ಉಡುಪಿ(ಏ.22): ಉಡುಪಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಕೊರೋನಾ ಸೋಂಕಿತ ಗರ್ಭಿಣಿ ಮಹಿಳೆ ಗುಣಮುಖಳಾಗಿದ್ದು, ಈ ವಾರದೊಳಗೆ ಬಿಡುಗಡೆಯಾಗಲಿದ್ದಾರೆ.

ಕೊರೋನಾ ಹರಡುವುದನ್ನು ತಡೆಯುವುದಕ್ಕಾಗಿ ಉಡುಪಿಯಲ್ಲಿ ಹೊರ ಜಿಲ್ಲೆಯ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಜಿಲ್ಲಾಡಳಿತ ನಿರ್ಧರಿಸಿತ್ತು. ಆದರೆ ಉತ್ತರಕನ್ನಡ ಜಿಲ್ಲೆಯಲ್ಲಿ ಗರ್ಭಿಣಿ ಸೋಂಕಿತರಿಗೆ ಚಿಕಿತ್ಸೆ ನೀಡುವಂತಹ ವೈದ್ಯಕೀಯ ಸೌಲಭ್ಯಗಳು ಇಲ್ಲದಿರುವುದರಿಂದ, ಅಲ್ಲಿನ ಜಿಲ್ಲಾಧಿಕಾರಿ ಅವರ ಮನವಿಯಂತೆ, ಮಾನವೀಯತೆಯ ದೃಷ್ಟಿಯಲ್ಲಿ ಅವರನ್ನು ಉಡುಪಿಯ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಲಾಕ್‌ಡೌನ್‌: 'ರಂಜಾನ್‌, ಬಸವ ಜಯಂತಿಗೆ ಆಚರಣೆಗೆ ಅವಕಾಶವಿಲ್ಲ'

ಇದೀಗ ಅವರ ಗಂಟಲದ್ರವವನ್ನು ಮತ್ತೆ ಪರೀಕ್ಷೆಗೆ ಕಳಹಿಸಲಾಗಿದ್ದು, ಅದು ನೆಗೆಟಿವ್‌ ಬಂದಿದೆ. ಒಂದೆರಡು ದಿನಗಳಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಿ, ಅದೂ ನೆಗೆಟಿವ್‌ ಬಂದಲ್ಲಿ ಅವರನ್ನು ಮನೆಗೆ ಕಳಹಿಸಲಾಗುವುದು ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಮತ್ತೆ ಶಂಕಿತರು ಹೆಚ್ಚಳ:

ಜಿಲ್ಲೆಯಲ್ಲಿ ಕಳೆದ 24 ದಿನಗಳಿಂದ ಕೊರೋನಾ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ, ಕಳೆದ ನಾಲ್ಕು ದಿನಗಳಿಂದ ಶಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಆದರೆ, ಮಂಗಳವಾರ ಶಂಕಿತ ಕೊರೋನಾ ಶಂಕಿತರ ಸಂಖ್ಯೆ ಮತ್ತೆ ಹೆಚ್ಚಾಗಿದೆ.

ಕ್ಯಾನ್ಸರ್‌ ಆಸ್ಪತ್ರೆಗೆ ಕೊರೋನಾ ಭೀತಿ!

ಮಂಗಳವಾರ ಒಟ್ಟು 76 ಮಂದಿ ಶಂಕಿತರ ಗಂಟಲದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. ಅವರಲ್ಲಿ ಕೊರೋನಾ ರೋಗಿಗಳೊಂದಿಗೆ ಸಂಪರ್ಕದಲ್ಲಿದ್ದವರೇ 61 ಮಂದಿ ಇದ್ದಾರೆ. ಕೊರೋನಾ ಹಾಟ್‌ಸ್ಪಾಟ್‌ಗೆ ಹೋಗಿ ಬಂದ 2 ಮಂದಿ, ಕೊರೋನಾ ಸೋಂಕಿನ ಲಕ್ಷಣಗಳುಳ್ಳ 13 ಮಂದಿ ಸೇರಿದ್ದಾರೆ.

ಮಂಗಳವಾರ 2 ವರದಿಗಳು ಬಂದಿದ್ದು, ಅವು ನೆಗೆಟಿವ್‌ ಆಗಿವೆ. ಇನ್ನೂ 98 ಮಂದಿಯ ವರದಿಗಳು ಬರಬೇಕಾಗಿದೆ. ಮಂಗಳವಾರ 98 ಜನರನ್ನು ತಪಾಸಣೆಗೊಳಪಡಿಸಲಾಗಿದೆ. ಪ್ರಸ್ತುತ 45 ಮಂದಿ ಐಸೋಲೇಶನ್‌ ವಾರ್ಡ್‌ನಲ್ಲಿ ನಿಗಾದಲ್ಲಿದ್ದಾರೆ.

ಕ್ವಾರಂಟೈನ್‌ನಲ್ಲಿರುವವರು - 706

ಕಳುಹಿಸಲಾದ ಮಾದರಿಗಳು - 76

ಬಂದಿರುವ ವರದಿಗಳು - 02

ಬಾಕಿ ಇರುವ ವರದಿಗಳು - 98