ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಮೊದಲ ಕೇಸ್ ಪತ್ತೆ
ಕಾಫಿನಾಡು ಚಿಕ್ಕಮಗಳೂರು ಜಿಲ್ಲಾ ಕೇಂದ್ರಕ್ಕೆ ಕೊರೋನಾ ಸೋಂಕು ವಕ್ಕರಿಸಿದೆ. ಬೆಂಗಳೂರಿನಿಂದ ಬಂದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚಿಕ್ಕಮಗಳೂರು(ಜೂ.25): ಜಿಲ್ಲೆಯ ವಿವಿಧೆಡೆ ಈಗಾಗಲೇ ಆತಂಕ ಮೂಡಿಸಿರುವ ಕೊರೋನಾ ಸೋಂಕು ಬುಧವಾರ ಜಿಲ್ಲಾ ಕೇಂದ್ರ ಚಿಕ್ಕಮಗಳೂರಿಗೂ ಕಾಲಿಟ್ಟಿದೆ. ಇಲ್ಲಿನ ಕೋಟೆ ಬಡಾವಣೆಯ 28 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವ್ಯಕ್ತಿ ವಾಸವಾಗಿರುವ ಕೋಟೆ ಬಡಾವಣೆಯಲ್ಲಿ ಸದ್ಯ ಸೀಲ್‌ಡೌನ್ ಮಾಡಲಾಗಿದೆ. ಆತ ಚಿಕಿತ್ಸೆಗಾಗಿ ತೆರಳಿದ್ದ ಖಾಸಗಿ ಆಸ್ಪತ್ರೆ ಸುರಕ್ಷತೆ ದೃಷ್ಟಿಯಿಂದ ಲಾಕ್‌ಡೌನ್ ಮಾಡಲಾಗಿದೆ.
ಬೆಂಗಳೂರಿನಲ್ಲಿ ವಾಸವಾಗಿರುವ ಈ ವ್ಯಕ್ತಿ ಚಿಕ್ಕಮಗಳೂರಿಗೆ ಬಂದಿದ್ದು, ಅವರಲ್ಲಿ ಜೂ.18ರಂದು ಜ್ವರ ಕಾಣಿಸಿಕೊಂಡಿದ್ದರಿಂದ ಮನೆಯಿಂದ ಎಲ್ಲೂ ಹೊರಗೆ ಹೋಗದೆ ಸ್ವಯಂಪ್ರೇರಿತ ಕ್ವಾರಂಟೈನ್‌ನಲ್ಲಿದ್ದರು. ಜ್ವರ ನಿಯಂತ್ರಣಕ್ಕೆ ಬರದೆ ಇದ್ದರಿಂದ ಇಲ್ಲಿನ ಬೇಲ್ಟ್ ರಸ್ತೆಯಲ್ಲಿರುವ ಅನುರಾಧ ಖಾಸಗಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಮನೆಗೆ ವಾಪಸ್ ಹೋಗಿದ್ದಾರೆ. ಆದರೂ, ಜ್ವರ ಕಡಿಮೆಯಾಗದೆ ಇದ್ದರಿಂದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಾಗ ಸೋಂಕಿನ ಲಕ್ಷಣ ಇದ್ದಿದ್ದರಿಂದ ಕೂಡಲೇ ಒಳ ರೋಗಿಯಾಗಿ ದಾಖಲಿಸಿಕೊಂಡು ಗಂಟಲ ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ಬುಧವಾರ ದೃಢಪಟ್ಟಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಆ ವ್ಯಕ್ತಿ ವಾಸವಾಗಿರುವ ಕೋಟೆ ಬಡಾವಣೆಯ ನಿವಾಸದ ಸುತ್ತಾಮುತ್ತಾ ಸೀಲ್‌ಡೌನ್ ಮಾಡಲಾಗಿದೆ. ಜತೆಗೆ ಆತ ಚಿಕಿತ್ಸೆ ಪಡೆದ ಖಾಸಗಿ ಆಸ್ಪತ್ರೆಯನ್ನೂ ಲಾಕ್‌ಡೌನ್ ಮಾಡಿ ವೈದ್ಯರು ಸ್ವತಃ ಹೋಂ ಕ್ವಾರೆಂಟೈನ್ ಆಗಿದ್ದಾರೆ.
ಕೊರೋನಾ ಭೀತಿ ನಡುವೆ ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ
ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ವ್ಯಕ್ತಿಗಳ ಪೈಕಿ 4 ಮಂದಿ ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಬುಧವಾರ ಬಿಡುಗಡೆಗೊಳಿಸಲಾಗಿದೆ. ಇನ್ನು 21 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿದ್ದಂತೆ ಜನರಲ್ಲಿ ಆತಂಕ ಹೆಚ್ಚಾಗಿದೆ. ನಗರದಲ್ಲಿ ಬೆಳಗ್ಗೆಯಿಂದಲೇ ಈ ವಿಷಯ ಹರಿದಾಡುತ್ತಿದ್ದು, ಸಂಜೆ 8 ಗಂಟೆಗೆ ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಒಬ್ಬರಲ್ಲಿ ಕೊರೋನಾ ಸೋಂಕಿರುವುದು ಖಚಿತಪಡಿಸಿತು.
ವೈದ್ಯಗೆ ಸೋಂಕು- 37 ಸಿಬ್ಬಂದಿ ಕ್ವಾರಂಟೈನ್: ಕಡೂರು ತಾಲೂಕಿನ ಚೌಳ ಹಿರಿಯೂರು ಆಸ್ಪತ್ರೆ ವೈದ್ಯಾಧಿಕಾರಿಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಬುಧವಾರ 37 ವೈದ್ಯ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಆಸ್ಪತ್ರೆ ವೈದ್ಯರಿಗೆ ಮಂಗಳವಾರವಷ್ಟೇ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರೊಂದಿಗೆ ಕರ್ತವ್ಯ ನಿರ್ವಹಿಸಿದ ತಾಲೂಕಿನ ಆರೋಗ್ಯ ಸಿಬ್ಬಂದಿ ಹಾಗೂ ರೋಗಿಗಳು ಸೇರಿ 37 ಜನರನ್ನು ಯಗಟಿ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಿ, ಅವರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳಿಸಲಾಗಿದೆ. ಸದ್ಯ ಸೋಂಕಿತ ವೈದ್ಯರು ಚಿತ್ರದುರ್ಗ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ರವಿಕುಮಾರ್ ಮತ್ತು ಸಿಬ್ಬಂದಿ ಅವರು ಕಾರ್ಯನಿರ್ವಹಿಸುತ್ತಿದ್ದ ಚೌಳ ಹಿರಿಯೂರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ವೈದ್ಯರ ಟ್ರಾವೆಲ್ ಹಿಸ್ಟರಿ ಆಧರಿಸಿ ಸಂಪರ್ಕಿತರ ಪತ್ತೆ ಕಾರ್ಯ ಮುಂದುವರೆದಿದೆ.