವ್ಯವಸ್ಥೆಯನ್ನು ಅಂತ್ಯಗೊಳಿಸಿ ಏಕೀಕೃತ ಖಾತಾ ವ್ಯವಸ್ಥೆ ಜಾರಿಗೊಳಿಸುವುದಕ್ಕೆ ಕಂದಾಯ ಇಲಾಖೆ, ಬಿಬಿಎಂಪಿ ಮುಂದಾಗಿದೆ.
ಇದರಿಂದ ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟಿರುವ ಅನಧಿಕೃತ ಲೇಔಟ್‌ ಹಾಗೂ ಕಂದಾಯ ನಿವೇಶನಗಳಿಗೆ ತಾತ್ಕಾಲಿಕವಾಗಿ ತೆರಿಗೆ ಸಂಗ್ರಹಿಸುವ ಒಂದೇ ಉದ್ದೇಶಕ್ಕೆ ‘ಬಿ’ ನೋಂದಣಿಗೂ ಬಿಬಿಎಂಪಿ ನಕ್ಷೆ ಮಂಜೂರಾತಿ, ಸ್ವಾದೀನಾನುಭವ ಪ್ರಮಾಣ ಪತ್ರ, ಬ್ಯಾಂಕ್‌ ಸಾಲ ಸೌಲಭ್ಯಗಳು ದೊರೆಯಲಿದೆ.

ನಗರಗಳಲ್ಲಿ ಸೈಟ್‌ ಹಂಚಿಕೆ : ಬಡವರಿಗೆ ಭರ್ಜರಿ ಗುಡ್ ನ್ಯೂಸ್

ಸುಪ್ರೀಂ ಕೋರ್ಟ್‌ನ ಆದೇಶದನ್ವಯ ಖಾತಾ

ನಗರ ವ್ಯಾಪ್ತಿಗೆ ಸೇರ್ಪಡೆಗೊಂಡ ಕಂದಾಯ ನಿವೇಶನಗಳಿಗೆ ಭೂ ಬಳಕೆ ಪರಿವರ್ತನೆ ಅವಶ್ಯಕತೆ ಇಲ್ಲ ಎಂದು ಕೋರ್ಟ್‌ ಆದೇಶಗಳಿದ್ದು, ಈ ಆಧಾರದಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡ ಲೇಔಟ್‌ನ ನಿವೇಶನಗಳು ಹಾಗೂ ಕಂದಾಯ ನಿವೇಶನಗಳಿಗೆ ಅಧಿಕೃತ ಮಾನ್ಯತೆ ನೀಡಲು ಚಿಂತನೆ ನಡೆಸಲಾಗಿದೆ. ಹೇಗೆ ಅನುಷ್ಠಾನಗೊಳಿಸಬೇಕೆಂಬುದರ ಬಗ್ಗೆ ಬುಧವಾರ ಕಂದಾಯ ಇಲಾಖೆ ಸಚಿವರು, ಹಿರಿಯ ಅಧಿಕಾರಿಗಳು ಸಭೆ ನಡೆಸಲಾಗುತ್ತಿದೆ.

ನಿರ್ಮಾಣಗೊಂಡಿರುವ ಕಟ್ಟಡಕ್ಕೆ ಅನ್ವಯಿಸಲ್ಲ

ಈಗಾಗಲೇ ಕಂದಾಯ ನಿವೇಶನ ಮತ್ತು ಅನಧಿಕೃತ ಲೇಔಟ್‌ನಲ್ಲಿ ನಕ್ಷೆ ಮಂಜೂರಾತಿ ಪಡೆಯದೇ ನಿರ್ಮಾಣಗೊಂಡಿರುವ ಕಟ್ಟಡಗಳಿಗೆ ಸರ್ಕಾರವು ಹೊಸದಾಗಿ ರೂಪಿಸುತ್ತಿರುವ ನಿಯಮ ಅನ್ವಯ ಆಗುವುದಿಲ್ಲ. ಅದು ಅಕ್ರಮ-ಸಕ್ರಮದಡಿ ಪರಿಹಾರ ಮಾಡಿಕೊಳ್ಳಬೇಕಿದೆ. ಈ ಬಗ್ಗೆ ಸುಪ್ರಿಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡಗಳ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ಸಿಎಂ ಆದೇಶಕ್ಕೂ ಡೋಂಟ್‌ ಕೇರ್‌: ಬಿಡಿಎ ಸಗಟು ಸೈಟ್‌ ಹಂಚಿಕೆಗೆ ತರಾತುರಿ

110 ಹಳ್ಳಿಗಳಿಗೆ ಹೆಚ್ಚಿನ ಲಾಭ

2006-07ರಲ್ಲಿ ಏಳು ಪುರಸಭೆ, ಒಂದು ನಗರ ಸಭೆಗಳು ಹಾಗೂ 110 ಗ್ರಾಮಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಯಿತು. ಈ ಮೂಲಕ ಪಾಲಿಕೆ ವ್ಯಾಪ್ತಿಯನ್ನು 800 ಚ.ಕಿ.ಮೀಗೆ ಹೆಚ್ಚಿಸಲಾಯಿತು. ಈ ವೇಳೆ ಲಕ್ಷಾಂತರ ಎಕರೆ ಕೃಷಿ ಭೂಮಿ, ಅನಧಿಕೃತ ಲೇಔಟ್‌ಗಳು ಬಿಬಿಎಂಪಿ ವ್ಯಾಪ್ತಿಗೆ ಸೇರಿಕೊಂಡವು. ಈ ಪ್ರದೇಶಗಳಲ್ಲಿ ನಿವೇಶನ ಖರೀದಿ ಮಾಡಿದವರಿಗೆ ಅನುಕೂಲವಾಗಲಿದೆ.

ನಕ್ಷೆ ಇಲ್ಲದೆ ನಿರ್ಮಾಣಕ್ಕೆ ತಡೆ:

ಕಂದಾಯ ನಿವೇಶನ ಹಾಗೂ ಅನಧಿಕೃತ ಲೇಔಟ್‌ನಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅನಧಿಕೃತ ಮತ್ತು ನಕ್ಷೆ ಮಂಜೂರಾತಿ ಪಡೆಯದೇ ನಿರ್ಮಾಣಗೊಳ್ಳುತ್ತಿರುವ ಕಟ್ಟಡ ನಿರ್ಮಾಣಕ್ಕೆ ಬ್ರೇಕ್‌ ಹಾಕುವುದಕ್ಕೆ ಸಹಕಾರಿ ಆಗಲಿದೆ.
ಎ ಖಾತಾ ಮತ್ತು ಬಿ ಖಾತಾ ವ್ಯವಸ್ಥೆಗೆ ತಾರ್ಕಿಕ ಅಂತ್ಯ ಹಾಡುವುದಕ್ಕೆ ಚಿಂತಿಸಲಾಗಿದೆ. ಆದಾಯ ಸಂಗ್ರಹಕ್ಕಿಂತ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದು ಮತ್ತು ನಗರದ ಸುಸ್ಥಿರ ಬೆಳವಣಿಗೆಗೆ ಕ್ರಮ ಕೈಗೊಳ್ಳುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.