ತುಮಕೂರು(ಜೂ.25): ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಕೋವಿಡ್‌-19 ಸೋಂಕು ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕೋವಿಡ್‌ ಹೆಲ್ತ್ ಸೆಂಟರ್‌ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ ರಾಕೇಶ್‌ ಕುಮಾರ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಜಿಲ್ಲಾ ಕೇಂದ್ರದಲ್ಲಿ ಒಂದು ಸಾವಿರ ಬೆಡ್‌ಗಳ ಜಿಲ್ಲಾ ಕೋವಿಡ್‌ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ. ಇದರ ಜೊತೆಗೆ ಎರಡು ಖಾಸಗಿ ಮೆಡಿಕಲ್ ಕಾಲೇಜುಗಳನ್ನು ತೆಗೆದುಕೊಂಡು ಜಿಲ್ಲಾ ಕೇಂದ್ರದಲ್ಲಿ 1200 ಜನರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ವಿಜಯಪುರ: ಮತ್ತೆ ನಾಲ್ವರಿಗೆ ಅಂಟಿದ ಮಹಾಮಾರಿ ಕೊರೋನಾ ವೈರಸ್

ಉಳಿದ ಎಲ್ಲ ತಾಲೂಕು ಕೇಂದ್ರಗಳಲ್ಲಿ ತಲಾ 50 ಹಾಸಿಗೆಗಳ ಕೋವಿಡ್‌ ಹೆಲ್ತ್‌ ಸೆಂಟರ್‌ ತೆರೆಯಲಾಗುವುದು, ಸಿರಾದಲ್ಲಿ ಹೊಸ ಆಸ್ಪತ್ರೆಯನ್ನು ಬಳಸಿಕೊಳ್ಳಲಾಗುತ್ತಿದೆ, ಪಾವಗಡದಲ್ಲಿ ಶೀಘ್ರವಾಗಿ ಆಗಲಿದೆ. ಮುಂದಿನ 15 ದಿನಗಳಲ್ಲಿ ತಾಲೂಕು ಕೇಂದ್ರಗಳಲ್ಲಿಯೇ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು, ಕೊರೋನಾ ಲಕ್ಷಣಗಳಾದ ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆಯಿದ್ದರೆ ನಿರ್ಲಕ್ಷ್ಯಿಸದೇ ಪರೀಕ್ಷೆಗೊಳಪಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ವಿಜಯಪುರ: ಮತ್ತೆ ಒಂದೇ ದಿನ 16 ಕೊರೋನಾ ಪಾಸಿಟಿವ್‌ ಕೇಸ್‌

ಜಿಲ್ಲೆಯಲ್ಲಿ ಪ್ರಸ್ತುತ 57 ಕೊರೋನಾ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಚಿಕ್ಕನಾಯಕನಹಳ್ಳಿ-2, ಗುಬ್ಬಿ-3, ಕೊರಟಗೆರೆ-1, ಕುಣಿಗಲ್‌-1, ಮಧುಗಿರಿ-4, ಪಾವಗಡ-5, ಶಿರಾ-15, ತಿಪಟೂರು-3, ತುಮಕೂರು-19, ತುರುವೇಕೆರೆ-4 ಇದರಲ್ಲಿ ಹೊರ ರಾಜ್ಯ, ಜಿಲ್ಲೆಗಳಿಂದ ಬಂದವರಿಂದಲೇ ಪ್ರಕರಣಗಳು ಹೆಚ್ಚಾಗಿವೆ ಎಂದರಲ್ಲದೇ, ಈವರೆಗೂ 15440 ಪ್ರಕರಣಗಳನ್ನು ಪರೀಕ್ಷೆಗೊಳಪಡಿಸಿದ್ದು, 14232 ಪ್ರಕರಣಗಳು ನೆಗೆಟಿವ್‌ ಬಂದಿವೆ. ಈ ಪೈಕಿ 963 ಜನರ ಗಂಟಲು ದ್ರವ ಮಾದರಿ ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆಯರು ಮನೆಮನೆಗೆ ಈಗಾಗಲೇ ಮೂರ್ನಾಲ್ಕು ಬಾರಿ ತೆರಳಿ ಆರೋಗ್ಯ ಪರೀಕ್ಷೆ ನಡೆಸಿದ್ದಾರೆ. ಕ್ವಾರಂಟೈನ್‌ ಕೇಂದ್ರಗಳು ಹಾಗೂ ಕೋವಿಡ್‌ ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಆಹಾರ ಒದಗಿಸುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದ್ದೇನೆ. ಅಲ್ಲದೇ, ಈ ಬಗ್ಗೆ ನಿಗಾವಹಿಸುವಂತೆ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್‌ಗಳಿಗೂ ನಿರ್ದೇಶನ ನೀಡಿದ್ದೇನೆ ಎಂದರು.

ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಮೊದಲ ಕೇಸ್‌ ಪತ್ತೆ

ಈ ಸಂದರ್ಭದಲ್ಲಿ ಜಿಪಂ ಸಿಇಒ ಶುಭಾಕಲ್ಯಾಣ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಕೊನ ವಂಶಿಕೃಷ್ಣ, ಡಿಎಚ್‌ಒ ಡಾ.ನಾಗೇಂದ್ರಪ್ಪ, ಡಿಎಸ್‌ ಡಾ. ವೀರಭದ್ರಯ್ಯ ಮತ್ತಿತರರು ಹಾಜರಿದ್ದರು.