ಬೆಂಗಳೂರು(ಜು.18): ಕೊರೋನಾ ಸೋಂಕು ತೀವ್ರಗೊಳ್ಳುತ್ತಿದ್ದಂತೆ ಆಸ್ಪತ್ರೆಗಳಲ್ಲಿ ಸಾಮಾನ್ಯ ರೋಗಿಗಳಿಗೂ ಚಿಕಿತ್ಸೆ ದೊರೆಯದಂತಾಗಿದ್ದು, ಶುಕ್ರವಾರ ಇಬ್ಬರು ತುಂಬು ಗರ್ಭಿಣಿಯರು ಹೆರಿಗೆ ನೋವಿನೊಂದಿಗೆ ಬರೋಬ್ಬರಿ 6ಕ್ಕೂ ಹೆಚ್ಚು ಆಸ್ಪತ್ರೆ ಸುತ್ತಿಡಾಡಿದ ಘಟನೆ ನಡೆದಿದೆ.

ಪಶ್ಚಿಮ ಬಂಗಾಳ ಮೂಲದ ಆನೇಕಲ್‌ ನಿವಾಸಿ ಗರ್ಭಿಣಿಗೆ ಶುಕ್ರವಾರ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಇದರಿಂದ ತಕ್ಷಣ ಗರ್ಭಿಣಿಯ ಪತಿ ಸುಭಂ ಅವರು ಆನೇಕಲ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಲು ಅಗತ್ಯ ಸೌಲಭ್ಯವಿಲ್ಲ ಎಂಬ ನೆಪವೊಡ್ಡಿ ತಕ್ಷಣ ವಾಣಿವಿಲಾಸ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದರು. ಆದರೆ, ವಾಣಿವಿಲಾಸ ಆಸ್ಪತ್ರೆಗೆ ಬಂದರೆ ಹಾಸಿಗೆ ಖಾಲಿ ಇಲ್ಲ. ಹೀಗಾಗಿ ಬೇರೆ ಕಡೆ ಹೋಗಿ ಎಂಬ ಸೂಚನೆ ಲಭಿಸಿತು.

ಕಾಂಗ್ರೆಸ್‌ ಮುಖಂಡನ ಹತ್ಯೆ ಕೇಸ್: ನಾಲ್ವರು ಆರೋಪಿಗಳ ಬಂಧನ

ಈ ವೇಳೆಗಾಗಲೇ ಹೆರಿಗೆ ನೋವು ತೀವ್ರಗೊಂಡಿದ್ದರೂ ವಿಧಿ ಇಲ್ಲದೆ ರಾಜೀವ್‌ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿಯೂ ಚಿಕಿತ್ಸೆಗೆ ನಿರಾಕರಿಸಲಾಯಿತು. ಬಳಿಕ ಎರಡು ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡಲು ಒಪ್ಪಿಲ್ಲ.

ಇದರಿಂದ ಮತ್ತೆ ವಿಕ್ಟೋರಿಯಾ ಆಸ್ಪತ್ರೆ ಬಳಿಗೆ ವಾಪಸಾದ ವ್ಯಕ್ತಿಯು ಪತ್ನಿಗೆ ಚಿಕಿತ್ಸೆ ನೀಡುವಂತೆ ಅಂಗಾಲಾಚಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಕೂಡಲೇ ಜಯನಗರ ಜನರಲ್‌ ಆಸ್ಪತ್ರೆಗೆ ಕಳುಹಿಸಿ ಅಲ್ಲಿನ ಆಸ್ಪತ್ರೆ ಸಿಬ್ಬಂದಿಗೆ ದಾಖಲಿಸಿಕೊಳ್ಳಲು ಸೂಚಿಸಿ ನೆರವು ನೀಡಿದ್ದಾರೆ. ಇದರಿಂದ ಆರು ಆಸ್ಪತ್ರೆಗಳನ್ನು ಅಲೆದ ಬಳಿಕ ಕೊನೆಗೂ ಚಿಕಿತ್ಸೆ ದೊರೆತಂತಾಗಿದೆ.

ಸಾವಿನಲ್ಲಿ ಮತ್ತೊಂದು ದಾಖಲೆ ಬರೆದ ರಾಜಧಾನಿ: ಕೊರೋನಾ ಅಟ್ಟಹಾಸಕ್ಕೆ 75 ಸಾವು!

ಈ ಬಗ್ಗೆ ‘ಕನ್ನಡಪ್ರಭ’ ಜೊತೆ ಮಾತನಾಡಿದ ಸುಭಂ, ಗರ್ಭಿಣಿ ಪತ್ನಿ ನೋವಿನಿಂದ ಬಳಲುತ್ತಿದ್ದರೂ ಹಲವು ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸಿದವು. ಜೀವಕ್ಕೆ ಹೆಚ್ಚು ಕಡಿಮೆಯಾದರೆ ಏನು ಗತಿ ಎಂದು ಏನಾದರೂ ಮಾಡಿ ಉಳಿಸಿಕೊಳ್ಳಲು ಪರದಾಡಿದ್ದೇನೆ. ಅಂತಿಮವಾಗಿ ಮಾಧ್ಯಮಗಳ ವರದಿಯಿಂದ ಎಚ್ಚೆತ್ತು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಭಾವುಕರಾದರು.

ದ್ವಿಚಕ್ರ ವಾಹನದಲ್ಲೇ ಆಸ್ಪತ್ರೆಗೆ ಓಡಾಟ!

ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಲು 27 ವರ್ಷದ ತುಂಬು ಗರ್ಭಿಣಿ ಪರದಾಡಿದ ಘಟನೆ ನಡೆದಿದೆ. ಹಲವು ಆಸ್ಪತ್ರೆಗಳಿಗೆ ಅಲೆದು ಕೊನೆಗೆ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಾಗಿ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಚಂದ್ರಲೇಔಟ್‌ ನಿವಾಸಿ ಕೌಸರ್‌ ಬಾನುವಿಗೆ ಬುಧವಾರ ಹೆರಿಗೆ ನೋವು ಕಾಣಿಸಿಕೊಂಡಿದೆ. ಕುಟುಂಬದ ಸದಸ್ಯರು ದ್ವಿಚಕ್ರ ವಾಹನದಲ್ಲೇ ಅನೇಕ ಆಸ್ಪತ್ರೆಗಳಿಗೆ ಎಡತಾಕಿದ್ದಾರೆ. ಗರ್ಭಿಣಿ ಕಣ್ಣೀರು ಸುರಿಸುತ್ತಿದ್ದರೂ ಯಾವ ಆಸ್ಪತ್ರೆಗಳು ದಾಖಲು ಮಾಡಿಕೊಂಡಿಲ್ಲ. ಕ್ವೀನ್ಸ್‌ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲೂ ದಾಖಲಿಸಿಕೊಂಡಿಲ್ಲ. ನಂತರ ಇನ್ನೊಂದು ಖಾಸಗಿ ಆಸ್ಪತ್ರೆಗೆ ಸಂಪರ್ಕಿಸಿದಾಗ ಸೋಂಕಿನ ಶಂಕೆಯಲ್ಲಿ ದಾಖಲಿಸಿಕೊಳ್ಳಲು .85 ಸಾವಿರ ಕೇಳಿದ್ದಾರೆ ಎನ್ನಲಾಗಿದೆ.

 

ಬಳಿಕ ಕೋರಮಂಗಲದ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿಯೂ ಬಿಬಿಎಂಪಿ ಪತ್ರ ಕೇಳಲಾಗಿದೆ. ನಂತರ 1912 ಸಹಾಯವಾಣಿಗೆ ಕರೆ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ಅಂತಿಮವಾಗಿ 4.30ರ ವೇಳೆಗೆ ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಿದ್ದು, ಗುರುವಾರ ಬೆಳಗ್ಗೆ 8.30ರ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.