ಬೆಳ್ತಂಗಡಿ(ಜೂ.06): ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಜೂ. 8ರಿಂದ ಮಾಡಿಕೊಡಲಾಗುವುದೆಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿತಿಳಿಸಿದ್ದಾರೆ.

ದೇವರ ದರ್ಶನಕ್ಕೆ ಧರ್ಮಸ್ಥಳದ ದೇವಳದ ಅನ್ನಪೂರ್ಣ ಭೋಜನ ಮಂದಿರದಲ್ಲಿ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ದೇವಸ್ಥಾನದ ಒಳ ಪ್ರವೇಶ ಮಾಡುವವರು ಮುಖಕ್ಕೆ ಮಾಸ್ಕ್ ಧರಿಸಿರಬೇಕು, ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಬೇಕು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು, ಕೈಗೆ ಸ್ಯಾನಿಟೈಸರ್‌ ಹಾಕಿಸಿಕೊಳ್ಳಬೇಕು.

8ರಿಂದ ಕುಕ್ಕೆ ಸುಬ್ರಮಣ್ಯ ದೇಗುಲದಲ್ಲಿ ಭಕ್ತರಿಗೆ ದರ್ಶನ ವ್ಯವಸ್ಥೆ

ಅರ್ಚಕ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ, ಸ್ವಯಂ ಸೇವಕರು ಕೈಗೊಳ್ಳಬೇಕಾದ ಕ್ರಮಗಳನ್ನು ವಿಮರ್ಶಿಸಿ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಅದೇ ರೀತಿ ಅನ್ನಪೂರ್ಣ ಭೋಜನಾಲಯದಲ್ಲಿ ಭೋಜನಕ್ಕೆ ಬರುವವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ತಮ್ಮ ಆರೋಗ್ಯವನ್ನು ಪರಿಶೀಲಿಸಿಕೊಳ್ಳುವರೇ ಕೋರಿದೆ. ಜ್ವರ, ಕೆಮ್ಮು ಮುಂತಾದ ಅನಾರೋಗ್ಯ ಸ್ಥಿತಿಯಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡಲು ಸಾಧ್ಯವಾಗುವುದಿಲ್ಲ. ಭಕ್ತಾದಿಗಳು ದೇವಸ್ಥಾನದ ಆಡಳಿತದ ಜೊತೆಯಲ್ಲಿ ಸಹಕಾರ ನೀಡಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

ಧಾರ್ಮಿಕ ಕೇಂದ್ರ ತೆರೆಯುವ ನಿರ್ಧಾರ ಸರಿ: ಹೆಗ್ಗಡೆ

ಧಾರ್ಮಿಕ ಕೇಂದ್ರಗಳನ್ನು ತೆರೆಯುವ ಸರ್ಕಾರದ ತೀರ್ಮಾನ ಸರಿಯಾಗಿದೆ. ಆದರೆ ಜನರಲ್ಲಿ ಸ್ವಯಂ ನಿಯಂತ್ರಣ ಅಗತ್ಯ. ಸರ್ಕಾರದ ಮಾರ್ಗಸೂಚಿಗಳನ್ನು ದೇವಾಲಯಗಳು ಪಾಲಿಸಲಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಶುಕ್ರವಾರ ಸುವರ್ಣನ್ಯೂಸ್‌ನ ನೇರಪ್ರಸಾರ ಸಂದರ್ಶನದಲ್ಲಿ ಮಾತನಾಡಿದ ಅವರು, ಮೂರು ತಿಂಗಳಿಂದ ಜನರಿಗೆ ಮನೆಯಲ್ಲೇ ಕೂತು ದೇವರ ದರ್ಶನ ಮಾಡಬೇಕು ಅನ್ನುವ ಆಸೆ ಹುಟ್ಟಿರುತ್ತದೆ. ಕೆಲವರು ಹರಕೆ ಹೊತ್ತುಕೊಂಡಿರುತ್ತಾರೆ. ಹಾಗಾಗಿ ಜೂ. 8ರಿಂದ ಲಾಕ್‌ಡೌನ್‌ ಸಡಿಲಿಕೆ ಮಾಡುತ್ತಿರುವುದು ಒಳ್ಳೆಯದು. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದರು.

ಗ್ರೀನ್ ಝೋನ್ ಆಗಿದ್ದ ಉಡುಪಿಯಲ್ಲಿ ಮುಂದುವರಿದ ಕೊರೋನಾ ಅಟ್ಟಹಾಸ: ಒಂದೇ ದಿನ 204 ಸೋಂಕಿತರು

ವಿದೇಶದಿಂದ ಹಾಗೂ ಮಹಾರಾಷ್ಟ್ರದಿಂದ ಬಂದವರಿಂದ ಸೋಂಕು ಹರಡಿದೆಯೇ ಹೊರತು ಹಳ್ಳಿಗಳಲ್ಲಿ ಅಂಥ ಅಪಾಯ ಇಲ್ಲ. ಮಹಾರಾಷ್ಟ್ರದಿಂದ ವಾಪಾಸಾಗುತ್ತಿರುವವರು ಇನ್ನು ಆರು ತಿಂಗಳು ಊರಿಗೆ ಮರಳದಿರುವುದೇ ಒಳಿತು. ನಿಧಾನವಾಗಿ ಲಾಕ್‌ಡೌನ್‌ ಸಡಿಲಿಕೆ ಮಾಡುವುದು ಒಳ್ಳೆಯದು. ಆದರೆ, ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಕೃಷಿಕರು, ಕೂಲಿಕಾರರು, ವ್ಯವಹಾರಸ್ಥರು ಅಪಾಯದಲ್ಲಿದ್ದಾರೆ. ಬದುಕು ಮುಖ್ಯ. ಹಾಗಾಗಿ ಕೊರೋನಾದ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸಹಜಸ್ಥಿತಿಗೆ ಮರಳಬೇಕು ಎಂದು ಹೇಳಿದರು.

ಜನರು ದೇವಸ್ಥಾನಕ್ಕೆ ಬಸ್‌ನಲ್ಲಿ ತುಂಬಿಕೊಂಡು ಬರಬಾರದು. ಸ್ವಂತ ಕಾರುಗಳಲ್ಲಿ ಬರಬಹುದು. ಕಾನೂನು ಪಾಲನೆ ಮಾಡಬೇಕು. ಪೊಲೀಸರು, ಆಸ್ಪತ್ರೆಗಳಿಗೆ ಒತ್ತಡ ಉಂಟಾಗುವಂತೆ ಮಾಡಬಾರದು ಎಂದರು.