ಸುಬ್ರಹ್ಮಣ್ಯ(ಜೂ.06): ಸೋಮವಾರದಿಂದ ರಾಜ್ಯದಾದ್ಯಂತ ದೇವಾಲಯಗಳು ಭಕ್ತರಿಗಾಗಿ ತೆರೆಯಲಿದೆ. ಹಾಗೆಯೇ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಗೆ ದೇವರ ದರ್ಶನಕ್ಕಾಗಿ ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹೊರಾಂಗಣದಲ್ಲಿ ಭಕ್ತರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪೇಂಟ್‌ನಿಂದ ಒಂದು ಮೀಟರ್‌ ಅಂತರದ ಚೌಕಟ್ಟುಗಳನ್ನೂ ರಚಿಸಲಾಗಿದೆ. ದೇವಸ್ಥಾನದ ಒಳಗೆ ಬರುವ ಎಲ್ಲಾ ಭಕ್ತರೂ ಕಡ್ಡಾಯವಾಗಿ ತಮ್ಮ ಕೈ-ಕಾಲುಗಳನ್ನು ಶುಚಿಗೊಳಿಸಿದ ಬಳಿಕ ದೇವಸ್ಥಾನದ ಮುಖ್ಯ ದ್ವಾರದ ಬಳಿ ಇಡಲಾಗುವ ಸ್ಯಾನಿಟೈಸರ್‌ ಬಳಸಬೇಕಿದೆ.

ಗ್ರೀನ್ ಝೋನ್ ಆಗಿದ್ದ ಉಡುಪಿಯಲ್ಲಿ ಮುಂದುವರಿದ ಕೊರೋನಾ ಅಟ್ಟಹಾಸ: ಒಂದೇ ದಿನ 204 ಸೋಂಕಿತರು

ಅಲ್ಲದೆ ಕ್ಷೇತ್ರದ ಒಳಗೆ ಪ್ರವೇಶಿಸುವ ಪ್ರತಿಯೊಬ್ಬರೂ ಮಾಸ್ಕ್ ಧರಿಸುವಂತೆಯೂ ಸೂಚಿಸಲಾಗಿದೆ. ಜೂ. 8ರಿಂದ ಕ್ಷೇತ್ರ ತೆರೆಯುವ ಹಿನ್ನೆಲೆಯಲ್ಲಿ ಶುಕ್ರವಾರದಿಂದಲೇ ಭಕ್ತಾದಿಗಳು ದೇವಸ್ಥಾನದ ಗೋಪುರದ ಬಳಿ ಬಂದು ದೇವರಿಗೆ ಪ್ರಾರ್ಥಿಸಲಾರಂಭಿಸಿದ್ದಾರೆ. ಧರ್ಮಸ್ಥಳಕ್ಕೆ ಬಂದಿರುವ ಭಕ್ತರು, ಸುಬ್ರಹ್ಮಣ್ಯಕ್ಕೂ ಬಂದು ಗೋಪುರದಿಂದಲೇ ದೇವರಿಗೆ ನಮಿಸಿ ಹೊರಡುತ್ತಿದ್ದಾರೆ. ಸೋಮವಾರದಿಂದ ಭಕ್ತರಿಗೆ ಸುಬ್ರಹ್ಮಣ್ಯನ ದರ್ಶನ ಭಾಗ್ಯ ಲಭಿಸಲಿದೆ.

ಕ್ಷೇತ್ರದ ಆದಿ ಸುಬ್ರಹ್ಮಣ್ಯದಲ್ಲೂ ಇದೇ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದ್ದು, ಅಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳವಂತೆ ನೋಡಿಕೊಳ್ಳಲಾಗುತ್ತದೆ. ಆದರೆ, ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಗೆ ತೀರ್ಥ ಪ್ರಸಾದಗಳನ್ನು ನೀಡುವ ವ್ಯವಸ್ಥೆಯನ್ನು ಕೈ ಬಿಡಲಾಗಿದೆ.

ರಾಜ್ಯದಲ್ಲಿ ಕೊರೋನಾ ಚಂಡಮಾರುತ; ಒಂದೇ ದಿನ 515 ಕೇಸ್‌!

ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಕ್ಷೇತ್ರದಲ್ಲಿ ನಡೆಯುವ ಯಾವ ಸೇವೆಗಳಿಗೂ ಅವಕಾಶ ನೀಡಲಾಗಿಲ್ಲ. ಕುಕ್ಕೆ ಸುಬ್ರಹ್ಮಣ್ಯ ಸರ್ಪ ಸಂಸ್ಕಾರ ಸೇವೆ ಹಾಗೂ ಆಶ್ಲೇಷ ಬಲಿ ಪೂಜೆಗೆ ಹೆಸರುವಾಸಿಯಾಗಿದ್ದು, ಈ ಸೇವೆಗಳೂ ನಡೆಯುವುದಿಲ್ಲ. ಅಲ್ಲದೆ ಛತ್ರ ವ್ಯವಸ್ಥೆಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ದೇವರ ದರ್ಶನ ಮಾಡಿ ತೆರಳಲು ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ.