Asianet Suvarna News Asianet Suvarna News

BMTCಯಲ್ಲಿ ಹಿಂದಿ ಭಾಷೆಗೆ ಆದ್ಯತೆ: ಕನ್ನಡಿಗರ ಆಕ್ರೋಷ

ಬಸ್‌ ಸಂಚಾರದ ಮಾಹಿತಿ ಫಲಕದಲ್ಲಿ ಹಿಂದಿ ಭಾಷೆಗೂ ಅವಕಾಶ| ಟೆಂಡರ್‌ನಲ್ಲಿ ಬಿಎಂಟಿಸಿ ಸೂಚನೆ| ತೀವ್ರ ವಿರೋಧ| ರಾಜ್ಯದಲ್ಲಿ ಕನ್ನಡ ಸಾರ್ವಭೌಮ| ದ್ವಿಭಾಷಾ ಸೂತ್ರ ಪಾಲಿಸಿ, ಹಿಂದಿ ಭಾಷೆಗೆ ಪ್ರಾಮುಖ್ಯತೆ ಬೇಕಿಲ್ಲ: ಹೋರಾಟಗಾರರು|

Preference for Hindi language in BMTC
Author
Bengaluru, First Published Feb 1, 2020, 8:36 AM IST

ಬೆಂಗಳೂರು(ಫೆ.01): ರಾಜಧಾನಿಯ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಹಿಂದಿ ಹೇರಿಕೆ ಗದ್ದಲ ತಣ್ಣಗಾದ ಬೆನ್ನಲ್ಲೇ ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ)ದಲ್ಲಿ ಸದ್ದಿಲ್ಲದೆ ಹಿಂದಿ ಭಾಷೆ ಆದ್ಯತೆ ನೀಡುತ್ತಿರುವುದು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಎಂಟಿಸಿಯು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್‌ ನಿಲ್ದಾಣಗಳಿಗೆ ಬಸ್‌ ಬರುವ ಹಾಗೂ ಹೊರಡುವ ಸಮಯ ಸೇರಿದಂತೆ ಬಸ್‌ ಸಂಚಾರದ ಬಗ್ಗೆ ಮಾಹಿತಿ ನೀಡುವ ಸಂಬಂಧ ಪ್ಯಾಸೆಂಜರ್‌ ಇನ್ಫರ್ಮೇಶನ್‌ ಸಿಸ್ಟಂ(ಪಿಐಎಸ್‌) ಪ್ರದರ್ಶನ ಫಲಕಗಳ ಅಳವಡಿಕೆ ನಿರ್ಧರಿಸಿದೆ. ಈ ಸಂಬಂಧ ಕರೆದಿರುವ ಟೆಂಡರ್‌ನಲ್ಲಿ ಈ ಪಿಐಎಸ್‌ ಪ್ರದರ್ಶನ ಫಲಕಗಳು ಕನ್ನಡ, ಇಂಗ್ಲಿಷ್‌ ಜತೆಗೆ ಹಿಂದಿ ಭಾಷೆಯಲ್ಲಿ ಮಾಹಿತಿ ಪ್ರದರ್ಶನಕ್ಕೆ ಸಹಕಾರಿಯಾಗಿರಬೇಕು ಎಂದು ಸೂಚಿಸಿದೆ. ಈ ಮೂಲಕ ಹಿಂದಿ ಭಾಷೆಗೆ ಮಣೆ ಹಾಕಲು ಮುಂದಾಗಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಜ್ಯದ ಸಂಸ್ಥೆಯಾದ ಬಿಎಂಟಿಸಿಯು ಕನ್ನಡ ಮತ್ತು ಇಂಗ್ಲಿಷ್‌ ದ್ವಿಭಾಷಾ ಸೂತ್ರ ಅಳವಡಿಸಿಕೊಳ್ಳಬೇಕೇ ಹೊರತು ತ್ರಿಭಾಷಾ ಸೂತ್ರ ಅಲ್ಲ. ಹೀಗಿದ್ದರೂ ಬಿಎಂಟಿಸಿ ಹಿಂದಿಯ ಹಿಂದೆ ಏಕೆ ಹೊರಟ್ಟಿದೆ ಎಂಬ ಪ್ರಶ್ನೆಗಳು ಎದ್ದಿವೆ. ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಬಿಎಂಟಿಸಿ ಯಾವುದೇ ಕಾರಣಕ್ಕೂ ಪಿಐಎಸ್‌ ಪ್ರದರ್ಶನ ಫಲಕಗಳಲ್ಲಿ ಹಿಂದಿಯಲ್ಲಿ ಮಾಹಿತಿ ನೀಡಬಾರದು. ಇದನ್ನು ಮೀರಿಯೂ ಹಿಂದಿ ಭಾಷೆ ಮೆರೆಸಲು ಮುಂದಾದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಕನ್ನಡಪರ ಹೋರಾಟಗಾರರು, ಸಾಹಿತಿಗಳು ಎಚ್ಚರಿಕೆ ನೀಡಿದ್ದಾರೆ.

