Asianet Suvarna News Asianet Suvarna News

Mandya : ಕುಂಭಮೇಳ ಅರ್ಥಪೂರ್ಣ ಆಚರಣೆಗೆ ಸಿದ್ಧತೆ

ತಾಲೂಕಿನ ಅಂಬಿಗರಹಳ್ಳಿ-ಪುರ- ಸಂಗಾಪುರ ಗ್ರಾಮಗಳ ಕಾವೇರಿ ನದಿ ಪಾತ್ರದಲ್ಲಿ ಅ.13ರಿಂದ 16 ರವರೆ

Preparation for the meaningful celebration of Kumbh Mela in Mandya snr
Author
First Published Oct 12, 2022, 4:58 AM IST

  ಕೆ.ಆರ್‌.ಪೇಟೆ (ಅ.12): ತಾಲೂಕಿನ ಅಂಬಿಗರಹಳ್ಳಿ-ಪುರ- ಸಂಗಾಪುರ ಗ್ರಾಮಗಳ ಕಾವೇರಿ ನದಿ ಪಾತ್ರದಲ್ಲಿ ಅ.13ರಿಂದ 16 ರವರೆಗೆ ಅರ್ಥಪೂರ್ಣವಾಗಿ ಕುಂಭಮೇಳ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಕೆ.ಸಿ ನಾರಾಯಣಗೌಡ ಹೇಳಿದರು.

ಸೋಮವಾರ ತಾಲೂಕಿನ ಶ್ರೀಭೂ ವರಹನಾಥ ಸ್ವಾಮಿ ದೇವಸ್ಥಾನದ (Temple) ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, (ZP)  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ಆಯೋಜಿಸಲಾಗಿದ್ದ ಜಲ ಸಾಹಸ ಕ್ರೀಡಾ ಚಟುವಟಿಕೆಗೆ ಚಾಲನೆ ನೀಡಿ ಮಾತನಾಡಿದರು.

ದಕ್ಷಿಣ ಕರ್ನಾಟಕದಲ್ಲಿ (South Karnataka)  ಮಹಾ ಕುಂಭಮೇಳ (Kumba Mela ) ಮಾಡಬೇಕು ಎನ್ನುವುದನ್ನು ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ಮಹಾಸ್ವಾಮಿ, ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳ ಸಮುಖದಲ್ಲಿ ಸಭೆ ನಡೆಸಿ ತೀರ್ಮಾನಿಸಲಾಯಿತು. ಮಹಾ ಕುಂಭ ಮೇಳವನ್ನು ಯಶಸ್ವಿಯಾಗಿ ಆಚರಣೆ ಮಾಡಲು ಎಲ್ಲರಿಂದಲೂ ಸಹಕಾರ ಹೆಚ್ಚಿನ ರೀತಿಯಲ್ಲಿ ದೊರೆಯುತ್ತಿದೆ ಎಂದರು.

ವಾರಾಣಸಿಗೆ ಹೋದ ಸಂದರ್ಭದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಕುಂಭಮೇಳ ಆಚರಿಸುವ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ತಿಳಿಸಿದಾಗ ಅವರು ಭಾಗವಹಿಸುವುದಾಗಿ ತುಂಬು ಹೃದಯದಿಂದ ತಿಳಿಸಿದ್ದಾರೆ ಎಂದರು.

ಕುಂಭಮೇಳ ಆಯೋಜನೆ ಸಂಬಂಧ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಗಿದ್ದು, ದಾನಿಗಳು ಈಗಾಗಲೇ 600 ಕ್ವಿಂಟಲ್‌ ಅಕ್ಕಿ, 25000 ತೆಂಗಿನಕಾಯಿ ಸೇರಿದಂತೆ ಎಣ್ಣೆ, ತುಪ್ಪ, ತರಕಾರಿ ಇನ್ನಿತರೆ ಆಹಾರ ಪದಾರ್ಥಗಳನ್ನು ಸಹ ನೀಡಿದ್ದಾರೆ ಎಂದರು.

