ಬೆಂಗಳೂರು (ಫೆ.16):  ನಗರಾಭಿವೃದ್ಧಿ ಪ್ರಾಧಿಕಾರಗಳ ನಿವೇಶನಗಳ ಹಂಚಿಕೆ ಅಧಿನಿಯಮ-1991ಕ್ಕೆ ತಿದ್ದುಪಡಿ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದ್ದು ‘ಇತರೆ ಹಿಂದುಳಿದ ವರ್ಗ’ ಬದಲಿಗೆ ‘ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗ’ ಎಂಬ ಪರ್ಯಾಯ ಪದ ಬಳಕೆ ಮಾಡುವ ಜೊತೆಗೆ ನಿವೇಶನಗಳ ಹಂಚಿಕೆ ಮೀಸಲಾತಿ ವರ್ಗೀಕರಣವನ್ನು ಪರಿಷ್ಕರಿಸಿ ಆದೇಶಿಸಿದೆ.

ಇತರೆ ಹಿಂದುಳಿದ ವರ್ಗ ಎಂಬ ಪದವನ್ನು ‘ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗ’ ಎಂದು ಪರಿಗಣಿಸಬೇಕು. ರಾಜ್ಯ ಸರ್ಕಾರ ಆಗಿಂದಾಗ್ಗೆ ಪರಿಷ್ಕರಿಸಿ ಅಧಿಸೂಚನೆ ಹೊರಡಿಸುವ ಆರ್ಥಿಕ ಮಿತಿಯೊಳಗಿನ ವರಮಾನವುಳ್ಳವರನ್ನು ಆರ್ಥಿಕ ಹಿಂದುಳಿದ ದುರ್ಬಲ ವರ್ಗದ ಫಲಾನುಭವಿಗಳನ್ನಾಗಿ ಗುರುತಿಸಬೇಕು ಎಂದು ಸೂಚಿಸಲಾಗಿದೆ.

ಸಿಎಂ ಆದೇಶಕ್ಕೂ ಡೋಂಟ್‌ ಕೇರ್‌: ಬಿಡಿಎ ಸಗಟು ಸೈಟ್‌ ಹಂಚಿಕೆಗೆ ತರಾತುರಿ ...

ಇಂತಹ ಆರ್ಥಿಕ ಹಿಂದುಳಿದ ದುರ್ಬಲ ವರ್ಗಕ್ಕೆ ಶೇ.10ರಷ್ಟುಮೀಸಲಾತಿ ಕಲ್ಪಿಸಬೇಕು. ಇದರಲ್ಲಿ ಶೇ.2ರಷ್ಟನ್ನು ಪ್ರವರ್ಗ 1ಕ್ಕೆ ಮೀಸಲಿಡಬೇಕು. ಉಳಿದಂತೆ ಪರಿಶಿಷ್ಟಪಂಗಡಗಳಿಗೆ ಶೇ.3, ಪರಿಶಿಷ್ಟಜಾತಿಗೆ ಶೇ.15, ಮಾಜಿ ಸೈನಿಕರು, ಮೃತ ಸೈನಿಕರ ಕುಟುಂಬ ಹಾಗೂ ಕೇಂದ್ರ ಶಸ್ತ್ರಪಡೆಯ ಸದಸ್ಯರಿಗೆ ಶೇ.5, ರಾಜ್ಯ ಸರ್ಕಾರ ಸಾರ್ವಜನಿಕ ವಲಯ ಉದ್ದಿಮೆಗಳ ನೌಕರರಿಗೆ ಶೇ.7, ಕೇಂದ್ರ ಸರ್ಕಾರ ಸಾರ್ವಜನಿಕ ವಲಯ ಉದ್ದಿಮೆಗಳ ನೌಕರರಿಗೆ ಶೇ.2, ಸಾರ್ವಜನಿಕರಿಗೆ (ಸಾಮಾನ್ಯವರ್ಗ) ಶೇ.50ರಷ್ಟುಮೀಸಲಾಗಿ ಕಲ್ಪಿಸಬೇಕು.

ಉಳಿದಂತೆ ರಾಜ್ಯದ ಪತ್ರಕರ್ತರು, ಕಲೆ, ವಿಜ್ಞಾನ, ಕ್ರೀಡೆ ಅಥವಾ ಇನ್ನ್ಯಾವುದೇ ಕ್ಷೇತ್ರಗಳಲ್ಲಿ ಶ್ಲಾಘನೀಯ ಸಾಧನೆ ಮಾಡಿರುವ ವ್ಯಕ್ತಿಗಳಿಗೆ ಶೇ.5, ಅಂಗವಿಕಲರಿಗೆ ಶೇ.3ರಷ್ಟುಸೇರಿ ಒಟ್ಟು ಶೇ.100ರಷ್ಟುನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಹೇಳಲಾಗಿದೆ.