ಬೆಂಗಳೂರು(ಜು.18): ರಾಜಧಾನಿಯಲ್ಲಿ ಕೊರೋನಾ ಸೋಂಕಿನ ಅಟ್ಟಹಾಸ ಎಲ್ಲೆ ಮೀರಿದ್ದು, ಕಳೆದ 24 (ಜು.16 ಸಂಜೆ 5ರಿಂದ ಜು.17 ಸಂಜೆ 5) ಗಂಟೆಯಲ್ಲಿ ಬರೋಬ್ಬರಿ 2,208 ಸೋಂಕು ಪ್ರಕರಣಗಳು ವರದಿಯಾಗಿವೆ. ಇದೇ ಅವಧಿಯಲ್ಲಿ 75 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಆರೋಗ್ಯ ಇಲಾಖೆ ಪ್ರಕಟಣೆ ಅನ್ವಯ ಶುಕ್ರವಾರದ ವರೆಗೆ ರಾಜಧಾನಿಯಲ್ಲಿ ಒಟ್ಟು 27,496 ಮಂದಿ ಸೋಂಕಿಗೆ ಒಳಗಾಗಿದ್ದು, 6,290 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕಾಂಗ್ರೆಸ್‌ ಮುಖಂಡನ ಹತ್ಯೆ ಕೇಸ್: ನಾಲ್ವರು ಆರೋಪಿಗಳ ಬಂಧನ

ಕಳೆದ 24 ತಾಸಿನಲ್ಲಿ 338 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಚೇತರಿಕೆ ಪ್ರಮಾಣ ಶೇ.22.88ರಷ್ಟಿದೆ. ಆದರೂ ನಗರದಲ್ಲಿ ಇನ್ನೂ 20,623 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ಈ ಅಂಕಿ-ಅಂಶಗಳ ಪ್ರಕಾರ ನಗರದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಅಪಾಯದ ಸೂಚನೆ ನೀಡಿದೆ.

ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ನಗರದಲ್ಲಿ ಸೋಂಕು ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಸೋಂಕು ನಿಯಂತ್ರಿಸಲು ಸಾಧ್ಯವಾಗದೇ ಇರುವುದು ವೈದ್ಯವಾಗುತ್ತಿದೆ. ಕಳೆದ ಮೂರು ದಿನಗಳಿಂದ ನಗರದಲ್ಲಿ ಲಾಕ್‌ಡೌನ್‌ ಜಾರಿ ಮಾಡಿದ್ದರೂ ಸೋಂಕಿನ ಸಂಖ್ಯೆ ಏರುಮುಖವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

333 ಮಂದಿ ಐಸಿಯು

ಇನ್ನು ನಗರದ 20,623 ಕೊರೋನಾ ಸೋಂಕು ಸಕ್ರಿಯ ಪ್ರಕರಣಗಳ ಪೈಕಿ 333 ಮಂದಿಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗುರುವಾರ 317 ಮಂದಿ ಐಸಿಯುನಲ್ಲಿ ಇದ್ದರೆ, ಶುಕ್ರವಾರ ಈ ಸಂಖ್ಯೆ 333ಕ್ಕೆ ಏರಿಕೆಯಾಗಿದೆ. ಅಂದರೆ, 24 ತಾಸಿನಲ್ಲಿ 16 ಮಂದಿ ಐಸಿಯುಗೆ ದಾಖಲಾಗಿದ್ದಾರೆ.