ಮಹಾಕುಂಭ ಮೇಳವನ್ನು ಆಚರಣೆ ಕುರಿತು ಮುಖ್ಯಮಂತ್ರಿಗಳಿಗೆ ತಿಳಿಸಿದಾಗ ಬಹಳ ಖುಷಿಯಿಂದ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡರು. ಅ.14 ರಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಚಾಲನೆ ನೀಡಲಿದ್ದಾರೆ. ಅ.15 ರಂದು ಸಾಧು, ಸಂತರ ಸಂಗಮ ನಡೆಯಲಿದೆ. ಅ.16ರಂದು ಕುಂಭ ಸ್ನಾನ, ವೇದಿಕೆ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಕುಂಭಮೇಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಕುಂಭಸ್ನಾನ, ಸಾಧುಸಂತರ ಸಮಾವೇಶ, ವೇದಿಕೆ ಕಾರ್ಯಕ್ರಮ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಚಂದ್ರವನ ಆಶ್ರಮದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಬಹಳಷ್ಟುಸ್ಥಳಗಳಲ್ಲಿ ಗುಪ್ತಗಾಮಿನಿಯಂತೆ ತ್ರಿವೇಣಿ ಸಂಗಮಗಳಿವೆ. ಆದರೆ, ಅಂಬಿಗರಹಳ್ಳಿಯಲ್ಲಿ ಮೂರು ನದಿಗಳು ಸೇರುವುದನ್ನು ನೋಡಬಹುದು. ಶ್ರೀಸಂಗಮೇಶ್ವರರು ಈ ಸ್ಥಳದಲ್ಲಿ ತಪಸ್ಸು ಮಾಡಿದ್ದಾರೆ. ಶ್ರೀಸಿದ್ಧಲಿಂಗೇಶ್ವರ ಯತಿಗಳು ಹಾಗೂ ಶ್ರೀಮಹದೇಶ್ವರರು ಬಂದು ಹೋಗಿರುವ ಪವಿತ್ರ ಸ್ಥಳವಿದು ಎಂದು ನುಡಿದರು.

2013ರಲ್ಲಿ ಸಣ್ಣ ಪ್ರಮಾಣದಲ್ಲಿ ಕುಂಭ ಮೇಳ ನಡೆಸಲಾಗಿತ್ತು. ಈ ಬಾರಿ ವಿಜೃಂಭಣೆಯಿಂದ ಆಚರಿಸಿ ದೇಶಕ್ಕೆ ತ್ರಿವೇಣಿ ಸಂಗಮವನ್ನು ಪರಿಚಯಿಸಲಾಗುತ್ತಿದೆ. ಕುಂಭ ಇಡುವುದಕ್ಕೆ ಕುಂಭೇಶ್ವರ ಎಂದು ಕರೆಯಲಾಗುತ್ತದೆ. ವಿವಿಧ ಕಡೆಯಿಂದ ಸಾಧು-ಸಂತರರು ಬಹಳಷ್ಟುಜನ ಬರುತ್ತಿದ್ದಾರೆ. ಈ ಭಾಗದಲ್ಲಿ ಎಲ್ಲ ಸಾಧು-ಸಂತರಿಗೆ ಆಹ್ವಾನ ನೀಡಲಾಗಿದೆ ಎಂದರು.

ಕುಂಭದ ಶಕ್ತಿಯನ್ನು ವಿಸರ್ಜನೆ ಮಾಡಿ ನಾಡಿಗಾಗಿ, ದೇಶಕ್ಕಾಗಿ, ವಿಶ್ವದ ಸುಖ, ಶಾಂತಿ ಸಮೃದ್ಧಿಯಾಗಲಿ ಎಂಬುವುದೇ ಇದರ ಉದ್ದೇಶ ಇಟ್ಟುಕೊಂಡು ಮಾಡಲಾಗುತ್ತಿದೆ. ಅ.14 ರಂದು ಸಂಜೆಯಿಂದ ಅ.15, 16ರ ಬೆಳಗ್ಗೆಯವರೆಗೂ ಕುಂಭಮೇಳ ಸಂಬಂಧಪಟ್ಟಂತೆ ಕಳಸ ಪೂಜೆಗಳು, ಹೋಮಗಳು ಮತ್ತು ಪ್ರತಿಯೊಂದು ಪೂಜೆಗಳನ್ನು ಮಾಡುವಂತಹ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಜಿಲ್ಲಾಧಿಕಾರಿ ಎಸ್‌.ಅಶ್ವತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌, ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಸೀಲ್ದಾರ್‌ ರೂಪಾ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. 

Follow Us:
Download App:
  • android
  • ios