ದ್ವಿಭಾಷ ನೀತಿ ಇರಲಿ:

ಈ ಹಿಂದೆ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಹಿಂದಿ ಹೇರಿಕೆಗೆ ಪ್ರಯತ್ನ ನಡೆದ್ದಿತ್ತು. ಇದರ ವಿರುದ್ಧ ತೀವ್ರ ಹೋರಾಟ ಸಹ ನಡೆದ್ದಿತ್ತು. ಬಿಎಂಟಿಸಿಯಲ್ಲಿ ಇಷ್ಟುದಿನ ಇಲ್ಲದ ಹಿಂದೆ ಪ್ರೇಮ ಈಗೇಕೆ ಬಂದಿತೋ ಗೊತ್ತಿಲ್ಲ. ಯಾವುದೇ ಕಾರಣಕ್ಕೂ ಹಿಂದಿ ಭಾಷೆಯಲ್ಲಿ ಮಾಹಿತಿ ನೀಡುವ ನಿರ್ಧಾರ ಕೈಬಿಡಬೇಕು. ಇಲ್ಲವಾದರೆ, ಬಿಎಂಟಿಸಿ ವಿರುದ್ಧ ಹೋರಾಟಕ್ಕೆ ಧುಮುಕುವುದು ನಿಶ್ಚಿತ ಎಂದು ಸಾಹಿತಿ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಹೇಳಿದರು.

ಸಾರಿಗೆ ಸಚಿವರಿಗೆ ನಾಗಾಭರಣ ಪತ್ರ

ಬಿಎಂಟಿಸಿಯ ಪಿಐಎಸ್‌ ಪ್ರದರ್ಶನ ಫಲಕಗಳಲ್ಲಿ ಹಿಂದಿ ಭಾಷೆಯಲ್ಲಿ ಮಾಹಿತಿ ಪ್ರದರ್ಶಿಸುವ ನಿರ್ಧಾರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದ್ವಿಭಾಷಾ ನೀತಿ ಅನ್ವಯ ಪ್ರದರ್ಶನ ಫಲಕಗಳನ್ನು ಅಳವಡಿಸಲು ಅಗತ್ಯ ಸೂಚನೆ ನೀಡುವಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹಾಗೂ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ಗುಪ್ತಾ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಆಡಳಿತದ ಎಲ್ಲ ಹಂತದಲ್ಲೂ ಕನ್ನಡ ಭಾಷೆ ಅನುಷ್ಠಾನ ಸರ್ಕಾರದ ಆಶಯ ಹಾಗೂ ನಿಲುವು. ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಆಡಳಿತ ನಡೆಸುವುದು ಸರ್ಕಾರದ ಆಶಯ. ಇದು ಭಾಷಾ ನೀತಿಯೂ ಕೂಡ ಆಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ರಾಜ್ಯದ ಸರ್ಕಾರದ ನಿಗಮವಾಗಿದ್ದು, ಇಲ್ಲಿಯೂ ಕೂಡ ಆಡಳಿತದ ಎಲ್ಲ ಹಂತದಲ್ಲೂ ಸಂಪೂರ್ಣವಾಗಿ ಕನ್ನಡದಲ್ಲೇ ವ್ಯವಹರಿಸಬೇಕಾಗುತ್ತದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಪಕ್ಕದ ರಾಜ್ಯಗಳಾದ ತಮಿಳು, ತೆಲುಗು, ಮಾರಾಠಿ, ಉರ್ದು ಭಾಷಿಕರು ಹಿಂದಿ ಭಾಷಿಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಬಿಎಂಟಿಸಿ ಸೇವೆಯನ್ನು ಹಿಂದಿ ಭಾಷಿಕರಿಗಿಂತ ಇತರೆ ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಹಿಂದಿ ಭಾಷೆಯಂತೆ ರಾಷ್ಟ್ರದ 21 ಭಾಷೆಗಳು ರಾಷ್ಟ್ರೀಯ ಭಾಷೆಗಳಾಗಿವೆ. ಎಲ್ಲ ಭಾಷೆಗಳಲ್ಲೂ ಪ್ರದರ್ಶನ ಫಲಕಗಳನ್ನು ಅಳವಡಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ದ್ವಿಭಾಷಾ ಸೂತ್ರದನ್ವಯ ಫಲಕಗಳನ್ನು ಅಳವಡಿಸುವುದು ರಾಜ್ಯ ಸರ್ಕಾರದ ಭಾಷಾ ನೀತಿ. ಕೂಡಲೇ ತನ್ನ ನಿರ್ಧಾರವನ್ನು ಬಿಎಂಟಿಸಿ ಬದಲಿಸಬೇಕು ಎಂದು ಆಗ್ರಹಿಸಿದ್ದಾರೆ.
 

Follow Us:
Download App:
  • android
  • ios